ವೀರೇಶ ಸಾವಿನ ಪ್ರಕರಣಕ್ಕೆ 'ರಾಜಕೀಯ' ಟ್ವಿಸ್ಟ್ * ಸಾಮಾನ್ಯರಂತೆ ಠಾಣೆಯಲ್ಲಿ ಓಡಾಡಿದ ವಿಡಿಯೋ ವೈರಲ್ * ಅಧಿಕಾರಿಗಳ ಅಮಾನತು ಹಿಂದೆ ಕಾಣದ ಕೈಗಳ ಶಂಕೆ ?

06RACHU07 (2)
raichur
Published on

ರಾಯಚೂರು ಪೊಲೀಸರ ಥಳಿತದಿಂದಲೇ ನಗರದ ಈಶ್ವರ ಬಡಾವಣೆಯ ವೀರೇಶ ಸಾವಿಗೀಡಾಗಿದ್ದಾನೆಂಬ ಆರೋಪದಡಿ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಒಟ್ಟಾರೆ ಪ್ರಕರಣಕ್ಕೆ ಹೊಸ ತಿರುವು ಸಿಗುವ ಅಂಶ ಹೊರಬಿದ್ದಿದೆ. ವೀರೇಶನಿಗೆ ಪೊಲೀಸರು ಥಳಿಸಿಲ್ಲ ಎಂಬುದಕ್ಕೆ ಇಂಬು ನೀಡುವಂಥ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.

ಸಿಐಡಿ ಅಧಿಕಾರಿಗಳು ಅತ್ತ ತನಿಖೆಗೆ ತೊಡಗಿರುವಾಗಲೇ ಪಶ್ಚಿಮ ಪೊಲೀಸ್ ಠಾಣೆ ಸಿಸಿಟಿವಿ ದೃಶ್ಯ ಬಯಲಾಗಿದೆ. ವೈರಲ್ ಆದ ದೃಶ್ಯದಲ್ಲಿ ಎಲ್ಲಿಯೂ ವೀರೇಶಗೆ ಥಳಿಸಿದ್ದು ದೃಢಪಡಿಸುವ ಚಿತ್ರಗಳಿಲ್ಲ. ಇದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಹಣಿಯಲು ರಾಜಕೀಯ ನಾಯಕರು ಮಾಡಿದ ತಂತ್ರವೇ ಎಂಬ ಗುಮಾನಿ ಮೂಡಲು ಕಾರಣವಾಗಿದೆ.

ಘಟನೆ ಹಿನ್ನೆಲೆ-

ಕೌಟುಂಬಿಕ ಕಲಹದಿಂದ ವೀರೇಶ ವಿರುದ್ಧ ಪತ್ನಿ ನರಸಮ್ಮ ಮಾ.28 ರಂದು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ವೀರೇಶನನ್ನು ಠಾಣೆಗೆ ಕರೆಸಿಯಿಸಿ ಬುದ್ಧಿ ಹೇಳುವ ಕೆಲಸ ಪೊಲೀಸ್ ಅಧಿಕಾರಿಗಳು ಮಾಡಿದ್ದರು. ಆನಂತರ ಪತ್ನಿ ನರಸಮ್ಮ ತವರು ಮನೆಗೆ ತೆರಳಿದ ವೀರೇಶ, ನಾವೇ ಪರಿಹರಿಸಿಕೊಳ್ಳಬಹುದಿತ್ತಲ್ಲ, ದೂರು ಏಕೆ ನೀಡಿದೆ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ.ಈ ಕುರಿತಾಗಿ ಮಾ.30ರಂದು ನರಸಮ್ಮ ಕಡೆಯವರು ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ವೀರೇಶನನ್ನು ಠಾಣೆಗೆ ಕರೆತಂದು ವಿಚಾರಿಸಿ ಕಳುಹಿಸಿದ್ದರು. ಅದಾದ ಮೇಲೆ‌ ವೀರೇಶ ಅನಾರೋಗ್ಯಕ್ಕೀಡಾಗಿ ರಿಮ್ಸ್ ಆಸ್ಪತ್ರೆ ಬಳಿ ಸಾವಿಗೀಡಾಗಿದ್ದ. ಸಾವಿನಿಂದ ಆಕ್ರೋಶಗೊಂಡ ಕುಟುಂಬದವರು ಹೋರಾಟ ಮಾಡಿದ್ದರು.\

ಪೊಲೀಸರು ಥಳಿಸಿದ್ದರಿಂದಲೇ ವೀರೇಶನ ಸಾವಾಗಿದೆ ಎಂದು ಮೃತನ ಸಹೋದರಿ ಜ್ಯೋತಿ ಅಂದೇ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈನಂತರ ಸಿಪಿಐ ನಾಗರಾಜ್ ಮೇಕಾ ಮತ್ತು ಪಿಎಸ್‌ಐ ಮಂಜುನಾಥ ಅವರೇ ವೀರೇಶನ ಸಾವಿಗೆ ಕಾರಣವೆಂದು ಆರೋಪಿಸಿದ್ದರಿಂದ ಮರುದಿನವೇ ಪಿಎಸ್‌ಐ-ಸಿಪಿಐ ಅವರನ್ನು ಅಮಾನತು ಮಾಡಲಾಗಿತ್ತು. ಪ್ರಕರಣದ ಗಂಭೀರತೆಯ ಕಾರಣಕ್ಕೆ ತನಿಖೆ ಸಿಐಡಿಗೆ ವಹಿಸಲಾಯಿತು. ತನಿಖೆ ನಡೆದಿರುವಾಗಲೇ ಮಾ.30 ರಂದು ಪಶ್ಚಿಮ ಠಾಣೆಯಲ್ಲಿ ಸಾಮಾನ್ಯರಂತೆ ವೀರೇಶ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

== ಸಿಸಿಟಿವಿ ದೃಶ್ಯದಲ್ಲಿ ಏನಿದೆ ? ==

ಮಾ.30 ರಂದು ಪಶ್ಚಿಮ ಠಾಣೆಗೆ ವೀರೇಶನನ್ನು ಪೊಲೀಸರು ಕರೆತಂದು ಠಾಣೆಯಲ್ಲಿ ಕೂರಿಸಿದ್ದರು. ಅಲ್ಲಿಗೆ ಬಂದಿದ್ದ ತನ್ನ ಅತ್ತೆ ಜತೆ ವೀರೇಶ ಪದೇಪದೆ ಜಗಳವಾಡುತ್ತಿದ್ದ. ಅಲ್ಲಿರುವ ಪೇದೆಯೊಬ್ಬರು ವೀರೇಶನನ್ನು ಬೈದು, ಮೂಲೆಯಲ್ಲಿ ಕೂರಿಸಿದ್ದರು. ಬಳಿಕ ಪಿಎಸ್‌ಐ ಮಂಜುನಾಥ ಠಾಣೆಗೆ ಬಂದು ಕೆಲವೇ ಕ್ಷಣಗಳವರೆಗೆ ವೀರೇಶನ ಜತೆ ಮಾತನಾಡಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಠಾಣೆಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ವೀರೇಶನನ್ನು ಹೊರಗಡೆ ಕಳುಹಿಸಲಾಗಿದೆ.

ಹೊರಗಡೆ ಸಾಮಾನ್ಯರಂತೆ ಗಂಟೆಗಳ ಕಾಲ ಓಡಾಡಿದ ವೀರೇಶ, ಅಲ್ಲಿದ್ದ ಮಹಿಳಾ ಉದ್ಯೋಗಿ ಕೈಗೆ ಆಗಿದ್ದ ಗಾಯಕ್ಕೆ ತಾನೇ ಬ್ಯಾಂಡೇಜ್ ತಂದು ಹಚ್ಚಿದ್ದಾನೆ. ಠಾಣೆಯ ಬಹುತೇಕ ಸಿಬ್ಬಂದಿ ಆತನಿಗೆ ಪರಿಚಯಸ್ಥರಿದ್ದಂತೆಯೇ ಸಿಸಿಟಿವಿಯಲ್ಲಿ ದೃಶ್ಯಾವಳಿಯಿದೆ. ಇಷ್ಟೆಲ್ಲ ಪುರಾವೆಗಳ ಹೊರತಾಗಿಯೂ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳ ಅಮಾನತಿಗೆ ತರಾತುರಿ ತೋರಿದ್ದರ ಹಿಂದೆ ರಾಜಕೀಯದ ಕೈವಾಡದ ಗುಮಾನಿ ಎದ್ದಿದೆ.

ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರ ನಡುವಿನ ಸಂಘರ್ಷಕ್ಕೆ ಇಬ್ಬರು ಅಧಿಕಾರಿಗಳ ತಲೆದಂಡವಾಗಿದೆ ಎಂಬ ಮಾತು ಚರ್ಚೆಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net