ಘೋಷಣೆಯಾಗದ ಟಿಕೆಟ್, ಆಕಾಂಕ್ಷಿತರಿಗೆ ಇಕ್ಕಟ್ಟು: ಇನ್ನೂ ಬಹಿರಂಗಗೊಳ್ಳದ ಕೈ, ಕಮಲದ ಪಟ್ಟಿ

Mandya Dist Map (1)
Published on

ಮಂಡ್ಯ: ಬಿಸಿಲಿನ ತಾಪದಂತೆ ವಿಧಾನಸಭಾ ಚುನಾವಣಾ ಕಾವು ಏರುತ್ತಿದೆ. ಇನ್ನು ಅಖಾಡದ ವೇಳಾಪಟ್ಟಿ ಘೋಷಣೆಯಾದರೂ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಏಳು ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳುಗಳು ಯಾರೆನ್ನುವ ಮಾಹಿತಿ ಹೊರಬಿದ್ದಿಲ್ಲ. ಇದು ಆಕಾಂಕ್ಷಿತರ ತಳಮಳ ಹೆಚ್ಚಿಸಿದೆ.

ಜಿಲ್ಲೆಯ ಏಳು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇತ್ತ ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳಷ್ಟೇ ಉಳಿದಿದೆ. ಆದಾಗ್ಯೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿಲ್ಲ. ಇತ್ತ ಸ್ಪರ್ಧಾಕಾಂಕ್ಷಿಗಳು ತಮಗೆ ಅವಕಾಶ ಸಿಗಲಿದೆ ಎನ್ನುವ ಆಶಾಭಾವನೆಯಲ್ಲಿ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಆದರೂ ಒಳಗೊಳಗೆ ಆತಂಕವಂತೂ ಇದೆ. ಇನ್ನೊಂದೆಡೆ ಸಾಮಾಜಿಕ ಚಟುವಟಿಕೆ ಹೆಸರಿನಲ್ಲಿ ಈಗಾಗಲೇ ಕೋಟ್ಯಂತರ ರೂ ಖರ್ಚು ಮಾಡಿ ಇದೀಗ ಅವಕಾಶ ಸಿಗುತ್ತದೆಯೋ, ಇಲ್ಲವೋ ಎನ್ನುವ ಭಯವೂ ಕಾಡುವಂತಾಗಿದೆ. ಅಂತೆಯೇ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್ ಹೊರಗೆ ಬಂದ ನಂತರ ಅಸಮಾಧಾನ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅತೃಪ್ತಿರಿಗೆ ಗಾಳ ಹಾಕಲು ವಿಪಕ್ಷಗಳು ಸಿದ್ಧಗೊಂಡಿವೆ. ಈ ನಡುವೆ ಪಕ್ಷಾಂತರ ಪರ್ವವೂ ಜೋರಾಗಿಯೇ ನಡೆಯುತ್ತಿದ್ದು, ಪಕ್ಷ ಬಿಟ್ಟು ಬಂದವರಿಗೆ ರಾಜಾತಿಥ್ಯ ಸಿಗುತ್ತಿದೆಯಾದರೂ, ಅದು ಎಷ್ಟು ದಿನ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಕಮಲ ಮುಡಿಯುವವರ‌್ಯಾರು?: ಜಿಲ್ಲಾ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದಿನ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಯಲು ಹೆಚ್ಚಿನ ಜನರು ಆಸಕ್ತಿ ತೋರುತ್ತಿರಲಿಲ್ಲ. ಒಂದು ವೇಳೆ ಸ್ಪರ್ಧಿಸಿದರೂ ಠೇವಣಿ ಪಡೆದುಕೊಳ್ಳಲಾಗದೇ ಹೀನಾಯ ಸೋಲು ಕಂಡಿರುವ ಉದಾಹರಣೆ ಸಾಕಷ್ಟಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಕಮಲ ಪಾಳಯ ಸಧೃಡವಾಗಿದೆ. ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಇದಾದ ನಂತರ ಪಕ್ಷದ ಬಲವರ್ಧನೆಯೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಾರ್ಗೆಟ್ ಜಿಲ್ಲೆಗಳಲ್ಲಿ ಸಕ್ಕರೆನಾಡು ಕೂಡ ಸೇರಿಕೊಂಡಿದೆ. ಇತ್ತ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿತರ ಸಂಖ್ಯೆಯೂ ಕಡಿಮೆ ಏನಿಲ್ಲ. ನಾಯಕರ ಮೂಲಕ ಬಿ ಫಾರ್ಮ್‌ಗಾಗಿ ಒತ್ತಡ ಹಾಕಿಸುತ್ತಿರುವುದು ಇದೆ. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಸಿ.ಪಿ.ಉಮೇಶ್ ಜಿಲ್ಲಾಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಪಕ್ಷದ ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವಕರನ್ನು ಸಂಘಟಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಹಾಗೂ ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ನೀಡಿದ್ದಾರೆ.

ಅತ್ತ ಕಾಂಗ್ರೆಸ್ ಸೇರಲು ಸಿದ್ಧವಾಗಿ ಯೂಟರ್ನ್ ಹೊಡೆದ ಕೆ.ಸಿ.ನಾರಾಯಣಗೌಡ ಚುನಾವಣೆ ನೇತೃತ್ವ ವಹಿಸಿಕೊಂಡು ಹೆಚ್ಚಿನ ಸ್ಥಾನ ಗೆಲ್ಲಿಸಿಕೊಳ್ಳುವ ಭರವಸೆಯನ್ನು ಹೈಕಮಾಂಡ್‌ಗೆ ಕೊಟ್ಟು ಬಂದಿದ್ದಾರಂತೆ. ಇನ್ನು ಕೆ.ಆರ್.ಪೇಟೆಯಿಂದ ಕೆಸಿಎನ್, ಮಂಡ್ಯದಿಂದ ಅಶೋಕ್ ಜಯರಾಂ, ಶ್ರೀರಂಗಪಟ್ಟಣದಿಂದ ಇಂಡುವಾಳು ಸಚ್ಚಿದಾನಂದ, ಮಳವಳ್ಳಿಯಿಂದ ಮುನಿರಾಜು, ಮದ್ದೂರಿನಿಂದ ಸ್ವಾಮಿ ಮತ್ತು ಮೇಲುಕೋಟೆಯಿಂದ ಡಾ.ಇಂದ್ರೇಶ್‌ಗೆ ಅವಕಾಶ ಸಿಗುವುದು ಸದ್ಯಕ್ಕೆ ಬಹುತೇಕ ಖಚಿತವಾಗಿದೆ. ಆದರೂ ಬದಲಾದ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾದರೂ ಆಶ್ವರ್ಯಪಡಬೇಕಿಲ್ಲ.

ಇನ್ನು ನಾಗಮಂಗಲ ಕ್ಷೇತ್ರದಲ್ಲಿ ಕಳೆಗುಂದಿದ್ದ ಬಿಜೆಪಿಯನ್ನು ಸಂಘಟಿಸುವುದರಲ್ಲಿ ಪ್ರಮುಖವಾಗಿರುವ ಫೈಟರ್ ರವಿ ಹೆಸರು ಸ್ಪರ್ಧಾಕಾಂಕ್ಷಿತರ ಪಟ್ಟಿಯಲ್ಲಿದೆ. ಈ ನಡುವೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದು, ಬಿಜೆಪಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಒಬ್ಬರಿಗೆ ಅವಕಾಶ ಕೊಟ್ಟರೆ ಮತ್ತೊಬ್ಬರ ನಡೆ ಏನೆಂಬುದು ನಿಗೂಢವಾಗಿದೆ. ಆದ್ದರಿಂದ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಬಗೆಹರಿಯದ ‘ಕೈ’ ಆಂತರಿಕ ಗೊಂದಲ: ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ನಾಗಮಂಗಲ, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಆದರೆ ಉಳಿದ ಕ್ಷೇತ್ರದಲ್ಲಿರುವ ಗೊಂದಲವನ್ನು ಮಾತ್ರ ಬಗೆಹರಿದಿಲ್ಲ. ಈ ಬಗ್ಗೆ ಆಕಾಂಕ್ಷಿತರಲ್ಲಿ ಅಸಮಾಧಾನ ಹೆಚ್ಚಾಗಿದೆ. ನಾಯಕರು ತಮ್ಮ ಕ್ಷೇತ್ರದ ಬಗ್ಗೆ ತೋರಿಸಿಕೊಂಡಿರುವಷ್ಟು ಕಾಳಜಿಯನ್ನು ಉಳಿದ ಕಡೆಯೂ ಮಾಡಬೇಕಿತ್ತು. ತಡವಾದಷ್ಟು ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಹೇಗಿದ್ದರೂ ಘೋಷಣೆ ಮಾಡುವುದರಿಂದ ಬೇಗವಾದರೆ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

ಕಾಂಗ್ರೆಸ್ ಬಿ ಫಾರ್ಮ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿರುವ ಮಂಡ್ಯ ಕ್ಷೇತ್ರದಲ್ಲಿ ದಿನಕ್ಕೊಂದು ರೀತಿ ಬೆಳವಣಿಗೆ ನಡೆಯುತ್ತಿದೆ. ರೇಸ್‌ನಲ್ಲಿ ರವಿಕುಮಾರ್ ಗಣಿಗ ಪರ ಬ್ಯಾಟಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಡಾ.ಕೃಷ್ಣ ಹೆಸರು ಮುನ್ನಲೆಗೆ ಬಂದಿದ್ದು, ಈ ಸಮಯದಲ್ಲಿಯೇ ಇತ್ತೀಚೆಗೆ ನಾಗಮಂಗಲಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿದ ವೇಳೆ ಭಾಗವಹಿಸಿದ್ದ ಡಾ.ಕೃಷ್ಣ ಅಂದಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇಷ್ಟೇ ಆಗಿದ್ದರೆ ಚರ್ಚೆ ನಡೆಯುತ್ತಿರಲಿಲ್ಲ. ಆದರೆ ‘ಕಾಂಗ್ರೆಸ್ ಅಭ್ಯರ್ಥಿ’ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದು ಉಳಿದ ಸ್ಪರ್ಧಾಕಾಂಕ್ಷಿಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು. ಮಾತ್ರವಲ್ಲದೆ ಕೃಷ್ಣಗೆ ಅವಕಾಶ ಕೊಟ್ಟರೆ ಕ್ಷೇತ್ರದ ಚಿತ್ರಣ ಬದಲಾಗುವುದರ ಜತೆಗೆ ದೊಡ್ಡಮಟ್ಟದ ವಿರೋಧ ಎದುರಿಸಬೇಕಾದ ಅನಿವಾರ್ಯತೆ ನಾಯಕರಿಗೆ ಬರಲಿದೆ. ಜತೆಗೆ ಸ್ಪರ್ಧಾಕಾಂಕ್ಷಿತರು ಬೇರೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರು ಆಶ್ಚರ್ಯಪಡಬೇಕಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಕೆ.ಆರ್.ಪೇಟೆ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇತ್ತೀಚೆಗೆ ಪಕ್ಷ ಸೇರಿದ ಬಿ.ಎಲ್.ದೇವರಾಜು ಅವರಿಗೆ ಬಿ ಫಾರ್ಮ್ ಕೊಟ್ಟರೆ ಉಳಿದವರು ಬಂಡಾಯ ಸಾರುವುದರಲ್ಲಿ ಅನುಮಾನವಿಲ್ಲ. ಮದ್ದೂರಿನಲ್ಲಿ ದೊಡ್ಡ ಮಟ್ಟದ ವಿರೋಧ ಎದುರಾಗದಿದ್ದರೂ ಅತೃಪ್ತಿ ಉಂಟಾಗುವುದರಲ್ಲಿ ಸಂಶಯವಿಲ್ಲ. ಮೇಲುಕೋಟೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲವೆಂದು ಪರೋಕ್ಷವಾಗಿ ಘೋಷಣೆ ಮಾಡಿರುವುದರಿಂದ ಬಂಡಾಯದ ಮಾತೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net