

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಹಲ್ಗಾಮ್ನಲ್ಲಿ ಅಮಾಯಕ ಜನರು ಉಗ್ರರ ಗುಂಡಿಗೆ ಬಲಿಯಾಗಿರುವ ನೋವಿನ ಘಳಿಗೆಯಲ್ಲಿ ಕೆಲವರು ತಮ್ಮ ರಾಜಕೀಯ ಲಾಭಕ್ಕೆ ದಾಳಿಯನ್ನು ಸಮರ್ಥಿಸುವ ಅಥವಾ ದಾಳಿಕೋರರ ಅಜೆಂಡಾ ಮರೆಮಾಚುವಂತಹ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದು ಕೀಳುಮಟ್ಟದ ರಾಜಕೀಯ ಮಾಡುವ ಸಮಯವಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ದೇಶದ ಮೇಲೆ ಬರುವ ಬಾಹ್ಯ ಬೆದರಿಕೆಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾದ ಸಮಯ. ಸಂತ್ರಸ್ತರಿಗೆ, ಅವರ ಕುಟುಂಬಸ್ಥರಿಗೂ ನ್ಯಾಯ ಸಿಗಲೇಬೇಕಿದೆ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಸಮರ್ಥಿಸುವ, ಪಾಕ್ ಪ್ರೇಮ ತೋರುವ ದೇಶದ್ರೋಹಿ ಧ್ವನಿಗಳನ್ನೂ ನಾವು ಮಟ್ಟಹಾಕಬೇಕಿದೆ. ದೇಶದ ಹೊರಗಿನ ಶತ್ರುಗಳಿಗಿಂತ, ನಮ್ಮ ನಡುವೆ ಇರುವ ಇಂತಹ ದ್ರೋಹಿಗಳ ವಿರುದ್ಧ ಪ್ರತಿ ರಾಜ್ಯ ಸರ್ಕಾರ ತಕ್ಷಣವೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಈ ಸಮಯದಲ್ಲಾದರೂ ನೀಚ ರಾಜಕಾರಣ ಮಾಡುವುದನ್ನು ಬಿಟ್ಟು, ದೇಶದ ಪರ ನಿಲ್ಲಿ. ರಾಜಕೀಯ ಲಾಭಕ್ಕಾಗಿ ತಾಯ್ನಾಡಿಗೆ ದ್ರೋಹ ಬಗೆಯದಿರಿ ಎಂದು ಎಚ್ಚರಿಸಿದ್ದಾರೆ.