ದರ್ಶನ್, ಮಧು ಸ್ಪರ್ಧೆ ಅಧಿಕೃತ: ಸರ್ವೋದಯ ಕರ್ನಾಟಕ ಪಕ್ಷದಿಂದ ಅಖಾಡಕ್ಕೆ

23_01_Mdy_01(Raytha Story)
Published on

ಮಂಡ್ಯ: ಪ್ರಮುಖ ಮೂರು ರಾಜಕೀಯ ಪಕ್ಷಗಳ ನಡುವೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸರ್ವೋದಯ ಕರ್ನಾಟಕ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ನಿರೀಕ್ಷೆಯಂತೆ ಪಾಂಡವಪುರ ಕ್ಷೇತ್ರದಿಂದ ದರ್ಶನ್ ಪುಟ್ಟಣಯ್ಯ ಹಾಗೂ ಮಂಡ್ಯದಿಂದ ಎಸ್.ಸಿ.ಮಧುಚಂದನ್‌ರನ್ನು ಅಧಿಕೃತಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಮಟ್ಟದ ಸಭೆಯಲ್ಲಿ ಮೊದಲ ಹಂತವಾಗಿ ಜಿಲ್ಲೆಯ ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರೊಂದಿಗೆ ರಾಜಕೀಯ ಚಟುವಟಿಕೆ ಇನ್ನಷ್ಟು ಬಿರುಸು ಪಡೆದುಕೊಳ್ಳಲಿದೆ. ರೈತ ಪರ ಹೋರಾಟದಲ್ಲಿ ಮುಂಚೂಣಿ ಯುವ ನಾಯಕರಾಗಿರುವ ಇಬ್ಬರ ಮೇಲೆ ಪಕ್ಷ ಹೆಚ್ಚಿನ ವಿಶ್ವಾಸ ಹೊಂದಿದೆ. ಇತ್ತ ಕ್ಷೇತ್ರದಲ್ಲಿಯೂ ತಮ್ಮ ವರ್ಚಸ್ಸು ಹೊಂದಿದ್ದು, ಎದುರಾಳಿಗಳಿಗೆ ಪೈಪೋಟಿ ಕೊಡುವ ಮಾತನ್ನು ತಳ್ಳಿಹಾಕುವಂತಿಲ್ಲ.

ರೈತ ಸಂಘದ ಯುವನಾಯಕರಾಗಿರುವ ದರ್ಶನ್ ಪುಟ್ಟಣಯ್ಯ ಮತ್ತು ಎಸ್.ಸಿ.ಮಧುಚಂದನ್ ಹೋರಾಟದ ಜತೆಗೆ ಇಂದಿನ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಯ ಅವಶ್ಯಕತೆ ಎಷ್ಟಿದೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಮುಖವಾಗಿ ರೈತ ಸಂಘದ ಹಿರಿಯರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಇವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆದ ಹೋರಾಟ ಯುವಕರನ್ನು ಸೆಳೆಯುವಂತೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಕೆಆರ್‌ಎಸ್ ಡ್ಯಾಂ ಸುತ್ತ ಗಣಿಗಾರಿಕೆ ನಿಷೇಧಿಸುವ ಸಂಬಂಧ ಟ್ರಯಲ್ ಬ್ಲಾಸ್ಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಬ್ಲಾಸ್ಟ್ ಮಾಡಲು ಅವಕಾಶ ನೀಡುವುದಿಲ್ಲ. ಗಣಿಗಾರಿಕೆ ಶಾಶ್ವತವಾಗಿ ನಿಲ್ಲಿಸಬೇಕೆನ್ನುವ ಆಗ್ರಹದೊಡನೆ ನಡೆದಿದ್ದ ಹೋರಾಟ ಅದ್ಭುತ ಯಶಸ್ಸು ಕಂಡಿತ್ತು.

ಇದಲ್ಲದೆ ಇಡೀ ರೈತ ಸಂಕುಲಕ್ಕೆ ಅನುಕೂಲವಾಗುವಂತೆ ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ದರ ನಿಗದಿಪಡಿಸುವ ಸಂಬಂಧ ನಡೆಸುತ್ತಿರುವ ಹೋರಾಟ 75ನೇ ದಿನ ಪೂರೈಸಿ ಮುನ್ನಡೆಯುತ್ತಿದೆ. ಈ ಹೋರಾಟಕ್ಕೆ ಹಲವು ಸಂಘಟನೆಗಳು, ಗ್ರಾಮೀಣರು ಭಾಗವಹಿಸಿ ಬೆಂಬಲ ನೀಡಿದ್ದರು. ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ರೈತ ಸಂಘದ ಘಟಕ ಪ್ರಾರಂಭವಾಗುತ್ತಿದೆ. ಯುವಕರು, ಮಹಿಳೆಯರು ಹಸಿರು ಸೇನೆ ಸೇರುತ್ತಿದ್ದಾರೆ. ರಾಜಕೀಯ ಪಕ್ಷಗಳು ರೈತರನ್ನು ಚುನಾವಣೆಗಷ್ಟೇ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟಾರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ರೈತ ಸಂಘದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ಹುರುಪಿನೊಂದಿಗೆ ಚುನಾವಣಾ ಅಖಾಡಕ್ಕಿಳಿಯಲು ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಸರ್ವೋದಯ ಕರ್ನಾಟಕ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ರೈತ ಸಂಘದ ನಾಯಕರು ಸಜ್ಜಾಗಿದ್ದಾರೆ.

ದರ್ಶನ್ ಮೇಲೆ ಅನುಕಂಪ: ರೈತ ಸಂಘದ ನಾಯಕರು ಹಾಗೂ ಎರಡು ಬಾರಿ ಶಾಸಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. ಇವರ ನಿಧನ ನಂತರ ನಡೆದ ಚುನಾವಣೆಯಲ್ಲಿ ರೈತ ಸಂಘದಿಂದ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆ ಮಾಡಿದರೂ ಗೆಲುವು ಸಿಗಲಿಲ್ಲ. ಇದಾದ ಬಳಿಕ ದರ್ಶನ್ ಕೂಡ ಅಮೆರಿಕಾದಲ್ಲಿ ಕಂಪನಿ ನೋಡಿಕೊಳ್ಳುವುದರ ಜತೆಗೆ ಕ್ಷೇತ್ರದಲ್ಲಿಯೂ ಒಂದಷ್ಟು ಚಟುವಟಿಕೆ ಮಾಡುತ್ತಿದ್ದರು. ಪರಿಣಾಮ ಕ್ಷೇತ್ರದಲ್ಲಿ ರೈತ ಸಂಘದ ವರ್ಚಸ್ಸು ಕ್ಷೀಣಿಸಲಾರಂಭಿಸಿತು. ಆದರೆ ಇದೀಗ ಅಮೆರಿಕಾದ ಕಂಪನಿಯನ್ನು ಮಾರಾಟ ಮಾಡಿ ಕ್ಷೇತ್ರಕ್ಕೆ ವಾಪಾಸಾಗಿದ್ದು, ಜನರು ಅಭೂತಪೂರ್ವ ಸ್ವಾಗತ ನೀಡಿದ್ದರು. ಇದು ರೈತ ಸಂಘದ ಚೈತನ್ಯ ಹೆಚ್ಚಿಸಿದೆ.

ಜಿಲ್ಲೆಯ ಮಟ್ಟಿಗೆ ನೋಡುವುದಾದರೆ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ರೈತ ಸಂಘ ತುಂಬ ಪ್ರಬಲ. ಹಲವು ಚುನಾವಣೆಯಲ್ಲಿ ತನ್ನ ಖದರ್ ತೋರಿದೆ. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಈ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಸ್ಪರ್ಧಿಸಿ 12,584 ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ ನಡೆದ ಚುನಾವಣೆಗಳಲ್ಲಿ ಸೋಲು ಕಂಡರೂ 2013ರಲ್ಲಿ ಮತ್ತೆ ಕ್ಷೇತ್ರದ ಜನರು ಕೆಎಸ್‌ಪಿ ಕೈ ಹಿಡಿದಿದ್ದರು. ಆ ಚುನಾವಣೆಯಲ್ಲಿ 9,848 ಮತಗಳ ಅಂತರದಿಂದ ಗೆದ್ದಿದ್ದರು. 2018ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ನಿಧನರಾದರು. ಹೀಗಾಗಿ, ಇದೇ ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಅವರ ಪುತ್ರ ದರ್ಶನ್ ರಾಜಕೀಯ ಪ್ರವೇಶ ಪಡೆದರು. ಅನುಕಂಪದ ಅಲೆಯ ನಡುವೆಯೂ ದರ್ಶನ್ ಸೋಲು ಅನುಭವಿಸಿದರು.

ಸರಳ, ಸಜ್ಜನಿಕೆ ಗುಣವನ್ನು ಮೈಗೂಡಿಸಿಕೊಂಡಿರುವ ಅವರು ಎಲ್ಲರೊಟ್ಟಿಗೆ ಬೆರೆಯುತ್ತಿದ್ದಾರೆ. ಇದು ಅವರಿಗೆ ಫ್ಲಸ್ ಆಗುತ್ತಿದೆ. ಮಾತ್ರವಲ್ಲದೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿರುವುದರಿಂದ ದರ್ಶನ್ ಅವರ ಬಗ್ಗೆ ಕ್ಷೇತ್ರದ ಜನರಿಗೆ ಅನುಕಂಪದವಿದೆ. 2018ರಲ್ಲಿ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜುಗೆ ಸ್ಪರ್ಧೆ ನೀಡಿದ್ದರು. ಈ ಬಾರಿಯೂ ಅದೇ ಪುನರಾವರ್ತನೆಯಾಗುವ ಮುನ್ಸೂಚನೆ ಕ್ಷೇತ್ರದಲ್ಲಿ ಕಾಣಿಸುತ್ತಿದೆ.

ಸಂಘಟನೆಯಲ್ಲಿ ಮಧು ಮುಂದು: ಇನ್ನು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಕಣಕ್ಕಿಳಿಯುತ್ತಿದ್ದಾರೆ. ಇವರು ಕೂಡ ವಿದೇಶದಲ್ಲಿದ್ದ ಕಂಪನಿಯನ್ನು ಮಾರಾಟ ಮಾಡಿ ರೈತರೊಂದಿಗಿರಲು ಬಂದರು. ಪ್ರಾರಂಭದಲ್ಲಿ ಬಿಜೆಪಿ ಪಾಳಯ ಸೇರಿದ್ದ ಮಧು ಆನಂತರ ರಾಜಕೀಯ ಬೆಳವಣಿಗೆಯಿಂದಾಗಿ ಅಲ್ಲಿಂದ ಹೊರಬಂದರು. ಬಳಿಕ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಾತ್ರವಲ್ಲದೆ ಕೀರೆಮಡಿ ಮಹಿಳಾ ಒಕ್ಕೂಟವನ್ನು ಪ್ರಾರಂಭಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಿದರು. ಇದು ಅವರ ವರ್ಚಸ್ಸನ್ನು ವೃದ್ಧಿಸಿತು.

ಈ ನಡುವೆಯೇ ಹಾಲಿನ ದರದ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬೀದಿಗಿಳಿದರು. ಅಲ್ಲಿಂದ ರೈತ ಸಂಘಕ್ಕೆ ಸೇರಿದರು. ಮಾತ್ರವಲ್ಲದೆ ಹಲವು ಯುವಕರನ್ನು ಸಂಘಕ್ಕೆ ಸೇರ್ಪಡೆ ಮಾಡಿದರು. ಜತೆಗೆ ಗ್ರಾಮ ಘಟಕ ಪ್ರಾರಂಭಕ್ಕೆ ಹೆಚ್ಚು ಒತ್ತು ನೀಡಿದರು. ಹಲವು ಪ್ರಮುಖ ಹೋರಾಟದಲ್ಲಿ ಪಾಲ್ಗೊಂಡರು. ಗಣಿಗಾರಿಕೆ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಮನ್‌ಮುಲ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಸಂಘಟನೆ ವಿಚಾರದಲ್ಲಿ ಮುಂದಿರುವ ಮಧು ಅವರಿಗೆ ರೈತ ಸಂಘದ ಜತೆಗೆ ಹಲವು ಸಂಘಟನೆಗಳ ಬೆಂಬಲವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net