

ದಶಕದಿಂದ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿರುವ, ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಮೈತ್ರಿ ಪಕ್ಷಗಳು ಸಿದ್ಧತೆ ನಡೆಸಿವೆ. ಆದರೆ, ಅಣ್ಣ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಭಾವ ಹಾಗೂ ವೈಯಕ್ತಿಕ ವರ್ಚಸ್ಸಿನಿಂದ ಬೀಗುತ್ತಿರುವ ಡಿ.ಕೆ. ಸುರೇಶ್ ಅವರ ಎದುರಾಳಿ ಯಾರು ಎನ್ನುವುದೇ ಇನ್ನು ಕಗ್ಗಂಟಾಗಿಯೇ ಉಳಿದಿದೆ.
ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ದಳ, ಮಗದೊಮ್ಮೆ ಬಿಜೆಪಿ ತೆಕ್ಕೆಯಲ್ಲಿರುತ್ತಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಕಾಂಗ್ರೆಸ್ನ ಡಿ.ಕೆ.ಸುರೇಶ್ ಅವರದ್ದೇ ಪಾರುಪತ್ಯ. ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಸುರೇಶ್ ಅವರನ್ನು ಸೋಲಿಸುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆಯುವ ಪ್ರಯತ್ನ ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ಗಳಿಂದ ನಡೆಯುತ್ತಿದೆ. ಆದರೆ, ಸುರೇಶ್ರಂತಹ ಪ್ರಬಲ ಹುರಿಯಾಳು ಕಣದಲ್ಲಿರುವ ಅರಿವಿದ್ದರೂ ಮೈತ್ರಿಪಕ್ಷಗಳು ಇನ್ನೂ ಅಭ್ಯರ್ಥಿ ಆಯ್ಕೆಯ ಗೊಂದಲದಲ್ಲೇ ಮುಳುಗಿವೆ.
ಕ್ಷೇತ್ರದ ಇತಿಹಾಸ: ಕನಕಪುರ ಎಂದೇ ಗುರ್ತಿಸಿಕೊಂಡಿದ್ದ ಈಗಿನ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ 1952ರಿಂದಲೂ ಕಾಂಗ್ರೆಸ್ ಪಕ್ಷಕ್ಕೇ ಹೆಚ್ಚು ಬಾರಿ ಮಣೆ ಹಾಕಿದೆ. ಎಂ.ವಿ.ರಾಜಶೇಖರನ್, ಸಿ.ಕೆ.ಜಾಫರ್ ಷರೀಫ್, ಎಂ.ವಿ.ಚಂದ್ರಶೇಖರ ಮೂರ್ತಿ ಅವರಂತಹ ಘಟಾನುಘಟಿಗಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಇದಾದ ನಂತರ ಬಿಜೆಪಿಯ ಎಂ. ಶ್ರೀನಿವಾಸ್, ಜನತಾದಳದ ಎಚ್.ಡಿ.ಕುಮಾರಸ್ವಾಮಿ, ಉಪ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ನಿಂದ ಪತ್ರಕರ್ತೆ ತೇಜಸ್ವಿನಿ ಗೌಡ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ಕನಕಪುರದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾದ ನಂತರ ಒಮ್ಮೆ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. 2013ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಗೌಡರ ಕುಟುಂಬದ ವಿರುದ್ಧ ಸೆಣಸಾಟಕ್ಕೆ ನಿಂತ ಡಿ.ಕೆ. ಸುರೇಶ್, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿ ಅಂದಿನಿಂದ ಕ್ಷೇತ್ರದ ಮೇಲಿನ ಹಿಡಿತವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಸತತ 3 ಬಾರಿ ಗೆಲುವು ಸಾಧಿಸಿರುವ ಡಿ.ಕೆ.ಸುರೇಶ್ ಚುನಾವಣೆ ವೈರಾಗ್ಯದ ಮಾತುಗಳ ನಡುವೆಯೇ 4ನೇ ಬಾರಿಗೆ ಸ್ಪರ್ಧೆಗೆ ಕೈ ಹೈಕಮಾಂಡ್ ಮೊದಲ ಪಟ್ಟಿಯಲ್ಲೇ ಅವರ ಹೆಸರು ಘೋಷಿಸಿದೆ.
ಗ್ಯಾರಂಟಿ -ಮೋದಿ ಆಸರೆ
ಗ್ಯಾರಂಟಿಗಳಿಂದಲೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಇದರ ಮೇಲೆಯೇ ಚುನಾವಣೆ ಮಾಡಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಜತೆಗೆ ಮೋದಿ ಹವಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ನಿಶ್ಚಿತ. ಮತ್ತೊಂದೆಡೆ ಸಂಸದ ಡಿ.ಕೆ.ಸುರೇಶ್ ಸಹ ತಮ್ಮ ವೈಯಕ್ತಿಕ ವರ್ಚಸ್ಸು ಬಳಸಿ ಕೇಂದ್ರದಿಂದ ಅನುದಾನ ತಂದಿದ್ದಕ್ಕಿಂತ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದು ಅವರ ಪ್ಲಸ್ ಪಾಯಿಂಟ್. ಆದರೆ ಮಿತ್ರ ಪಕ್ಷಗಳು ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಸುರೇಶ್ ಸಾಕಷ್ಟು ನೀರು ಕುಡಿಯಬೇಕಿದೆ.
ಕ್ಷೇತ್ರ ಅನಿವಾರ್ಯ
ಬಿಜೆಪಿ- ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ಪಾಲಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಅನಿವಾರ್ಯ. ಡಿ.ಕೆ.ಸುರೇಶ್ರನ್ನು ಮಣಿಸಿದರೆ, ಕಾಂಗ್ರೆಸ್ಗೆ ಆಘಾತ ನೀಡುವ ಜತೆಗೆ, ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿ ಹಾಕಬಹುದು ಎನ್ನುವುದು ವಿಪಕ್ಷಗಳ ಲೆಕ್ಕಾಚಾರ. ಮತ್ತೊಂದೆಡೆ ಡಿ.ಕೆ. ಸಹೋದರರಿಗೂ ಈ ಕ್ಷೇತ್ರದ ಗೆಲುವು ಅನಿವಾರ್ಯ. ಸುರೇಶ್ ಇಲ್ಲದ ರಾಜಕಾರಣವನ್ನು ಡಿ.ಕೆ.ಶಿವಕುಮಾರ್ ಮಾಡಲು ಸಾಧ್ಯವೇ ಇಲ್ಲ.
ಮತ ಲೆಕ್ಕಾಚಾರ
ಕಳೆದ ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಸುರೇಶ್, ಪ್ರತಿಸ್ಪರ್ಧಿ ಬಿಜೆಪಿಯ ಅಶ್ವತ್ಥನಾರಾಯಣಗೌಡ ವಿರುದ್ಧ 206870 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಚಲಾವಣೆಯಾದ 1622824 ಮತಗಳಲ್ಲಿ ಡಿ.ಕೆ.ಸುರೇಶ್ 8,78,258 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 6,71,388 ಮತ ತಮ್ಮದಾಗಿಸಿಕೊಂಡಿದ್ದರು.
ಡಾ. ಮಂಜುನಾಥ್ ಸ್ಪರ್ಧೆ?
ಜನಮಾನಸದಲ್ಲಿ ಉಳಿದುಕೊಂಡಿರುವ ಜಯದೇವ ಹೃದ್ರೋಗ ಸಂಸ್ಥೆಯ ನಿರ್ಗಮಿತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಂಬಂಧ ಚರ್ಚೆಗಳು ನಡೆದಿವೆ. ಆದರೆ, ಮಾಜಿ ಪ್ರಧಾನಿ ಅಳಿಯರಾದರೂ ರಾಜಕಾರಣದಿಂದ ಬಹುತೇಕ ಅಂತರ ಕಾಯ್ದುಕೊಂಡು ಬಂದಿರುವ ಡಾ. ಸಿ.ಎನ್. ಮಂಜುನಾಥ್ ರಾಜಕೀಯ ಪ್ರವೇಶಿಸುವರೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಜೆಡಿಎಸ್- ಬಿಜೆಪಿ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಇದುವರೆಗೂ ಅಭ್ಯರ್ಥಿ ಮಾತ್ರ ಅಂತಿಮಗೊಂಡಿಲ್ಲ.
ಡಿಕೆಶಿ vs ಎಚ್ಡಿಕೆ
ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಪಟ್ಟುಗಳನ್ನು ಹಾಕಿ ಹಿಡಿತ ಇಟ್ಟುಕೊಂಡು ಗಮನ ಸೆಳೆಯುತ್ತಲೇ ಬಂದ ಡಿ.ಕೆ.ಶಿವಕುಮಾರ್ ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಧ್ಯಕ್ಷರು. ಹಿಂದಿನ ಜಿದ್ದಿನ ರಾಜಕಾರಣ ಮರೆತು 2018ರಲ್ಲಿ ಇಬ್ಬರೂ ಸ್ನೇಹ ಹಸ್ತ ಚಾಚಿದರೂ ದೀರ್ಘ ಕಾಲ ಬಾಳಿಕೆ ಬರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದಿಂದ ಸಿಎಂ ಸ್ಥಾನ ಕಳೆದುಕೊಂಡ ಎಚ್ಡಿಕೆ ಮತ್ತು ಡಿಕೆಶಿ ವಿರುದ್ದವೇ ಸೆಟೆದು ನಿಂತ ಕಾರಣದಿಂದ ಇಬ್ಬರೂ ಮತ್ತೆ ರಾಜಕೀಯವಾಗಿ ಉತ್ತರ-ದಕ್ಷಿಣವಾಗಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಕ್ರಿಯಾಶೀಲ ಸಂಸದ ಎಂದೇ ಹೆಸರು ಪಡೆದಿದ್ದಾರೆ. ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಣ, ಕ್ಷೇತ್ರ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಬಸ್ ಶೆಲ್ಟರ್ಗಳ ನಿರ್ಮಾಣ ಮಾಡುವ ಮೂಲಕ ವಿಭಿನ್ನ ಹಾದಿ ತುಳಿದಿದ್ದಾರೆ. ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ನಿರ್ವಣದಲ್ಲಿ ಇವರ ಪಾತ್ರವೂ ಪ್ರಮುಖ. ಅಲ್ಲದೆ, ಅಮೃತ ಸರೋವರ ಯೋಜನೆ ಅನುಷ್ಠಾನ, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ದಲ್ಲಿಯೂ ಹೆಚ್ಚು ಗಮನ ಹರಿಸಿ ಕೆಲಸ ಮಾಡಿದ್ದಾರೆ. ಇದರ ಜತೆಗೆ, ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿಯೂ ಮಾದರಿ ಆಗಿದ್ದಾರೆ.
ಸದನದಲ್ಲಿ ಹಾಜರಾತಿ: ಡಿ.ಕೆ.ಸುರೇಶ್ ಸಂಸತ್ ಕಲಾಪದಲ್ಲಿ ಶೇ.79 ಹಾಜರಾತಿ ಹೊಂದಿದ್ದರೆ, ಶೇ.46.7 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ. ಇನ್ನು 395 ಪ್ರಶ್ನೆಗಳನ್ನು ಸಂಸತ್ನಲ್ಲಿ ಕೇಳಿದ್ದಾರೆ.