

ಮೈಸೂರು: ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಬರುತ್ತದೆ. ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡುವುದಾಗಿ ಹೇಳಿದರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ನುಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ವರ್ಗಗಳ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚಿಸಿ ಮಾತನಾಡಿದರು.
ಶೂದ್ರರಿಗೆ-ದಲಿತರಿಗೆ-ಮಹಿಳೆಯರಿಗೆ ಆರ್‌ಎಸ್‌ಎಸ್ ಗರ್ಭಗುಡಿಯೊಳಗೆ ಪ್ರವೇಶವನ್ನೇ ಕೊಡಲ್ಲ. ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದಿದ್ದ ದೇವೇಗೌಡರು ಈಗ ಮೋದಿಗೂ ತಮಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. ರಾಜಕಾರಣಿಯಾದವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು ಎಂದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಾಮಾಜಿಕ ನ್ಯಾಯದ ವಿರೋಧಿ. ಹೀಗಾಗಿ ಮೀಸಲಾತಿಯನ್ನು ಇಷ್ಟ ಪಡುವುದಿಲ್ಲ. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ. ಅದು ಶೋಷಿತ ಜನ ಸಮುದಾಯಗಳ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ , ಬ್ರಿಟಿಷರಿಗೂ ಮೊದಲು ಓದುವ ಹಕ್ಕು ನಮಗೆ ಅಂದರೆ ಶೂದ್ರರಿಗೆ ಇತ್ತಾ ? ಮಹಿಳೆಯರಿಗೆ ಇತ್ತಾ? ಪತಿ ಮೃತಪಟ್ಟ ತಕ್ಷಣ ಪತ್ನಿ ಕೂಡ ಬೆಂಕಿಗೆ ಆಹುತಿ ಆಗಬೇಕಿತ್ತು. ಇಂಥಾ ಮನುಸ್ಮೃತಿ ಪ್ರೇರಿತ ಅಮಾನವೀಯ ಪದ್ಧತಿ ರದ್ದಾಗಿದ್ದು ನಮ್ಮ ಸಂವಿಧಾನದಿಂದ. ಹೀಗಾಗಿ ಈ ಸಂವಿಧಾನ ಬದಲಾಯಿಸಿ ಮತ್ತೆ ಮನುಸ್ಮೃತಿ ತರಬೇಕು ಎನ್ನುವುದು ಅವರ ಹುನ್ನಾರ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.