

ಮೈಸೂರು: ಮಂಡ್ಯ ಜಿಲ್ಲೆಯ ಕೆರಗೋಡಿನ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಖಂಡನೀಯ ಎಂದು ಲೋಕ ಶಕ್ತಿ ಪಕ್ಷದ ಅಧ್ಯಕ್ಷ ಚಂದ್ರಶೇಖರ ವಿ.ಸ್ಥಾವರಮಠ ತಿಳಿಸಿದರು.
ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು. ಶಾಂತಿ ನೆಲೆಸಿದ್ದ ಮಂಡ್ಯದಲ್ಲಿ ಈಗ ಪ್ರಕ್ಷುಬ್ಧ ವಾತಾವರಣ ಉಂಟಾಗಲು ಮೂರು ರಾಜಕೀಯ ಪಕ್ಷಗಳು ಕಾರಣವಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಜೆಡಿಎಸ್‌ನವರು ಕೇಸರಿ ಶಾಲು ಧರಿಸಿದ್ದಾರೆ. ಇದಕ್ಕೆ ಆ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಬೇಕು, ಆದರೆ, ಕೇಸರಿ ಶಾಲು ಮಾತ್ರ ಬೇಡ ಎಂದು ದ್ವಂದ್ವ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಅಖಂಡ ಭಾರತದ ಪರಿಕಲ್ಪನೆ ನಮ್ಮದು. ಆದರೆ, ಇದರ ಅರಿವು ಇರಬೇಕಾಗಿದ್ದ ಸಂಸದರು ಪ್ರತ್ಯೇಕ ರಾಷ್ಟ್ರ ನಿರ್ಮಾಣ ಕುರಿತಂತೆ ನೀಡಿರುವ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ದೂರಿದರು. ಪಕ್ಷದ ಬಸವರಾಜ್, ಭಾಗ್ಯಾ, ಲೋಕೇಶ್, ಉಮೇಶ್ ಇತರರಿದ್ದರು.