ರೇಸ್‌ಗೆ ಮನ್‌ಮುಲ್ ನಿರ್ದೇಶಕರು: ಎಂಎಲ್‌ಎ ಚುನಾವಣೆಗೆ ನಾಲ್ವರು ಸಿದ್ಧತೆ

Manmul
Published on

ಮಂಡ್ಯ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಹೊಸ ಮುಖಗಳು ಅಖಾಡಕ್ಕಿಳಿಯಲು ಸಜ್ಜಾಗುತ್ತಿವೆ. ಈ ಪೈಕಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್‌ಮುಲ್) ನಾಲ್ವರು ನಿರ್ದೇಶಕರು ಪ್ರಬಲ ಪೈಪೋಟಿ ನೀಡುತ್ತಿದ್ದು, ರೇಸ್‌ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ.
ಜೆಡಿಎಸ್‌ನಿಂದ ಇಬ್ಬರು, ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ ಒಬ್ಬರು ಸೇರಿದಂತೆ ನಾಲ್ವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿತರಾಗಿದ್ದಾರೆ. ಕೇವಲ ಆಕಾಂಕ್ಷಿತರಾಗಿಯೇ ಅಲ್ಲದೆ, ವರಿಷ್ಠರನ್ನು ಹಾಗೂ ಸ್ಥಳೀಯ ನಾಯಕರನ್ನು ಸೆಳೆಯಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಇದರೊಟ್ಟಿಗೆ, ಕ್ಷೇತ್ರದಲ್ಲಿ ಮತದಾರರ ಮನವೊಲಿಕೆಯ ಕೆಲಸವನ್ನೂ ಮಾಡುತ್ತಿದ್ದಾರೆ. ಇದು ಇನ್ನುಳಿದ ಆಕಾಂಕ್ಷಿತರಿಗೆ ತಲೆನೋವು ತರಿಸಿದೆ.
ಅಖಾಡಕ್ಕೆ ಅಧ್ಯಕ್ಷರು: ಚುನಾವಣೆ ವಿಚಾರಕ್ಕೆ ಬಂದರೆ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸ್ವಲ್ಪ ವೇಗವಾಗಿಯೇ ಪ್ರಚಾರಕ್ಕೆ ಇಳಿದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅವರು, ತಮ್ಮ ಶಂಭು ಸೇವಾ ಟ್ರಸ್ಟ್ ಮೂಲಕ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ವಿತರಿಸುವ ಕೆಲಸ ಮಾಡಿದರು. ಇದು ನಿರಂತರವಾಗಿ ನಡೆಯುತ್ತಿದೆ. ಜತೆಗೆ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದ ಧರ್ಮಯಾತ್ರೆ ಕಾರ್ಯಕ್ರಮದ ಯಶಸ್ಸು ಇನ್ನಷ್ಟು ಹುಮ್ಮಸ್ಸು ತಂದುಕೊಟ್ಟಿತ್ತು. ಜನರು ಕೂಡ ಮುಗಿಬಿದ್ದು ಧಾರ್ಮಿಕ ಪ್ರವಾಸಕ್ಕೆ ತೆರಳಿದರು. ಪ್ರಾರಂಭದಲ್ಲಿ ಒಂದೆರೆಡು ಬಸ್‌ನಂತಿದ್ದ ಯಾತ್ರೆ ಕಾಲಕ್ರಮೇಣ ದಿನಕ್ಕೆ ಸಾವಿರಾರು ಜನರು ಹೊರಡುವಂತೆ ಮಾಡಿತು. ಈ ಧರ್ಮಯಾತ್ರೆ ಕಾರ್ಯಕ್ರಮ ಜೆಡಿಎಸ್ ಟಿಕೆಟ್ ಆಕಾಂಕ್ಷಿತರನ್ನು ಮಾತ್ರವಲ್ಲದೆ ಇತರ ಪಕ್ಷದವರಿಗೂ ಯೋಚಿಸುವಂತೆ ಮಾಡಿತು.
ಈ ನಡುವೆ, ಜೆಡಿಎಸ್ ಟಿಕೆಟ್ ಆಕಾಂಕ್ಷಿತರೂ ಆಗಿರುವ ಶಾಸಕ ಎಂ.ಶ್ರೀನಿವಾಸ್ ಅಳಿಯ, ಜಿ.ಪಂ. ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಕೂಡ ಧಾರ್ಮಿಕ ಯಾತ್ರೆಗೆ ಚಾಲನೆ ನೀಡಿದರು. ಇತ್ತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರೂ ಆಗಿರುವ ಗಣಿಗ ರವಿಕುಮಾರ್ ಹಾಗೂ ಡಾ.ಕೃಷ್ಣ ಕೂಡ ಪ್ರವಾಸಕ್ಕೆ ಕಳುಹಿಸುವ ಮೂಲಕ ಜನರನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಿ.ಆರ್.ರಾಮಚಂದ್ರುಗೆ ಮನ್‌ಮುಲ್ ಉಪಾಧ್ಯಕ್ಷ ರಘುನಂದನ್ ಕೂಡ ಸಾಥ್ ಕೊಡುತ್ತಿದ್ದಾರೆ. ರಾಮಚಂದ್ರುಗೆ ಚುನಾವಣೆಗೆ ಸಂಬಂಧಿಸಿದಂತೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಗಾಡ್‌ಫಾದರ್ ಆಗಿದ್ದಾರೆ. ಅವರ ಭರವಸೆ ಮೇರೆಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆನ್ನುವ ಮಾತು ಕೇಳಿಬರುತ್ತಿವೆ. ಆದರೆ ಟಿಕೆಟ್ ರೇಸ್‌ನಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಎಚ್.ಎನ್.ಯೋಗೇಶ್, ಮುದ್ದನಘಟ್ಟ ಮಹಾಲಿಂಗೇಗೌಡ ಕೂಡ ಪ್ರಬಲವಾಗಿರುವುದರಿಂದ ಅವಕಾಶ ಸಿಗುವುದು ಸುಲಭವಾಗಿಲ್ಲ.
ಶಿವಪ್ಪಗೆ ಸಿಗುತ್ತಾ ಅವಕಾಶ?: ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ) ಆಕಾಂಕ್ಷಿತರಾಗಿದ್ದಾರೆ. ಸ್ಥಳೀಯವಾಗಿ ಪಕ್ಷ ಸಂಘಟನೆ ಮಾಡುತ್ತ ಬಂದಿರುವ ಶಿವಪ್ಪ, ಬಹುಮತವಿಲ್ಲದಿದ್ದರೂ ತಮ್ಮ ಸಹೋದರ ಶೇಖರ್ ಅವರನ್ನು ಮಂಡ್ಯ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆ ಅವರು ಮಾಡಿದ ರಾಜಕೀಯ ತಂತ್ರಗಾರಿಕೆ ಗಮನ ಸೆಳೆಯುವಂತೆ ಮಾಡಿತು. ಭಾರತ್ ಜೋಡೋ ಯಾತ್ರೆ ಜಿಲ್ಲೆಯಲ್ಲಿ ಯಶಸ್ವಿಯಾಗುವುದರ ಹಿಂದೆ ಶ್ರಮಿಸಿದವರಲ್ಲಿ ಇವರ ಪಾತ್ರವೂ ಇದೆ. ಇತ್ತೀಚೆಗೆ ಸಾವಿರಾರು ಜನರೊಂದಿಗೆ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವ ಮೂಲಕ ಶಕ್ತಿಪ್ರದರ್ಶನವನ್ನೂ ಮಾಡಿದ್ದರು. ಪಕ್ಷದ ಪ್ರಮುಖ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶಿವಪ್ಪಗೆ ಟಿಕೆಟ್ ಸಿಗುವುದು ಸುಲಭದ ಮಾತಾಗಿಲ್ಲ. ಕಾರಣ, ಕಾಂಗ್ರೆಸ್ ಟಿಕೆಟ್ ಬಯಸಿ ಕ್ಷೇತ್ರದಿಂದ ಬರೋಬ್ಬರಿ 16 ಜನರು ಅರ್ಜಿ ಸಲ್ಲಿಸಿದ್ದಾರೆ.
ದಳದಲ್ಲಿ ಮಂಜು ಪೈಪೋಟಿ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಪಡೆಯಲು ಎಚ್.ಟಿ.ಮಂಜು ಪೈಪೋಟಿ ನಡೆಸುತ್ತಿದ್ದಾರೆ. ಜಿಪಂ ಸದಸ್ಯರಾಗಿದ್ದ ಮಂಜು, ಅಧಿಕಾರ ಮುಗಿದ ಬಳಿಕ ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ಹಿಂದೆ ಕೆ.ಸಿ.ನಾರಾಯಣಗೌಡ ಅವರೊಂದಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದ ಮಂಜು, ಇದೀಗ ಅವರಿಗೆ ಎದುರಾಳಿಯಾಗಲು ಸಜ್ಜಾಗುತ್ತಿದ್ದಾರೆ. ಆದರೆ ಟಿಕೆಟ್‌ಗಾಗಿ ಹರಸಾಹಸ ಪಡೆಬೇಕಾದ ಸ್ಥಿತಿ ಇದೆ. ಸದ್ಯ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಂಜು ಅವರ ಜತೆಗೆ ಪುರಸಭಾ ಸದಸ್ಯ ಬಸ್ ಸಂತೋಷ್, ಜಿಪಂ ಮಾಜಿ ಸದಸ್ಯ ಬಿ.ಎಲ್.ದೇವರಾಜು ಕೂಡ ಟಿಕೆಟ್ ಆಕಾಂಕ್ಷಿತರಾಗಿದ್ದಾರೆ. ಆದ್ದರಿಂದ ಸಾಕಷ್ಟು ಪೈಪೋಟಿ ಇದೆ.
ಮದ್ದೂರಿನಲ್ಲಿ ಸ್ವಾಮಿ ಹಾದಿ ಸುಗಮ: ಜೆಡಿಎಸ್‌ನಿಂದ ಬೇಸತ್ತು ಹೊರಬಂದ ನಂತರ ಮನ್‌ಮುಲ್ ನಿರ್ದೇಶಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಸ್.ಪಿ.ಸ್ವಾಮಿ, ಬಿಜೆಪಿಗೆ ಸೇರ್ಪಡೆಯಾದರು. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸ್ವಾಮಿ ಅವರು, ಬದಲಾದ ರಾಜಕೀಯ ಸನ್ನಿವೇಶದಿಂದ ಬಿಜೆಪಿಗೆ ಸೇರಿದರು. ಅಲ್ಲಿಂದ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿ ಪಕ್ಷ ಸಂಘಟಿಸುತ್ತಿದ್ದಾರೆ. ಹಲವು ವರ್ಷಗಳಿಂದ ತಮ್ಮ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆ ಮಾಡುತ್ತ ಜನರಿಗೆ ಹತ್ತಿರವಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆಗೆ ಶ್ರಮಿಸುತ್ತಿರುವ ಸ್ವಾಮಿ ಅವರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶ ಸಿಗಲಿದೆ ಎನ್ನುವ ಖಚಿತ ಮಾತುಗಳಿವೆ. ಜತೆಗೆ, ಸದ್ಯಕ್ಕೆ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಅಭ್ಯರ್ಥಿ ಎನ್ನಿಸಿಕೊಂಡಿರುವುದರಿಂದ ಟಿಕೆಟ್ ಹಾದಿ ಸುಗಮವಾದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net