

ಮಂಡ್ಯ: ರಾಷ್ಟ್ರ ಅಥವಾ ರಾಜ್ಯ ರಾಜಕಾರಣದಲ್ಲಿ ಮಂಡ್ಯ ಜಿಲ್ಲೆಗೆ ವಿಶೇಷ ಸ್ಥಾನ. ಆ ಹೆಗ್ಗಳಿಕೆ ಇಂದಿಗೂ ಉಳಿದುಕೊಂಡಿದೆ. ಜಿಲ್ಲೆಯ ಜನರು ಮನಸ್ಸು ಬದಲಿಸಿದರೆ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಯಾಗುತ್ತದೆ. ಹೀಗಿರುವಾಗ ಗೆಲುವಿನ ಅಮಲಿನಲ್ಲಿ ಹಾಗೂ ಬಹುಮತ ಪಡೆದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, ಸಚಿವ ಸ್ಥಾನದ ವಿಚಾರದಲ್ಲಿ ಮಂಡ್ಯವನ್ನು ಕಡೆಗಣಿಸುತ್ತಿರುವುದು ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
ನಿತ್ಯಸಚಿವ ಕೆ.ವಿ.ಶಂಕರಗೌಡ, ಡಾ.ಜಿ.ಮಾದೇಗೌಡ, ಎಸ್.ಎಂ.ಕೃಷ್ಣ, ದಿವಂಗತ ಅಂಬರೀಷ್, ಕೆ.ಎನ್.ನಾಗೇಗೌಡ, ಎಂ.ಎಸ್.ಸಿದ್ದರಾಜು, ಬಿ.ಸೋಮಶೇಖರ್ ಸೇರಿದಂತೆ ಘಟಾನುಘಟಿ ರಾಜಕಾರಣಿಗಳು ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸರ್ಕಾರದ ನಿರ್ಧಾರ ತಪ್ಪು ಎನ್ನುವುದು ಗಮನಕ್ಕೆ ಬಂದರೆ ಯಾರಿಗೂ ತಲೆಕೆಡಿಸಿಕೊಳ್ಳದೇ ವಿರೋಧ ಮಾಡುವ ಗಟ್ಟಿತನ ಹೊಂದಿದ್ದರು. ಸರ್ಕಾರದ ರಚನೆ ಸೇರಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿ ಸಂಪೂರ್ಣ ಅಸ್ಥಿತ್ವ ಕಳೆದುಕೊಂಡು ನೆಲೆಗಾಗಿ ಹುಡುಕಾಡುತ್ತಿದ್ದ ಕಾಂಗ್ರೆಸ್, ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನದ ಗೆಲುವಿಗೆ ಜಿಲ್ಲೆಯ ಜನರು ಆರ್ಶೀವಾದ ಮಾಡಿದ್ದಾರೆ. ಆದರೆ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡದೇ ಅವಮಾನ ಮಾಡಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಅಸಮಾಧಾನದ ಮಾತುಗಳು ಹೊರಬೀಳುವಂತಾಗಿದೆ.
ಗೆಲ್ಲುವವರೆಗಷ್ಟೇ ಹೈಕಮಾಂಡ್ ಬದ್ಧತೆ: ನೆಲೆ ಕಳೆದುಕೊಂಡು ಕಷ್ಟದಲ್ಲಿದ್ದ ಕಾಂಗ್ರೆಸ್‌ಗೆ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಹೊಸತನ ನೀಡಿದರು. ಬದ್ಧ ವೈರಿ ಜೆಡಿಎಸ್‌ಗೆ ಪ್ರತಿ ಹಂತದಲ್ಲಿಯೂ ತಿರುಗೇಟು ನೀಡುತ್ತಾ ಸತತ ಸೋಲಿನ ರುಚಿ ಉಣಬಡಿಸಿದರು. ಇದರ ಪರಿಣಾಮ ಕಾಂಗ್ರೆಸ್ ಕೂಡ ಎರಡು ಎಂಎಲ್‌ಸಿ ಚುನಾವಣೆಯಲ್ಲಿ ಗೆದ್ದು ಬೀಗುವಂತೆ ಮಾಡಲಾಗಿತ್ತು. ಈ ನಡುವೆ ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಮಂಡ್ಯದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು. ಇದರ ಹಿಂದೆ ಜಿಲ್ಲಾ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಶ್ರಮವಿತ್ತು. ಮಾತ್ರವಲ್ಲದೆ ಪ್ರಜಾಧ್ವನಿ ಸಮಾವೇಶ ಸೇರಿದಂತೆ ಪಕ್ಷದ ಕಾರ್ಯಕ್ರಮಗಳೆಲ್ಲವೂ ಜಿಲ್ಲೆಯಲ್ಲಿ ಸಕ್ಸಸ್ ಆಗಿದೆ. ಇನ್ನು ಡಿ.ಕೆ.ಶಿವಕುಮಾರ್ ಮೇಕೆದಾಟು ವಿಚಾರವಾಗಿ ನಡೆಸಿದ ಪಾದಯಾತ್ರೆಯ ಯಶಸ್ಸಿನಲ್ಲಿ ಜಿಲ್ಲೆಯ ಕೊಡುಗೆಯೂ ಇದೆ.
ವಿಧಾನಸಭಾ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮತಯಾಚನೆಗೆ ಬಂದಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಿಲ್ಲೆಯ ಜನರ ಬಗ್ಗೆ ಅಪಾರ ಒಲವನ್ನು ತೋರಿಸಿದ್ದರು. ಹೆಚ್ಚಿನ ಸ್ಥಾನ ಕೊಟ್ಟರೆ ಜಿಲ್ಲೆಗೆ ಆದ್ಯತೆ ನೀಡುವುದಾಗಿ ೋಷಣೆ ಮಾಡಿದ್ದರು. ಆದರೀಗ ಸಚಿವ ಸ್ಥಾನದ ವಿಚಾರದಲ್ಲಿ ಇಬ್ಬರು ನಾಯಕರು ತೋರುತ್ತಿರುವ ಅಸಡ್ಡೆ ಪಕ್ಷವನ್ನು ಬೆಂಬಲಿಸಿದ ಜನರಿಗಷ್ಟೇ ಅಲ್ಲದೆ ಕಾಂಗ್ರೆಸ್ ಮುಖಂಡರಿಗೂ ಇರಿಸು ಮುರಿಸು ತರಿಸಿದೆ. ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಿಲ್ಲೆಯ ಒಬ್ಬರು ಶಾಸಕರಾದರೂ ಸಚಿವ ಸ್ಥಾನ ಅಲಂಕರಿಸುತ್ತಾರೆನ್ನುವ ಆಗಾಧ ವಿಶ್ವಾಸವಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದರು. ಆದರೆ ಬೇರೆ ಜಿಲ್ಲೆಗಳ ಎಂಟು ಶಾಸಕರಿಗೆ ಅವಕಾಶ ಕೊಟ್ಟು ಮಂಡ್ಯ ಶಾಸಕರನ್ನು ಕಡೆಗಣಿಸಿದ್ದು ಬೇಸರಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ನಲ್ಲಿ ನಿಷ್ಠರಿಗಿಲ್ವಾ ಮಣೆ?: ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆಯೇ ಕಾಂಗ್ರೆಸ್ ಹೈಕಮಾಂಡ್‌ನ ನಡೆ ಅತೃಪ್ತಿಯನ್ನು ತರುವಂತಾಗಿದೆ. ಜಿಲ್ಲೆಯಲ್ಲಿ ಆಯ್ಕೆಯಾಗಿರುವವರ ಪೈಕಿ ಒಕ್ಕಲಿಗ ಕೋಟಾದಲ್ಲಿ ನಾಗಮಂಗಲ ಶಾಸಕ ಎನ್.ಚಲುವರಾಯಸ್ವಾಮಿ ಅವರು ಸಚಿವ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಅಂತೆಯೇ ಸಿಎಂ, ಡಿಸಿಎಂ ಜತೆ ಹಲವು ಶಾಸಕರೊಟ್ಟಿಗೆ ಸಿಆರ್‌ಎಸ್ ಕೂಡ ಪ್ರಮಾಣ ವಚನ ಸ್ವೀಕಾರ ಮಾಡಬೇಕಿತ್ತು. ಆದರೆ ಪಕ್ಷದ ಗೊಂದಲ ಹಾಗೂ ಕೆಲಸ ನಾಯಕರ ಧೋರಣೆಗೆ ಎಂಟು ಶಾಸಕರಿಗಷ್ಟೇ ಸೀಮಿತಗೊಳಿಸಿರುವ ನಿರ್ಧಾರ ಸರಿಯಲ್ಲ ಎನ್ನುವ ಮಾತು ಪಕ್ಷದ ಅಂಗಳದಿಂದ ಕೇಳಿಬರುತ್ತಿದೆ.
ಚಲುವರಾಯಸ್ವಾಮಿ ಜೆಡಿಎಸ್‌ನಿಂದ ಹೊರಬಂದ ನಂತರ ಕಾಂಗ್ರೆಸ್ ಕಟ್ಟುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಇನ್ನು ಎಚ್.ಡಿ.ಕುಮಾರಸ್ವಾಮಿ ಸಿಎಂ ಮಾಡುವ ವಿಚಾರದಲ್ಲಿ ಸಿಆರ್‌ಎಸ್ ಪ್ರಮುಖವಾಗಿದ್ದರೆನ್ನುವ ವಿಚಾರವನ್ನು ಸಿದ್ದರಾಮಯ್ಯ ಅವರೇ ಬಹಿರಂಗಪಡಿಸಿದ್ದರು. ಇನ್ನು ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ ಹೆಗ್ಗಳಿಕೆಯನ್ನು ಮೀಸಲು ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೊಂದಿದ್ದಾರೆ. ಆದ್ದರಿಂದ ದಲಿತ ಸಮುದಾಯ ಕೋಟಾದಲ್ಲಿ ಸಚಿವರಾಗಬಹುದೆನ್ನುವ ನಿರೀಕ್ಷೆ ಇದೆ. ಹೀಗಿರುವಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಿಲ್ಲೆಯ ಇಬ್ಬರು ಹಿರಿಯ ಶಾಸಕರನ್ನು ನಿರ್ಲಕ್ಷ್ಯ ಮಾಡುವಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಿಗೆ ಅವಕಾಶವಿಲ್ಲವೇ ಎನ್ನುವ ಅಭಿಪ್ರಾಯವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.
ಶೀಘ್ರವೇ ಜಿಪಂ, ತಾಪಂ ಎಲೆಕ್ಷನ್: ಜಿಲ್ಲೆಯನ್ನು ಕಡೆಗಣಿಸಿದ ರಾಜಕೀಯ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಿರುವ ಸಾಕಷ್ಟು ಉದಾಹರಣೆಗಳಿವೆ. ಈಗಾಗಲೇ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದ ವಿಚಾರ ಒಕ್ಕಲಿಗ ಸಮುದಾಯದೊಳಗೆ ಕುದಿಮೌನ ತರಿಸಿದೆ. ಇದೀಗ ಸಚಿವ ಸ್ಥಾನದ ವಿಚಾರದಲ್ಲಿಯೂ ಹೈಕಮಾಂಡ್‌ನ ತಾತ್ಸಾರ ಅಸಮಾಧಾನ ಸೃಷ್ಟಿಸುತ್ತಿದೆ.
ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಸಚಿವ ಸ್ಥಾನದ ವಿಚಾರದ ಗೊಂದಲಕ್ಕೆ ತೆರೆ ಎಳೆಯಬೇಕಿದೆ. ಜತೆಗೆ ಮೈಸೂರು ಜಿಲ್ಲೆಗೆ ಸಿಎಂ ಸೇರಿದಂತೆ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮಾತಿದೆ. ಆದ್ದರಿಂದ ಮೇಲುಕೋಟೆಯಲ್ಲಿ ಬೆಂಬಲಿತ ಸೇರಿದಂತೆ ಆರು ಕ್ಷೇತ್ರದಲ್ಲಿ ಬೆಂಬಲಿಸಿರುವ ಕಾರಣ ಇಬ್ಬರಿಗೆ ಸಚಿವ ಸ್ಥಾನ ಕೊಡಬೇಕೆನ್ನುವ ಆಗ್ರಹವಿದೆ. ಜತೆಗೆ ಖಾತೆ ವಿಚಾರದಲ್ಲಿಯೂ ತಾರತಮ್ಯ ಎಸಗುವಂತಿಲ್ಲ. ಇಲ್ಲದಿದ್ದರೆ ಶೀಘ್ರವೇ ನಡೆಯಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅತೃಪ್ತಿಯ ಪರಿಣಾಮವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ.