

ಮಂಡ್ಯ: ಮನ್‌ಮುಲ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ಎಸ್.ಸಿ.ಮಧುಚಂದನ್ ಅವರಿಗೆ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿರುವುದು ಉತ್ತಮ ಬೆಳವಣಿಗೆ ಎಂದು ಕೀರೆಮಡಿ ಮಹಿಳಾ ಒಕ್ಕೂಟದ ಸದಸ್ಯೆ ಹಬ್ಬದಮಾರನಹಳ್ಳಿ ಮಮತಾ ಹೇಳಿದರು.
ಕಳೆದ ಏಳೆಂಟು ವರ್ಷದಿಂದ ಮಧುಚಂದನ್ ಅವರು ಹಳ್ಳಿ ಹಳ್ಳಿಗೆ ಭೇಟಿ ನೀಡಿ ರೈತರು ಹಾಗೂ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ರೈತ ಮಹಿಳೆಯರು ತರಕಾರಿ ಬೆಳೆದುಕೊಳ್ಳಲು ಬಿತ್ತನೆ ಬೀಜ ವಿತರಿಸುವ, ಕೃಷಿ ಕೂಲಿಕಾರ್ಮಿಕ ಮಹಿಳೆಯರಿಗೆ ಅವರ ಕೆಲಸಗಳಿಗೆ ಅನುಕೂಲವಾಗುವಂತೆ ಸಲಕರಣೆಗಳನ್ನು ಆರ್ಗ್ಯಾನಿಕ್ ಮಂಡ್ಯ ವತಿಯಿಂದ ಉಚಿತವಾಗಿ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರೈತರ ಪರವಾಗಿ ಕಬ್ಬಿಗೆ 4500 ರೂ ಹಾಗೂ ಲೀಟರ್ ಹಾಲಿಗೆ 40 ರೂ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 80 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಿ ಸರ್ಕಾರದ ಗಮನಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ 500 ಕೀರೆಮಡಿ ಒಕ್ಕೂಟದ 10 ಸಾವಿರ ಮಹಿಳಾ ಸದಸ್ಯರು ಚುನಾವಣೆಯಲ್ಲಿ ಮಧು ಅವರನ್ನು ಬೆಂಬಲಿಸುತ್ತೇವೆ. ಅದರಂತೆ ರೈತರ ಹಿತಕ್ಕಾಗಿ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಒಕ್ಕೂಟದ ಸದಸ್ಯರಾದ ಪಣಕನಹಳ್ಳಿ ಎಸ್.ಎಸ್.ಪೂರ್ಣಿಮಾ, ಜಿ.ಹೊಸಹಳ್ಳಿ ತಾಯಮ್ಮ, ಉಪ್ಪಾರಕನಹಳ್ಳಿ ಸುಧಾ, ಹುಲಿವಾನ ಶಶಿಕಲಾ, ಮರಲಿಂಗನದೊಡ್ಡಿ ಸರೋಜಮ್ಮ, ತಂಡಸನಹಳ್ಳಿ ರಾಧಾಮಣಿ ಹಾಜರಿದ್ದರು.