ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವೆ: ಸಮಾಜ ಸೇವಕ ಫೈಟರ್‌ರವಿ ಹೇಳಿಕೆ

06 NMG 03 (3)
Published on

ನಾಗಮಂಗಲ: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಪಕ್ಷಗಳ ಜತೆ ಮಾತುಕತೆ ನಡೆಸಿದ್ದೇನೆ. ಎರಡೂ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಸಮಾಜ ಸೇವಕ ಫೈಟರ್‌ರವಿ ಹೇಳಿದರು.

ತಾಲೂಕಿನ ಬಿಂಡಿಗನವಿಲೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರಿನ ಒಕ್ಕಲಿಗರ ಸಂಘದ ಉಚಿತ ಸಂಚಾರಿ ದಂತ ಚಿಕಿತ್ಸಾಲಯ ಹಾಗೂ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಸಮಾಜ ಸೇವಕ ಫೈಟರ್‌ರವಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ, ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನಾಗಮಂಗಲ ಕ್ಷೇತ್ರದಿಂದ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ನನ್ನ ಬಗ್ಗೆ ಯಾರು, ಏನೆಲ್ಲ ಅಪಪ್ರಚಾರ ಮಾಡಿದರೂ ನನಗೆ ಜನರ ಬೆಂಬಲ ಸಿಗುತ್ತಿದ್ದು, ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. ಜನತಾ ನ್ಯಾಯಾಲಯದಲ್ಲಿ ಮುಂದಿನ ತೀರ್ಪು ನಿರ್ಧಾರವಾಗಲಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಜನರ ಸೇವೆ ಮಾಡುತ್ತಿದ್ದೇನೆ. ಆರೋಗ್ಯ ಮತ್ತು ಶುದ್ಧ ಕುಡಿಯುವ ನೀರನ್ನು ತಾಲೂಕಿನ ಜನರಿಗೆ ನೀಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಯಾವ ಪಕ್ಷಗಳ ಜತೆ ಮಾತುಕತೆ ನಡೆಸಿದ್ದೇನೆ ಎಂಬುದನ್ನು ತಿಳಿಸಲಿದ್ದೇನೆ ಎಂದರು.

ಜನರಿಂದ ಉತ್ತಮ ಸ್ಪಂದನೆ: ನಾಗಮಂಗಲ ತಾಲೂಕಿನ 5 ಹೋಬಳಿ ಹಾಗೂ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಆರೋಗ್ಯ ಶಿಬಿರಗಳನ್ನು ಮಾಡಲಾಗಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಜನಸಾಮಾನ್ಯರ ಆರೋಗ್ಯವನ್ನು ಉತ್ತಮವಾಗಿರಿಸಬೇಕೆಂಬ ಆಶಯದೊಂದಿಗೆ ಕ್ಷೇತ್ರ ವ್ಯಾಪ್ತಿಯ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಆರು ತಿಂಗಳಿಗೊಮ್ಮೆ ಆರೋಗ್ಯ ಉಚಿತ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದ್ದು, ಈ ಸೇವೆಯನ್ನು ಕೊನೆಯ ಉಸಿರಿರುವವರೆಗೂ ಮುಂದುವರಿಸುತ್ತೇನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯ ಸೇವೆ ನೀಡುತ್ತಿರುವ ನನಗೆ ಜೀವನದಲ್ಲಿ ನೆಮ್ಮದಿ ಸಿಕ್ಕಂತಾಗಿದೆ ಎಂದರು.

ತಾಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಇನ್ನೂ ಹಲವು ಗ್ರಾಮಗಳ ಜನರು ಬೇಡಿಕೆಯಿಟ್ಟಿದ್ದಾರೆ. ಘಟಕ ಸ್ಥಾಪಿಸಲು ಅಗತ್ಯವಾದ ಶೆಡ್ ನಿರ್ಮಿಸಲು ಗ್ರಾಮಸ್ಥರಿಗೆ ಆರ್ಥಿಕ ತೊಂದರೆಯಾದರೆ ಅದನ್ನೂ ನಾನೇ ಭರಿಸಿ ಸುಸಜ್ಜಿತ ನೀರಿನ ಘಟಕ ನಿರ್ಮಿಸಿಕೊಡುವುದಾಗಿ ತಿಳಿಸಿದ ಫೈಟರ್‌ರವಿ, ಜನರು ನನ್ನ ಸೇವೆಯನ್ನು ಸದುಪಯೋಗಪಡಿಸಿಕೊಂಡು ಆರೋಗ್ಯವಂತ ಜೀವನ ನಡೆಸಬೇಕು ಎಂದು ಹೇಳಿದರು.

ಸಮಾಜಮುಖಿ ಕಾರ್ಯ ಶ್ಲಾಘನೀಯ:

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಜತೆಗೆ ಇಂತಹ ಶಿಬಿರಗಳನ್ನು ಆಯೋಜಿಸಿರುವ ಫೈಟರ್ ರವಿ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ. ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರತಿನಿತ್ಯ ಸಹಸ್ರಾರು ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದ್ದು, ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವ ಜನರಿಗೆ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಲ್ಲಿ ಫೈಟರ್ ರವಿ ಮತ್ತು ಆದಿಚುಂಚನಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಎಲ್ಲ ಬಗೆಯ ಔಷಧೋಪಚಾರವನ್ನು ಉಚಿತವಾಗಿ ನೀಡಲಾಗುವುದು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್ ಮಾತನಾಡಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಧರ್ಮೇಂದ್ರ, ಶಿವಕುಮಾರ್, ಮುಖಂಡರಾದ ಅರ್ಜುನ್, ಪವನ್, ಸತೀಶ್, ಲೋಕೇಶ್, ಶೇಷಾದ್ರಿ, ಮಂಗರವಳ್ಳಿ ಗ್ರಾ.ಪಂ.ಮಾಜಿ ಸದಸ್ಯ ಪ್ರಕಾಶ್ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net