

ಮಂಡ್ಯ: ಆಂತರಿಕ ಬೇಗುದಿ, ಅಸಮಾಧಾನ, ನಾಯಕತ್ವದ ಕೊರತೆ, ಹೊಂದಾಣಿಕೆ ಸಮಸ್ಯೆಯಿಂದ ನಲುಗಿ ಹೋಗಿರುವ ಜಿಲ್ಲಾ ಜೆಡಿಎಸ್‌ಗೆ ಇದೀಗ ಪಂಚರತ್ನ ಯಾತ್ರೆಯ ಸವಾಲು ಎದುರಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಯಾತ್ರೆಯನ್ನು ಯಶಸ್ವಿಗೊಳಿಸುವ ಮೂಲಕ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎನ್ನುವುದನ್ನು ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮೇಲ್ನೊಟ್ಟಕ್ಕೆ ಎಲ್ಲರೂ ಒಗ್ಗಟ್ಟಾಗಿರುವಂತೆ ಕಂಡರೂ ಆಂತರಿಕವಾಗಿ ಅಸಮಾಧಾನ ಇರುವುದು ಹಲವು ಬಾರಿ ಸಾಬೀತಾಗಿದೆ. ಕೆಲವರಂತೂ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಪಕ್ಷದ ವರಿಷ್ಠರಿಗೆ ತಲೆನೋವು ತಂದಿದ್ದಾರೆ. ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿ ನಡೆಯುತ್ತಿರುವ ಯಾತ್ರೆ ಜಿಲ್ಲಾ ಜೆಡಿಎಸ್ ಪಾಲಿಗೆ ಮಹತ್ವದ್ದಾಗಿದೆ. ಮಾತ್ರವಲ್ಲದೆ ಈ ಯಾತ್ರೆ ಮುಂದಿನ ಚುನಾವಣೆಗೆ ದಿಕ್ಸೂಚಿಯಂತಾಗಿದೆ.
ಮರುಕಳಿಸಲಿದೆಯೇ ಅಬ್ಬರ: ಮಂಡ್ಯ ಜೆಡಿಎಸ್ ಪಾಲಿಗೆ ಭದ್ರಕೋಟೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮಕಾಡೆ ಮಲಗಿಸಿ ಏಳು ಕ್ಷೇತ್ರದಲ್ಲಿಯೂ ದಳಪತಿಗಳು ಅಬ್ಬರಿಸಿದ್ದರು. ಜೆಡಿಎಸ್ ನಾಯಕರ ಒಗ್ಗಟ್ಟಿನ ಎದುರು ಕೈ ನಾಯಕರು ಸೋತು ಸುಣ್ಣವಾಗಿದ್ದರು. ಮಾತ್ರವಲ್ಲದೆ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಎಚ್‌ಡಿಕೆ ಸಿಎಂ ಆಗಲು ಜಿಲ್ಲೆ ನಿರ್ಣಾಯಕ ಪಾತ್ರ ವಹಿಸಿತ್ತು. ಇದೇ ಕಾರಣಕ್ಕೆ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು.
ಆದರೆ ಸಚಿವ ಸ್ಥಾನ ಹಂಚಿಕೆ ವಿಚಾರದಿಂದಲೇ ಅಸಮಾಧಾನದ ಹೊಗೆಯಾಡಲಾರಂಭಿಸಿತು. ದೊಡ್ಡಗೌಡರು ತಮ್ಮ ಸಂಬಂಧಿ ಡಿ.ಸಿ.ತಮ್ಮಣ್ಣ ಅವರಿಗೆ ಪ್ರಭಾವಿ ಖಾತೆ ಕೊಟ್ಟು ಚುನಾವಣೆಯಲ್ಲಿ ನಾಯಕತ್ವ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದ ಸಿ.ಎಸ್.ಪುಟ್ಟರಾಜು ಅವರನ್ನು ಕಡೆಗಣಿಸಿ ಸಣ್ಣ ನೀರಾವರಿ ಖಾತೆ ಕೊಡಲಾಗಿತ್ತೆನ್ನುವ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಾದ ಕೆಲ ದಿನದಲ್ಲೇ ಇಬ್ಬರು ಸಚಿವರ ವಿರುದ್ಧ ಕೆಲ ಶಾಸಕರು ಅಸಮಾಧಾನ ಹೊರಹಾಕಲು ಪ್ರಾರಂಭಿಸಿದರು. ಅನುದಾನ ಹಂಚಿಕೆ ವಿಚಾರವೂ ಇದಕ್ಕೆ ಕಾರಣವಾಗಿತ್ತು. ಇದೆಲ್ಲದರ ಪರಿಣಾಮ ಜೆಡಿಎಸ್‌ಗೆ ಪ್ರತಿಷ್ಠೆಯಾಗಿದ್ದ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವಂತಾಯಿತು.
ಈ ನಡುವೆ ಒಂದು ಹೆಜ್ಜೆ ಮುಂದೆ ಹೋದ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಪಕ್ಷ ತೊರೆದು ಬಿಜೆಪಿ ಸೇರಿದರು. ಬಳಿಕ ನಡೆದ ಉಪಚುನಾವಣೆಯಲ್ಲಿಯೂ ಜೆಡಿಎಸ್ ಅಬ್ಬರಿಸಲಿಲ್ಲ. ನಂತರ ಮೈತ್ರಿ ಸರ್ಕಾರ ಪತನಗೊಂಡಿತು. ಇಷ್ಟಾದರೂ ದಳಪತಿಗಳ ಮೊದಲಿನ ಒಗ್ಗಟ್ಟು ಮರುಕಳಿಸಲಿಲ್ಲ. ಇದಕ್ಕೂ ದೊಡ್ಡ ದಂಡವನ್ನೇ ತೆತ್ತಬೇಕಾಯಿತು. ಹೊಂದಾಣಿಕೆ ಜತೆಗೆ ನಾಯಕತ್ವವಿಲ್ಲದೆ ವಿಧಾನ ಪರಿಷತ್ ಚುನಾವಣೆ ಎದುರಿಸಿದ ಜೆಡಿಎಸ್‌ಗೆ ಮತ್ತೆ ಮರ್ಮಾಘಾತವಾಯಿತು. ಕಾಂಗ್ರೆಸ್ ಒಗ್ಗಟ್ಟಿನ ಎದುರು ಮಂಕಾಯಿತು. ಮತ್ತೆ ಜೆಡಿಎಸ್ ನಾಯಕರಲ್ಲಿ ಒಗ್ಗಟ್ಟು ಕಾಣಲಿಲ್ಲ. ಇದರಿಂದಾಗಿ ಮತ್ತೊಂದು ಎಂಎಲ್‌ಸಿ ಚುನಾವಣೆಯಲ್ಲಿಯೂ ಸೋಲು ಕಾಣುವಂತಾಯಿತು. ಇದಾದ ಬಳಿಕ ಶಾಸಕರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿಬಿಟ್ಟರು.
ಕಳೆದ ಚುನಾವಣಾ ಸಮಯ ಹಾಗೂ ಬಳಿಕ ಕೆಲ ದಿನ ಯಾವುದೇ ಕಾರ್ಯಕ್ರಮಗಳಿದ್ದರೂ ಎಲ್ಲರೂ ಒಗ್ಗಟ್ಟಾಗಿ ನಡೆಸುತ್ತಿದ್ದರು. ಇನ್ನೆನ್ನೂ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೂ ದಳದಲ್ಲಿ ಒಗ್ಗಟ್ಟಿನ ಮಂತ್ರ ಕೇಳಿಬರುತ್ತಿಲ್ಲ. ಇನ್ನು ಬಹುತೇಕ ಕ್ಷೇತ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳ ನಡುವೆ, ಶಾಸಕರು ಮತ್ತವರ ಬೆಂಬಲಿಗರ ನಡುವೆ ಅಸಮಾಧಾನ ಹೊರಬರುತ್ತಿವೆ. ಈ ನಡುವೆಯೇ ಪಂಚರತ್ನ ಯಾತ್ರೆ ಡಿ.20ರಂದು ಜಿಲ್ಲೆಗೆ ಪ್ರವೇಶ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಗಳಿಗಷ್ಟೇ ಸೀಮಿತವಾಗಿರುವ ಶಾಸಕರನ್ನು ಒಗ್ಗೂಡಿಸಿ ಮತ್ತೆ ಪಕ್ಷದ ಹಳೆಯ ವೈಭವ ಮರುಕಳಿಸುವಂತೆ ಮಾಡಬೇಕಾದ ಹೊಣೆ ಎಚ್‌ಡಿಕೆ ಅವರ ಮೇಲಿದೆ.
ನಾಳೆಯಿಂದ ಯಾತ್ರೆಯ ಅಬ್ಬರ: ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ಕೃಷಿ ಚೈತನ್ಯ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ, ವಸತಿ ಆಸರೆ ಶೀರ್ಷಿಕೆಯೊಂದಿಗೆ ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ಯಾತ್ರೆ ಡಿ.20ರಂದು ಮಳವಳ್ಳಿ ಮೂಲಕ ಜಿಲ್ಲೆಗೆ ಪ್ರವೇಶ ಪಡೆಯಲಿದೆ. 21ರಂದು ಮದ್ದೂರು, 22ರಂದು ಮಂಡ್ಯ, 23ರಂದು ಶ್ರೀರಂಗಪಟ್ಟಣ, 24ರಂದು ಪಾಂಡವಪುರ, 25ರಂದು ಕೆ.ಆರ್.ಪೇಟೆ ಮತ್ತು 26ರಂದು ನಾಗಮಂಗಲ ತಾಲೂಕಿನಲ್ಲಿ ಯಾತ್ರೆ ಸಂಚಾರ ನಡೆಯಲಿದೆ. ಈಗಾಗಲೇ ಮಾರ್ಗವನ್ನು ನಿಗದಿ ಮಾಡಲಾಗಿದೆ. ಶಾಸಕರ ನೇತೃತ್ವದಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಚ್‌ಡಿಕೆ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಈ ನಡುವೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪರ್ಧಾಕಾಂಕ್ಷಿಗಳ ನಡುವೆ ಪ್ರತಿಷ್ಠೆ ಏರ್ಪಟ್ಟಿರುವ ಮಂಡ್ಯ ಮತ್ತು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಟಿಕೆಟ್ ಆಕಾಂಕ್ಷಿತರು ಕುಮಾರಣ್ಣನ ಮನವೊಲಿಸುವುದರ ಜತೆಗೆ ತಮ್ಮ ಶಕ್ತಿ ಪ್ರದರ್ಶಿಸಲು ಸದ್ದಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ವಿಪಕ್ಷಗಳಿಗೂ ಕುತೂಹಲ: ಪಂಚರತ್ನ ಯಾತ್ರೆ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿಗೂ ಸಾಕಷ್ಟು ಕುತೂಹಲವಿದೆ. ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ಹಾಗೂ ಜನಸಂಕಲ್ಪ ಯಾತ್ರೆಯೊಂದಿಗೆ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶಿಸಿರುವ ಬಿಜೆಪಿಗೆ ಪಂಚರತ್ನ ಯಾತ್ರೆಗೆ ಜನರಿಂದ ಸಿಗುವ ಸ್ಪಂದನೆ ಆಧಾರದ ಮೇಲೆ ಮುಂದಿನ ಚುನಾವಣೆಗೆ ಗೇಮ್‌ಪ್ಲ್ಯಾನ್ ಮಾಡಬಹುದು. ಈ ಎಲ್ಲದರ ನಡುವೆ ಖುದ್ದು ಕುಮಾರಣ್ಣನೇ ಯಾತ್ರೆಯೊಂದಿಗೆ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ನಾಯಕರು, ಮುಖಂಡರು, ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿದೆ.