ಮಂಡ್ಯ ಜೆಡಿಎಸ್‌ನಲ್ಲಿ ಭಿನ್ನಮತ?: ಪಂಚರತ್ನ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಅಸಮಾಧಾನ

14_12_Mdy_01(Halcal)
Published on

ಮಂಡ್ಯ: ಜೆಡಿಎಸ್ ಪಂಚರತ್ನ ಯಾತ್ರೆ ಕೆಲವೇ ದಿನಗಳಲ್ಲಿ ಜಿಲ್ಲೆಗೆ ಪ್ರವೇಶಿಸಲಿದೆ. ಆದರೆ ಈ ನಡುವೆ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗೊಂಡಿದೆ. ಮಾತ್ರವಲ್ಲದೆ ಕ್ಷೇತ್ರದ ನಾಯಕರ ತಾರತಮ್ಯ ನೀತಿಗಳು ಸ್ಪರ್ಧಾಕಾಂಕ್ಷಿಗಳ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಟಿಕೆಟ್ ಆಕಾಂಕ್ಷಿತರು ಕ್ಷೇತ್ರದಲ್ಲಿ ಸಕ್ರಿಯರಾಗಿ ಮತದಾರರನ್ನು ತಲುಪುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಒಬ್ಬರು ಮತ್ತೊಬ್ಬರ ವಿರುದ್ಧ ಹೇಳಿಕೆ ಕೊಡುವುದು ಸೇರಿದಂತೆ ಪಕ್ಷಕ್ಕೆ ಡ್ಯಾಮೆಜ್ ಆಗುವಂತಹ ಬೆಳವಣಿಗೆ ನಡೆಯಬಾರದೆನ್ನುವ ಕಾರಣಕ್ಕೆ ಸ್ಪರ್ಧಾಕಾಂಕ್ಷಿಗಳ ನಡುವೆ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಮೌಖಿಕ ಒಪ್ಪಂದ ಮಾಡಿಸಿದ್ದರು. ಅಭ್ಯರ್ಥಿ ಯಾರೇ ಆಗಲಿ ಉಳಿದವರು ಒಮ್ಮತದಿಂದ ಪಕ್ಷದ ಪರ ಚುನಾವಣೆ ಮಾಡಬೇಕೆನ್ನುವ ಸೂಚನೆ ನೀಡಿದ್ದರು. ಆದರೆ ಕ್ಷೇತ್ರದಲ್ಲಿ ನಡೆಯುತ್ತಿರುವ ವ್ಯತಿರಿಕ್ತ ಬೆಳವಣಿಗೆ ಆಕಾಂಕ್ಷಿತರ ಬೆಂಬಲಿಗರಲ್ಲಿ ಅತೃಪ್ತಿ ತರುವಂತೆ ಮಾಡಿದೆ.

ಸಭೆಗಿಲ್ಲ ಆಹ್ವಾನ, ಬೆಂಬಲಿಗರ ಅಸಮಾಧಾನ?: ಜೆಡಿಎಸ್ ಪಂಚರತ್ನ ಯಾತ್ರೆ ಡಿ.22ರಂದು ಮಂಡ್ಯ ವಿಧಾನಸಭಾ ಕ್ಷೇತ್ರ ಪ್ರವೇಶಿಸಲಿದೆ. ಬೇರೆ ಜಿಲ್ಲೆಗಳಲ್ಲಿ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿಯೂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಂಗಳವಾರ ನಗರದಲ್ಲಿ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಇದಕ್ಕೆ ತಾಲೂಕಿನ ಎಲ್ಲ ಹಂತದ ಮುಖಂಡರು, ಕಾರ್ಯಕರ್ತರಿಗೂ ಆಹ್ವಾನ ನೀಡಲಾಗಿತ್ತು. ಇಷ್ಟೇ ಆಗಿದ್ದರೆ ಅತೃಪ್ತಿಗೆ ಕಾರಣವಾಗುತ್ತಿರಲಿಲ್ಲ. ಬದಲಿಗೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರಿಗೆ ಆಹ್ವಾನ ನೀಡಿಲ್ಲ ಎನ್ನುವ ವಿಷಯ ಚರ್ಚೆಗೆ ಕಾರಣವಾಗಿದೆ. ಅಂತೆಯೇ ಅವರು ಕೂಡ ಸಭೆಗೆ ಆಗಮಿಸದಿರುವುದು ಚರ್ಚೆಗೆ ಇನ್ನಷ್ಟು ಇಂಬು ನೀಡಿದೆ.

ಆಹ್ವಾನ ನೀಡಿಲ್ಲ ಎನ್ನುವ ವಿಷಯ ರಾಮಚಂದ್ರು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ನಾಯಕರು ಹೇಳಿದಂತೆ ಎಲ್ಲರೂ ನಡೆದುಕೊಳ್ಳಬೇಕು. ಅಂದರೆ ನಿಖಿಲ್‌ಕುಮಾರಸ್ವಾಮಿ ಅವರು ಹೇಳಿದಂತೆ ಎಲ್ಲ ಸ್ಪರ್ಧಾಕಾಂಕ್ಷಿಗಳು ಒಗ್ಗಟ್ಟಿನಲ್ಲಿ ಹಾಗೂ ಯಾರಿಗೂ ಬೇಸರವಾಗದಂತೆ ಗಮನಹರಿಸುವ ಸೂಚನೆ ನೀಡಲಾಗಿದೆ. ಆದರೆ ಅದನ್ನು ಪಾಲಿಸದೇ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ನಿಖಿಲ್‌ಕುಮಾರಸ್ವಾಮಿ ಸೇರಿದಂತೆ ಪಕ್ಷದ ನಾಯಕರೊಂದಿಗೆ ಹಾಗೂ ಕ್ಷೇತ್ರದ ಜನರೊಂದಿಗೆ ರಾಮಚಂದ್ರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಲವು ಸಾಮಾಜಿಕ ಕಾರ್ಯಕ್ರಮದ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಬೆಂಬಲಿಗರು ಅತೃಪ್ತಿ ಹೊರಹಾಕುತ್ತಿದ್ದಾರೆ.

ನಿಖಿಲ್ ಅಂಗಳಕ್ಕೆ ದೂರು: ಪೂರ್ವಭಾವಿ ಸಭೆಗೆ ಸಂಬಂಧಿಸಿದಂತೆ ಉಂಟಾಗಿರುವ ಅಸಮಾಧಾನದ ವಿಷಯ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅಂಗಳಕ್ಕೆ ತಲುಪಿದೆ. ರಾಮಚಂದ್ರು ವಿಚಾರದಲ್ಲಿ ನಡೆದ ಬೆಳವಣಿಗೆ ಬಗ್ಗೆ ಬೆಂಬಲಿಗರು ದೂರು ನೀಡಿದ್ದಾರೆ. ಈ ಅತೃಪ್ತಿ ಸಂಬಂಧ ಹಾಗೂ ಪಕ್ಷದ ಹಿತದೃಷ್ಟಿಯಿಂದ ಜಿಲ್ಲೆಯ ಮುಖಂಡರಿಗೆ ನಿಖಿಲ್ ಕೆಲ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಸಧ್ಯ ಜೆಡಿಎಸ್ ತೆಕ್ಕೆಯಲ್ಲಿಯೇ ಇರುವ ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ದಳಪತಿಗಳು ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ. ಆದರೆ ದಳಕ್ಕೆ ಸೆಡ್ಡು ಹೊಡೆದು ಕ್ಷೇತ್ರ ವಶಪಡಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಕೂಡ ಕಸರತ್ತು ನಡೆಸುತ್ತಿದೆ. ಹೀಗಿರುವಾಗ ಅಸಮಾಧಾನದ ಕಾರಣಗಳು ಪಕ್ಷಕ್ಕೆ ಹಿನ್ನಡೆಯುಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜತೆಗೆ ಇದು ವಿಪಕ್ಷಗಳಿಗೆ ಸುಗಮ ಹಾದಿ ಮಾಡಿಕೊಟ್ಟಂತಾಗುತ್ತದೆ. ನಾಯಕರ ನಡೆಯಿಂದ ಬೇಸತ್ತು ಈಗಾಗಲೇ ಹಲವರು ಪಕ್ಷ ತೊರೆದಿದ್ದಾರೆ. ಯುವ ಮುಖಂಡ ಅಶೋಕ್ ಜಯರಾಂ ಬಿಜೆಪಿಗೆ ಹಾಗೂ ಸಮಾಜ ಸೇವಕ ಕೆ.ಕೆ.ರಾಧಾಕೃಷ್ಣ ಕೀಲಾರ ಕಾಂಗ್ರೆಸ್ ಸೇರಿದ್ದಾರೆ. ಇದೀಗ ಕ್ಷೇತ್ರದ ನಾಯಕರಿಂದಾಗಿ ಕೆಲ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದೆ ಎನ್ನುವ ಬೇಸರ ಕಾರ್ಯಕರ್ತರಲ್ಲಿದೆ.

ಟಿಕೆಟ್ ರೇಸ್‌ನಲ್ಲಿ ನಾಲ್ವರು: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಲು ನಾಲ್ವರು ಆಕಾಂಕ್ಷಿತರಿದ್ದಾರೆ. ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಶಾಸಕ ಎಂ.ಶ್ರೀನಿವಾಸ್ ಅಳಿಯ ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಹಾಗೂ ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ರೇಸ್‌ನಲ್ಲಿದ್ದಾರೆ. ಎಲ್ಲರೂ ತಮ್ಮದೇ ಆದ ತಂತ್ರಗಾರಿಕೆ ಮೂಲಕ ಚುನಾವಣೆಗೆ ಸಿದ್ಧವಾಗುತ್ತಿದ್ದಾರೆ. ಇವರ ನಡುವೆ ಪ್ರಬಲ ಪೈಪೋಟಿ ಕೊಡಲು ಸಜ್ಜಾಗಿದ್ದ ಕೆ.ಕೆ.ರಾಧಾಕೃಷ್ಣ ಕೀಲಾರ ನಾಯಕರ ನಿರ್ಲಕ್ಷೃದಿಂದ ಅಸಮಾಧಾನಗೊಂಡು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಇನ್ನು ರಾಮಚಂದ್ರು ಬೆನ್ನಿಗೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ನಿಂತಿದ್ದಾರೆ. ಇತ್ತ ಕೆ.ಎಸ್.ವಿಜಯಾನಂದಗೆ ತನ್ನ ಕುಟುಂಬದ ವರ್ಚಸ್ಸಿನ ಜತೆಗೆ ಶಾಸಕ ಎಂ.ಶ್ರೀನಿವಾಸ್ ಬೆಂಬಲವಿದೆ. ಅಂತೆಯೇ ಎಚ್.ಎನ್.ಯೋಗೇಶ್ ಹಾಗೂ ಮಹಾಲಿಂಗೇಗೌಡ ಮುದ್ದನಘಟ್ಟ ಅವರಿಗೂ ಎಂ.ಶ್ರೀನಿವಾಸ್ ಶ್ರೀರಕ್ಷೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ವಿಚಾರ ನಾಯಕರಿಗೆ ಪ್ರತಿಷ್ಠೆಯಾಗಿದೆ. ಮಾತ್ರವಲ್ಲದೆ ಇದು ದಳಪತಿಗಳಿಗೂ ತಲೆನೋವಿನ ವಿಚಾರ. ಯಾರಿಗೆ ಮಣೆ ಹಾಕಿದರೂ ಮತ್ತೊಬ್ಬರು ಸಿಡಿದೇಳುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿ ವಿಚಾರವನ್ನು ಮುಂದೂಡುತ್ತಾ ಪಕ್ಷ ಸಂಘಟನೆಯಷ್ಟೇ ಮಾಡಿ ಎಂದು ಸೂಚನೆ ನೀಡುತ್ತಿದ್ದಾರೆ. ಈ ನಡುವೆ ಮಂಡ್ಯ ಕ್ಷೇತ್ರದಲ್ಲಿ ಹುಟ್ಟಿಕೊಂಡಿರುವ ಅತೃಪ್ತಿಯನ್ನು ಸರಿಪಡಿಸಲು ವರಿಷ್ಠರು ಏನು ಮಾಡುತ್ತಾರೆನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net