ಮತ್ತೆ ಜೆಡಿಎಸ್ ವರ್ಸಸ್ ಸ್ವಾಭಿಮಾನ: ಅತೃಪ್ತ ಮೂವರಿಂದ ಉಮೇದುವಾರಿಕೆ

Halchal)
Published on

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯದ ಬೇಗುದಿ ಕಗ್ಗಂಟ್ಟಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಕಳೆದ ಲೋಕಸಭಾ ಚುನಾವಣೆಯಂತೆ ಮತ್ತೊಮ್ಮೆ ಸ್ವಾಭಿಮಾನದ ಪ್ರಶ್ನೆ ಎದುರಾಗಿದ್ದು, ಚುನಾವಣೆ ಕಾವೇರುವುದು ನಿಚ್ಚಳವಾಗಿದೆ.

ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರಿಗೆ ಬಿ ಫಾರ್ಮ್ ಕೊಟ್ಟಿರುವುದು ಸ್ಪರ್ಧಾಕಾಂಕ್ಷಿಗಳಾಗಿದ್ದ ಹಾಲಿ ಶಾಸಕ ಎಂ.ಶ್ರೀನಿವಾಸ್, ಕೆ.ಎಸ್.ವಿಜಯಾನಂದ, ಎಚ್.ಎನ್.ಯೋಗೇಶ್, ಮಹಾಲಿಂಗೇಗೌಡ ಕಣ್ಣನ್ನು ಕೆಂಪಾಗಿಸಿದೆ. ವರಿಷ್ಠರ ನಿರ್ಧಾರದಿಂದ ಬಂಡಾಯವೆದ್ದಿರುವ ನಾಲ್ವರು ಇದೀಗ ಚುನಾವಣಾ ಸಮರಕ್ಕೆ ಸಜ್ಜಾಗಿದ್ದಾರೆ. ನಿರೀಕ್ಷೆಯಂತೆ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ದಳಪತಿಗಳಿಗೆ ತಟ್ಟಿದ ಬಿಸಿ: ಬುಧವಾರ ನಡೆದ ಬೆಳವಣಿಗೆ ದಳಪತಿಗಳ ನಿದ್ದೆಗೆಡಿಸಿದೆ. ನಿರೀಕ್ಷೆಗೂ ಮೀರಿದ ಬಂಡಾಯ ಚಿಂತೆಗೀಡು ಮಾಡಿದೆ. ಅದರಲ್ಲಿಯೂ ಎಂ.ಶ್ರೀನಿವಾಸ್ ನಾಯಕತ್ವದಲ್ಲಿ ಬಂಡಾಯದ ಚಟುವಟಿಕೆ ನಡೆಯುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ಬಂಡಾಯಗಾರರೊಂದಿಗೆ ಮಾತನಾಡಿದರೂ ಪ್ರಯೋಜನವಾಗಿಲ್ಲ. ಪರಿಣಾಮ ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಕೆಯಾಗಿದೆ.

ಮಾತ್ರವಲ್ಲದೆ ಪ್ರಬಲ ಆಕಾಂಕ್ಷಿ ಕೆ.ಎಸ್.ವಿಜಯಾನಂದ ಅವರಿಗೆ ಜೆಡಿಎಸ್‌ನಿಂದಲೂ ನಾಮಪತ್ರ ಸಲ್ಲಿಸುವಂತೆ ದೊಡ್ಡಗೌಡರ ಕುಟುಂಬದಿಂದ ರಾತ್ರೋರಾತ್ರಿ ಬುಲಾವ್ ಬಂದಿದೆ. ಅದರಂತೆ ಪಕ್ಷೇತರ ಹಾಗೂ ಜೆಡಿಎಸ್‌ನಿಂದ ಉಮೇದುವಾರಿಕೆ ಸಲ್ಲಿಸಿದರೂ ಬಿ ಫಾರ್ಮ್ ಕೊಟ್ಟಿಲ್ಲ. ಪರಿಣಾಮ ಇದೀಗ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಬೇಕಾಗಿದೆ. ಇನ್ನು ಬಂಡಾಯದಿಂದ ದಳ ನಲುಗಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಬೇರೆ ಕ್ಷೇತ್ರಕ್ಕೆ ಹೋಲಿಸಿದರೆ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಾಗಲಿಲ್ಲ. ಆದರೆ ಜೆಡಿಎಸ್‌ಗಿಂತಲೂ ಬಂಡಾಯಗಾರರ ಪರವಾಗಿ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎನ್ನುವುದು ಗಮನಾರ್ಹ.

ಜೆಡಿಎಸ್‌ಗೆ ಜೆಡಿಎಸ್ ಎದುರಾಳಿ: ಜೆಡಿಎಸ್‌ನಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆ ಮಂಡ್ಯ ಕ್ಷೇತ್ರದ ಚುನಾವಣೆಯ ಸ್ವರೂಪ ಬದಲಾಯಿಸಿದೆ. ಪ್ರಮುಖವಾಗಿ ಪ್ರಬಲ ಆಕಾಂಕ್ಷಿ ವಿಜಯಾನಂದ ಅವರಿಗೆ ಟಿಕೆಟ್ ಕೈತಪ್ಪಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅತ್ತ ತನಗೆ ಅವಕಾಶ ಕೊಡಿ, ಇಲ್ಲದಿದ್ದರೆ ನೀವೇ ಬನ್ನಿ ಎಂದು ಆಹ್ವಾನಿಸಿದರೂ ಎಚ್‌ಡಿಕೆ ಮನ್ನಣೆ ಕೊಡದಿರುವುದು ಶಾಸಕರಿಗೆ ಹಿನ್ನಡೆಯದಂತಾಗಿದೆ. ಚುನಾವಣಾ ಚಟುವಟಿಕೆ ಪ್ರಾರಂಭವಾದ ದಿನದಿಂದಲೂ ರಾಮಚಂದ್ರು ಒಂದಲ್ಲ ಒಂದು ರೀತಿ ಕ್ಷೇತ್ರದಲ್ಲಿ ಪ್ರಭಾವ ಬೀರುತ್ತಿದ್ದರು. ಒಂದು ವೇಳೆ ರಾಮಚಂದ್ರು ಬಿಟ್ಟು ಉಳಿದ ಯಾರಿಗೂ ಅವಕಾಶ ಕೊಟ್ಟಿದ್ದರೂ ಎಂ.ಶ್ರೀನಿವಾಸ್ ಇಷ್ಟೊಂದು ರೆಬಲ್ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ಜೆಡಿಎಸ್ ವರ್ಸಸ್ ಜೆಡಿಎಸ್ ನಡುವಿನ ಸಮರ ಎನ್ನುವಂತಾಗಿದೆ.

ಸದ್ಯಕ್ಕೆ ಕೆ.ಎಸ್.ವಿಜಯಾನಂದ, ಎಚ್.ಎನ್.ಯೋಗೇಶ್, ಮಹಾಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಪ್ರಸ್ತುತ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ವಿಜಯಾನಂದ ಕಣಕ್ಕಿಳಿಯಬೇಕಿದೆ. ಅಂತೆಯೇ ಇದಕ್ಕೆ ಪೂರಕವಾಗಿ ‘ಸ್ವಾಭಿಮಾನಕ್ಕಾಗಿ ಮಂಡ್ಯ ಮಾತ್ರ’ ಎನ್ನುವ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆಯೂ ಕೆವಿಎಸ್ ಫೋಟೋಗಳು ರಾರಾಜಿಸಿದವು.

ಟಿಕೆಟ್ ತಪ್ಪಿಸಿದ್ದು ನಿಖಿಲ್?: ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ವಿಜಯಾನಂದ ಹಾಗೂ ಎಚ್.ಎನ್.ಯೋಗೇಶ್‌ಗೆ ಪಕ್ಷದಿಂದ ಕಣಕ್ಕಿಳಿಯದಂತೆ ಮಾಡುವುದರ ಹಿಂದೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ.

ರಾಮಚಂದ್ರು ನಿಖಿಲ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆ ಜಟಿಲವಾಗಿತ್ತು. ಆದರೂ ನಿಖಿಲ್ ಶಿಫಾರಸ್ಸಿನ ಮೇಲೆ ಬಿ ಫಾರ್ಮ್ ವಿತರಣೆಯಾಗಿದೆ ಎನ್ನುವುದಿದೆ. ಗುರುವಾರ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿ, ಬಿ ಫಾರ್ಮ್ ಕಳಿಸುವುದಾಗಿ ವಿಜಯಾನಂದ ಅವರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಅವಧಿ ಮುಗಿದರೂ ಬಿ ಫಾರ್ಮ್ ಬರಲಿಲ್ಲ. ಇದಕ್ಕೂ ನಿಖಿಲ್ ಕಾರಣವೆನ್ನಲಾಗುತ್ತಿದೆ. ಇದು ಪಕ್ಷದೊಳಗೆ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಟಿಸಿದೆ.

ಬಿ ಫಾರ್ಮ್ ಪಡೆಯುವ ಸಂಬಂಧ ವಿಜಯಾನಂದ ಹಾಗೂ ರಾಮಚಂದ್ರು ಪ್ರತ್ಯೇಕವಾಗಿ ದೊಡ್ಡಗೌಡರ ನಿವಾಸಕ್ಕೆ ತೆರಳಿದ್ದರು. ಸುಮಾರು ಹೊತ್ತು ಕಾಯಿಸಿದರೂ ಯಾರಿಗೆ ಎನ್ನುವುದು ಅಂತಿಮವಾಗಿರಲಿಲ್ಲ. ಈ ನಡುವೆ ನಡೆದ ಬೆಳವಣಿಗೆಯಲ್ಲಿ ವಿಜಯಾನಂದ ಅವರಿಗೆ ನಿರಾಸೆಯಾಗಿದೆ.

ವಿಪಕ್ಷಗಳಿಗೆ ಪ್ರಬಲ ಅಸ್ತ್ರ: ಕೆ.ವಿ.ಶಂಕರಗೌಡ ಕುಟುಂಬಕ್ಕೆ ಟಿಕೆಟ್ ತಪ್ಪಿಸಿದ ವಿಚಾರ ಕಾಂಗ್ರೆಸ್, ಬಿಜೆಪಿಗೆ ಜಿಲ್ಲೆಯಲ್ಲಿ ಪ್ರಬಲ ಅಸ್ತ್ರವಾಗಿದೆ. ಈಗಾಗಲೇ ಕೆವಿಎಸ್ ಕುಟುಂಬಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಮಂಡ್ಯ ಜಿಲ್ಲೆಗೆ ತನ್ನದೇ ಆದ ಕೊಡುಗೆ ನೀಡಿರುವ ಕೆವಿಎಸ್ ಕುಟುಂಬಕ್ಕೆ ಜೆಡಿಎಸ್ ಅವಮಾನ ಮಾಡಿದೆ ಎಂದು ಟೀಕಿಸಲಾಗುತ್ತಿದೆ. ಇನ್ನು ದಳಪತಿಗಳಿಂದ ಬಂಡಾಯಗಾರರ ಮನವೊಲಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದರೂ ಪರಿಸ್ಥಿತಿ ಕೈ ಮೀರಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನದಲ್ಲಿ ಏನ್ನೆಲ್ಲ ಬೆಳವಣಿಗೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net