

ಲಕ್ಕೂರು: ದೇವಾಲಯದ ಅಭಿವೃದ್ಧಿ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು. ಎಲ್ಲರೂ ಒಗ್ಗಟ್ಟಾಗಿ ದೇವಾಲಯದ ಪ್ರಗತಿಗೆ ಶ್ರಮಿಸೋಣ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಚಿಕ್ಕತಿರುಪತಿ ಗ್ರಾಮದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ 108 ಅಡಿ ರಾಜಗೋಪುರದ ಮಹಾದ್ವಾರಕ್ಕೆ ಬಾಗಿಲನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ದೇವಾಲಯದ ಮಹಾದ್ವಾರಕ್ಕೆ ಸುಮಾರು 40 ಲಕ್ಷ ರೂ.ವೆಚ್ಚ ಮಾಡಿದ್ದು, ಟೀಕ್ ಹಾಗೂ ಹೊನ್ನೆಯ ಮರದಿಂದ ಬಾಗಿಲನ್ನು ಮಾಡಿ ಅಳವಡಿಸಲಾಗುತ್ತಿದೆ. ಈ ಬಾಗಿಲನ್ನು ಮಂಗಳೂರು ಜಿಲ್ಲೆಯಲ್ಲಿ ನಿರ್ಮಿಸಿ ಅಲ್ಲಿಂದ ಚಿಕ್ಕತಿರುಪತಿಗೆ ತರಲಾಗಿದೆ. ಪ್ರಸ್ತುತ ಪೂಜೆಯನ್ನು ನೆರವೇರಿಸಲಾಗಿದ್ದು, ಮೂರು ದಿನಗಳ ಅವಧಿಯಲ್ಲಿ ಬಾಗಿಲನ್ನು ಅಳವಡಿಸಲಾಗುವುದು. ಬಾಗಿಲ ಮೇಲೆ ದೇವರ ದಶವಾತರದ ಚಿತ್ರಗಳು ಬಹಳ ಅಂದವಾಗಿ ಮೂಡಿ ಬಂದಿವೆ. ದಾನಿಗಳ ಹಾಗೂ ಗ್ರಾಪಂ ನೆರವಿನಿಂದ ದೇವಾಲಯದ ಮುಂಭಾಗದಲ್ಲಿ ಟೈಲ್ಸ್ ಅಳವಡಿಸಲಾಗುವುದು ಎಂದರು.
ಚಿಕ್ಕತಿರುಪತಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಪ್ರತಿ ವರ್ಷ ಲಕ್ಷಾಂತರ ಭಕಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ರಥೋತ್ಸವ ಸಮಯದಲ್ಲಿ 90 ಅಡಿಯ ರಥ ಚಲಿಸುವುದಕ್ಕೆ ಬಹಳ ತೊಂದರೆಯಾಗಿತ್ತು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಿಕ್ಕತಿರುಪತಿಗೆ ಆಗಮಿಸಿ ರಥ ಬೀದಿಯನ್ನು ವೀಕ್ಷಿಸಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸುವುದಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ರಥ ಬೀದಿ ನಿಮಾರ್ಣವಾಗಿದೆ. ಅಲ್ಲದೆ ಚಿಕ್ಕತಿರುಪತಿ ಗ್ರಾಮವನ್ನು ಒಂದೆ ಸಮಯಕ್ಕೆ ಉನ್ನತವಾಗಿ ಅಭಿವೃದ್ಧಿಪಡಿಸುವುದಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ ಎಂದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ತೇಜಸ್ವಿನಿ, ಭಾಗ್ಯಶ್ರೀ, ಕೃಷ್ಣಮೂರ್ತಿ, ಗೋಪಾಲ್, ಶ್ರೀನಿವಾಸಯ್ಯ, ತಿಮ್ಮರಾಯಪ್ಪ, ಶ್ರೀನಿವಾಸನ್, ಮುಖಂಡರಾದ ಎಟ್ಟಕೋಡಿ ವೀರಭದ್ರಪ್ಪ, ಧರಣಿ ಭಾಬು, ವೆಂಕಟೇಶ್ಗೌಡ, ಎ.ಕೆ.ವೆಂಕಟೇಶ್ ಇದ್ದರು.