

ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಪರ ರ‌್ಯಾಲಿ ನಡೆಸಿ ಮತಯಾಚನೆ ಮಾಡಿದ ಅವರು, ರೈತ ಹಾಗೂ ಜನ ವಿರೋಧಿ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಮಂಡಿಸಿದಾಗ ಅದಕ್ಕೆ ಜೆಡಿಎಸ್ ಬೆಂಬಲ ನೀಡಿತ್ತು. ಭ್ರಷ್ಟಾಚಾರದಲ್ಲಿ ಈ ಎರಡು ಪಕ್ಷಗಳು ಒಂದೇ ಆಗಿವೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರದಲ್ಲಿಯೂ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದರೂ ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಒಂದೆಡೆ ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಸ್ಥಗಿತಗೊಳಿಸಿದರು. ಅತ್ತ ಅಭಿವೃದ್ಧಿ ಯೋಜನೆಗಳನ್ನು ಮಾಡಲಿಲ್ಲ. ಜತೆಗೆ ಜೆಡಿಎಸ್ 37 ಸೀಟ್ ಗೆದ್ದರೂ ಕಾಂಗ್ರೆಸ್ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಆದರೆ ದಳಕ್ಕೆ ಸಂಪೂರ್ಣ ಬೆಂಬಲ ನೀಡಿದ ಜಿಲ್ಲೆಯ ಜನರಿಗೆ ಕೃತಜ್ಞತೆ ಹೇಳುವ ಕೆಲಸವನ್ನು ಎಚ್‌ಡಿಕೆ ಮಾಡಲಿಲ್ಲ ಎಂದು ಟೀಕಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಸರ್ವೀಸ್ ರಸ್ತೆಗಳು ಸರಿಯಾಗಿಲ್ಲ. ಆದರೂ ಈ ಬಗ್ಗೆ ಜಿಲ್ಲೆಯ ಶಾಸಕರು ಪ್ರಶ್ನೆ ಮಾಡಲಿಲ್ಲ. ಇವರ ಆಡಳಿತಕ್ಕೆ ಜನರು ಬೇಸತ್ತಿದ್ದು, ಬದಲಾವಣೆಯ ನಿರೀಕ್ಷೆ ಹೊಂದಿದ್ದಾರೆ. ಇನ್ನು ಕಾಂಗ್ರೆಸ್ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ, ವಿದ್ಯುತ್ ಬಿಲ್ ಪಾವತಿಸುವ ನಿರ್ಧಾರ ಮಾಡಿದೆ. ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಘೋಷಣೆ ಮಾಡಿದೆ. ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕಾದರೆ ರವಿಕುಮಾರ್ ಗಣಿಗ ಗೆಲ್ಲಬೇಕು. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿರುವುದಕ್ಕೆ ಜಿಲ್ಲಾ ಕೇಂದ್ರ ಅಭಿವೃದ್ಧಿಯಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ಇನ್ನು ಬೆರಳಣಿಕೆಯಷ್ಟು ದಿನಗಳಷ್ಟೇ ಇದ್ದು, ಎಲ್ಲರೂ ಉತ್ಸಾಹದಿಂದ ಚುನಾವಣೆ ಮಾಡಬೇಕು. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ಪ್ರತಿ ಮನೆಗೆ ತಲುಪಿಸಬೇಕು. ಜತೆಗೆ ಪ್ರತಿ ಮನೆಗೂ ಹೋಗಿ ಮತ ಕೇಳಬೇಕು. ಇದಲ್ಲದೆ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡಲು 5 ಲಕ್ಷ ರೂ ಬಡ್ಡಿರಹಿತ ಸಾಲ ನೀಡಲು ಕಾಂಗ್ರೆಸ್ ತೀರ್ಮಾನ ಮಾಡಿದೆ. ಪಕ್ಷದಿಂದ ಘೋಷಣೆ ಮಾಡಿರುವ ಎಲ್ಲ ಕಾರ್ಯಕ್ರಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ರವಿಕುಮಾರ್ ಗಣಿಗ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಚ್.ಕೃಷ್ಣ, ಎಂ.ಎಸ್.ಚಿದಂಬರ್, ಸಿದ್ಧರೂಢ ಸತೀಶ್‌ಗೌಡ, ಪ್ರಶಾಂತ್‌ಬಾಬು, ಸಿದ್ದರಾಮೇಗೌಡ, ಹಾಲಹಳ್ಳಿ ರಾಮಲಿಂಗಯ್ಯ ಇತರರಿದ್ದರು.