ರಾಜಕೀಯ ಬೆಳವಣಿಗೆ ಸಹಿಸದೆ ಕ್ಷೇತ್ರದಲ್ಲಿ ಸುಳ್ಳು ವದಂತಿ: ಮಂಡ್ಯ ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಾಮನಿರ್ದೇಶಕ ಡಾ.ಇಂದ್ರೇಶ್

Dr.I
Published on

ಪಾಂಡವಪುರ: ರಾಜಕೀಯ ದ್ವೇಷ ಮತ್ತು ಅಸೂಯೆ ಮೈಗೂಡಿಸಿಕೊಂಡಿರುವ ಕೆಲವರು ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸಲಾರದೆ ಇ.ಡಿ ಅಸ್ತ್ರದ ಸುಳ್ಳು ವದಂತಿ ಹಬ್ಬಿಸುವ ಮೂಲಕ ಕ್ಷೇತ್ರದ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಾಮ ನಿರ್ದೇಶಕ ಡಾ.ಇಂದ್ರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿರಂತರ ಸಮಾಜ ಸೇವೆಯಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನರ ಮನ ಗೆಲ್ಲುವ ಕೆಲಸ ಮಾಡಿದ್ದೇನೆ. ನಾನು ಕಾಂಗ್ರೆಸ್‌ನ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರಂತೆ ಅಥವಾ ಇನ್ಯಾವುದೇ ಪಕ್ಷದ ನಾಯಕರ ರೀತಿಯಲ್ಲಿ ಅಕ್ರಮ ಹಣ ಸಂಪಾದನೆ ಮಾಡಿಲ್ಲ. ಇ.ಡಿ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಗಳ ಅಸ್ತ್ರ ಪ್ರಯೋಗದ ಸುಳ್ಳು ವದಂತಿ ಹಬ್ಬಿಸಿದರೂ ನಾನು ಹೆದರುವ ಪ್ರಶ್ನೆಯೇ ಇಲ್ಲ. ಇಂತಹ ವದಂತಿಗಳನ್ನು ಹಬ್ಬಿಸಿದ ಕೆಲವರಿಗೆ ವಿಕೃತ ಖುಷಿ ಸಿಗಬಹುದು ಎಂದು ತಿರುಗೇಟು ನೀಡಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಆರೋಗ್ಯ ಶಿಬಿರ ಆಯೋಜಿಸಿ 700ಕ್ಕೂ ಹೆಚ್ಚು ರೋಗಿಗಳಿಗೆ ನನ್ನ ವೈಯಕ್ತಿಕ ಹಣದಿಂದ ಶಸ್ತ್ರಚಿಕಿತ್ಸೆ ಮಾಡಿಸಿದ್ದೇನೆ. ಅತಿವೃಷ್ಟಿಯಿಂದ ನೊಂದವರಿಗೆ, ಅಪಘಾತದಲ್ಲಿ ಮಡಿದವರಿಗೆ, ಕರೊನಾ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನ್ನ ಬದುಕು ಮತ್ತು ನಾನು ನಡೆಸುವ ಎಲ್ಲ ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ. ಯಾರೂ ಬೇಕಾದರೂ ಬಂದು ಪರಿಶೀಲನೆ ಮಾಡಬಹುದು ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net