ಮಳವಳ್ಳಿಯಲ್ಲಿ ‘ಕೈ’ನಿಂದ ಒಕ್ಕಲಿಗ ಅಸ್ತ್ರ: ಮರಿತಿಬ್ಬೇಗೌಡ ಶೀಘ್ರವೇ ದಳಕ್ಕೆ ಗುಡ್‌ಬೈ

IMG20230307131203
Published on

ಮಂಡ್ಯ: ಜಿಲ್ಲೆಯ ಮೀಸಲು ಕ್ಷೇತ್ರ ಮಳವಳ್ಳಿಗೆ ಸಂಬಂಧಿಸಿದಂತೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಕ್ಕಲಿಗ ಅಸ ಪ್ರಯೋಗಿಸಿದೆ. ಈ ಮೂಲಕ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್‌ಗೆ ಟಕ್ಕರ್ ನೀಡಿದೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಒಕ್ಕಲಿಗ ಸಮುದಾಯದ ಬೆಂಬಲ ಬಹುಮುಖ್ಯ ಅಂಶವಾಗಿತ್ತು. ಅಂದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆನ್ನುವ ಅಸವನ್ನು ದಳ ಬಳಸಿಕೊಂಡಿತ್ತು. ಪರಿಣಾಮ ಸಮುದಾಯದವರು ಎಚ್‌ಡಿಕೆ ಬೆನ್ನಿಗೆ ನಿಲ್ಲುವುದರ ಜತೆಗೆ ಜೆಡಿಎಸ್ ಅಭ್ಯರ್ಥಿ ಡಾ.ಅನ್ನದಾನಿ ಅವರನ್ನು ಗೆಲ್ಲಿಸಿದ್ದರು. ಆದರೀಗ ಜೆಡಿಎಸ್‌ನ ಅದೇ ಅಸಕ್ಕೆ ಕಾಂಗ್ರೆಸ್ ಪ್ರತ್ಯಾಸ ಹೂಡಿದೆ. ಅಂತೆಯೇ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉನ್ನತ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ನಿಚ್ಚಳವಾಗಿದ್ದು, ಸಮುದಾಯ ಪರವಾಗಿ ನಿಲ್ಲಬೇಕೆಂದು ಕಾಂಗ್ರೆಸ್ ಮನವಿ ಮಾಡಿಕೊಳ್ಳುತ್ತಿದೆ.

ಒಕ್ಕಲಿಗರು ನಿರ್ಣಾಯಕ: ಮಳವಳ್ಳಿ ಕ್ಷೇತ್ರದ ಚುನಾವಣೆಯ ಲಿತಾಂಶವನ್ನು ಒಕ್ಕಲಿಗ ಸಮುದಾಯ ನಿರ್ಣಯಿಸುವ ಶಕ್ತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ಸಮುದಾಯದ ಬೆಂಬಲವನ್ನು ಜೆಡಿಎಸ್ ಪಡೆದುಕೊಂಡಿತ್ತು. ಮಾತ್ರವಲ್ಲದೆ ಪ್ರಮುಖವಾಗಿ ಪಿ.ಎಂ.ನರೇಂದ್ರಸ್ವಾಮಿ ಸಮುದಾಯದ ವಿರೋಧಿ ಎನ್ನುವ ಅಂಶವನ್ನು ಬಳಸಿಕೊಳ್ಳಲಾಗಿತ್ತು. ಆದರೆ ಅಂದು ಜೆಡಿಎಸ್‌ನ ಈ ದಾಳವನ್ನು ಕಾಂಗ್ರೆಸ್ ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಪರಿಣಾಮ ಸೋಲು ಕಾಣುವಂತಾಗಿತ್ತು.

ಇದೀಗ ಆ ತಪ್ಪನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಅದರಂತೆ ಜೆಡಿಎಸ್ ಅಸವನ್ನೇ ಬಳಸಿಕೊಳ್ಳಲಾಗುತ್ತಿದೆ. ಇದರ ಮೊದಲ ಹಂತವಾಗಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಮಳವಳ್ಳಿ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಸಮುದಾಯದ ಮುಖಂಡರ ಸಭೆ ಆಯೋಜಿಸಲಾಗಿತ್ತು. ಒಕ್ಕಲಿಗ ನಾಯಕರೂ ಆಗಿರುವ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ಎಂಎಲ್‌ಸಿ ದಿನೇಶ್‌ಗೂಳಿಗೌಡ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

ಈ ವೇಳೆ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸಮುದಾಯ ಬೆನ್ನಿಗೆ ನಿಂತರೂ ಒಕ್ಕಲಿಗ ನಾಯಕರು ರಾಜಕೀಯವಾಗಿ ಬೆಳೆಯದಂತೆ ಜೆಡಿಎಸ್ ವರಿಷ್ಠರು ಮಾಡಿದ ತಂತ್ರಗಾರಿಕೆಯನ್ನು ವಿವರಿಸಿದ್ದಾರೆ. ಪ್ರಮುಖವಾಗಿ ಧರ್ಮಸಿಂಗ್ ಅಧಿಕಾರಾವಧಿಯಲ್ಲಿ ಡಿಕೆಶಿಗೆ ಸಚಿವ ಸ್ಥಾನ ತಪ್ಪಿಸಿದ್ದು, 2004ರಲ್ಲಿ ಎಸ್.ಎಂ.ಕೃಷ್ಣ ಸಿಎಂ ಆಗಿ ಮುಂದುವರೆಯಲು ಬೇಡವೆಂದಿದ್ದು ಮತ್ತು ಜಿಪಂ ಉಪಾಧ್ಯಕ್ಷರಾಗಲು ಅವಕಾಶವಿದ್ದಾಗ ಚಲುವರಾಯಸ್ವಾಮಿ ವಿರುದ್ಧ ಷಡ್ಯಂತ್ರ ನಡೆಸಲಾಗಿತ್ತೆನ್ನುವ ಅಂಶವನ್ನು ಸಮುದಾಯದ ಮುಂದಿಟ್ಟರು. ಇದು ಸಭೆಯಲ್ಲಿ ಹಾಜರಿದ್ದವರನ್ನು ಭಾವನಾತ್ಮಕವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಒಟ್ಟಾರೆ ಮೀಸಲು ಕ್ಷೇತ್ರದಲ್ಲಿ ಚುನಾವಣಾ ಕಣ ಹಂತ ಹಂತವಾಗಿ ಕಾವೇರುತ್ತಿದೆ. ಇದಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳಿಂದಲೂ ಗೇಮ್‌ಪ್ಲ್ಯಾನ್ ನಡೆಯುತ್ತಿದ್ದು, ಯಾರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಡಿಕೆಶಿಗೆ ಉನ್ನತ ಸ್ಥಾನದ ಅವಕಾಶ: 25 ವರ್ಷದ ನಂತರ ಅಂದರೆ ಎಸ್.ಎಂ.ಕೃಷ್ಣ ಬಳಿಕ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇದಷ್ಟೇ ಅಲ್ಲದೆ ಹಳೇ ಮೈಸೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಪ್ರಭಾವಿಯಾಗಿರುವ ಒಕ್ಕಲಿಗ ಸಮುದಾಯ ಒಂದು ಅವಕಾಶವನ್ನು ಕೊಟ್ಟರೆ ಡಿಕೆಶಿಗೆ ಪಕ್ಷದಲ್ಲಿ ಉನ್ನತ ಸ್ಥಾನದ ಅವಕಾಶವಿದೆ. ಡಿಕೆಶಿ ಎಂದಿಗೂ ಸಮುದಾಯವನ್ನು ಕಡೆಗಣಿಸಿಲ್ಲ. ಹಿಂದೆ ಡಿಕೆಶಿಗೆ ಸಚಿವ ಸ್ಥಾನ ಕೊಡುವುದನ್ನು ಜೆಡಿಎಸ್ ವರಿಷ್ಠರು ವಿರೋಧಿಸಿದರ ಹೊರತಾಗಿಯೂ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬರುವ ಸಮಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಆಗಲು ಶಿವಕುಮಾರ್ ಬೆನ್ನಿಗೆ ನಿಂತಿದ್ದನ್ನು ಸಭೆಯಲ್ಲಿ ನೆನಪಿಸಲಾಗಿದೆ. ಆದ್ದರಿಂದ ಒಮ್ಮೆ ಅವಕಾಶ ಕೊಟ್ಟು ನೋಡಿ ಎನ್ನುವ ಮನವಿಯನ್ನು ಸಮುದಾಯದ ಮುಂದಿಟ್ಟಿದ್ದಾರೆ.

ಇನ್ನು ಪಿ.ಎಂ.ನರೇಂದ್ರಸ್ವಾಮಿ ಅವರು ಒಕ್ಕಲಿಗ ಸಮುದಾಯದ ವಿರೋಧಿಯಲ್ಲ. ಡಿಕೆಶಿ ಜತೆಗೆ ಮೂರು ದಶಕದ ಸ್ನೇಹ ಹೊಂದಿದ್ದಾರೆ. ಮಾತ್ರವಲ್ಲದೆ ಮಳವಳ್ಳಿ ಕ್ಷೇತ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಮುದಾಯದವರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆಂದು ಒಕ್ಕಲಿಗ ಸಮುದಾಯದ ಜಿಪಂ, ತಾಪಂನ ಮಾಜಿ ಸದಸ್ಯರು ಸಭೆಯಲ್ಲಿ ಹೇಳಿದ್ದಾರೆ. ಇನ್ನು ನರೇಂದ್ರಸ್ವಾಮಿ ಅಧಿಕಾರದಲ್ಲಿದ್ದ ವೇಳೆ ಮಳವಳ್ಳಿ ತಾಲೂಕಿನ ಅನುಷ್ಠಾನಗೊಳಿಸಿದ್ದ ನೀರಾವರಿ ಯೋಜನೆಗಳು ಸಮುದಾಯದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ.

ಶೀಘ್ರವೇ ಮರಿತಿಬ್ಬೇಗೌಡ ಕಾಂಗ್ರೆಸ್‌ಗೆ: ಪ್ರಮುಖವಾದ ಅಂಶವೆಂದರೆ ಜೆಡಿಎಸ್ ಎಂಎಲ್‌ಸಿ ಮರಿತಿಬ್ಬೇಗೌಡ ಶೀಘ್ರವೇ ಕಾಂಗ್ರೆಸ್ ಸೇರುತ್ತಿರುವುದು ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹಿನ್ನಡೆಯುಂಟಾಗುವಂತಾಗಿದೆ. ಮರಿತಿಬ್ಬೇಗೌಡ ಪಕ್ಷ ಸೇರ್ಪಡೆ ಬಗ್ಗೆ ಸಭೆಯಲ್ಲಿ ಚಲುವರಾಯಸ್ವಾಮಿ ಖಚಿತಪಡಿಸಿದ್ದಾರೆ. ಜೆಡಿಎಸ್ ವರಿಷ್ಠರಿಂದ ಆಗಿರುವ ನೋವಿನಿಂದ ಮರಿತಿಬ್ಬೇಗೌಡ ಬೇಸತ್ತಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಪಕ್ಷ ಸೇರ್ಪಡೆಯಾಗಲು ಸಾಧ್ಯವಾಗಿಲ್ಲವಷ್ಟೇ ಎಂದಿದ್ದಾರೆ.

ಇನ್ನು ಒಕ್ಕಲಿಗ ಸಮುದಾಯ ನಾಯಕ, ನೇರನುಡಿಯ ಮರಿತಿಬ್ಬೇಗೌಡ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಸಮಯದಲ್ಲಿಯೇ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಾತ್ರವಲ್ಲದೆ ಜೆಡಿಎಸ್‌ನಲ್ಲಿ ನಿಷ್ಠಾವಂತರಿಗೆ ಕಾಲವಿಲ್ಲ ಎನ್ನುವುದನ್ನು ಬಹಿರಂಗವಾಗಿಯೇ ಹೇಳಿದ್ದರು. ಇದು ಆ ಚುನಾವಣೆಯಲ್ಲಿ ದಳದ ಹಿನ್ನಡೆಗೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net