

ಮಂಡ್ಯ: ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರು ಮಂಡ್ಯ ವಿಧಾನಸಭಾ ಕ್ಷೇತ್ರದವರಲ್ಲ. ಅವರು ಚುನಾವಣೆಗೆ ಸಂಬಂಧಿಸಿದಂತೆ ನಮಗೆ ಕಾಂಪಿಟೇಟರ್ ಕೂಡ ಅಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಆರು ತಿಂಗಳ ರಾಜಕಾರಣಕ್ಕೆ ಬೆಲೆ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಆದ ಜೆಡಿಎಸ್ ಮುಖಂಡ ಎಚ್.ಎನ್.ಯೋಗೇಶ್ ಹೇಳಿದರು.
ನಗರದ ಕಾಳಿಕಾಂಭ ದೇವಾಲಯದ ಆವರಣದಲ್ಲಿ 20 ಬಸ್ ಹಾಗೂ ಕಾರುಗಳಲ್ಲಿ ಹೊರಟ 1100 ಜನರ ಎಂ.ಶ್ರೀನಿವಾಸ್ ಧರ್ಮಸ್ಥಳ 5ನೇ ಯಾತ್ರೆಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮಚಂದ್ರು ಎಲ್ಲಿದ್ರು? ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರಾ? ನಮ್ಮ ಕ್ಷೇತ್ರದಲ್ಲಿ ನಾವು ಕೆಲಸ ಮಾಡಿದ್ದೇವೆ. ಗ್ರಾಮ ಪಂಚಾಯಿತಿ ಚುನಾವಣೆ, ಸೊಸೈಟಿ ಚುನಾವಣೆ, ಡೇರಿ ಚುನಾವಣೆಯನ್ನು ನಾವು ಮಾಡಿದ್ದೇವೆ. ತಳಮಟ್ಟದಿಂದ ಜನರ ಕಷ್ಟದ ಜತೆ ನಾವು ಬೆರೆತಿದ್ದೇವೆ. ಜನರ ಕಷ್ಟಕ್ಕೆ ಸ್ಪಂದಿಸುವವರನ್ನು ಜನರು ಆಶೀರ್ವಾದ ಮಾಡುತ್ತಾರೆ ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆ.ಎಸ್.ವಿಜಯಾನಂದ ಹಾಗೂ ನಾನು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇವೆ. ಜಿಪಂ ಸದಸ್ಯರಾಗಿ ಇಬ್ಬರೂ ಕೆಲಸ ಮಾಡಿದ್ದೇವೆ. ಟಿಕೆಟ್ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದು, ಯಾವುದೇ ಭಿನ್ನಮತ ಇಲ್ಲ. ಮೊದಲ ಪಟ್ಟಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಹೆಸರಲ್ಲಿ ನನ್ನ ಹೆಸರು ಇರುವ ಆಶಾಭಾವನೆ ಇದೆ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ಪಟ್ಟಿಯನ್ನು ಕೊನೆಯಲ್ಲಿ ಪ್ರಕಟ ಮಾಡುತ್ತಾರೆ. ನನಗೆ ಖಂಡಿತ ಟಿಕೆಟ್ ಸಿಗುವ ಭರವಸೆ ಇದೆ. ಎಲ್ಲ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ಇದೆ. ಕೆಲಸ ಮಾಡುವವರಿಗೆ ಮಾತ್ರ ನಮ್ಮ ಪಕ್ಷ ಅವಕಾಶ ನೀಡುತ್ತದೆ. ನಾವು ಸಕ್ರಿಯವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇವೆ ಎಂದು ಹೇಳಿದರು.
ಕೆಲ ಕಾರಣಗಳಿಂದ ಎಷ್ಟೋ ಜನರು ಧರ್ಮಸ್ಥಳ ನೋಡಲು ಆಗಿರುವುದಿಲ್ಲ. ಜನರಿಗೆ ಧರ್ಮಸ್ಥಳ ಯಾತ್ರೆ ಮಾಡಿಸುವುದು ಒಂದು ಜವಾಬ್ದಾರಿ. ದಿನ ನಿತ್ಯದ ಕೆಲಸ ಕಾರ್ಯದ ಒತ್ತಡದಲ್ಲಿ ಸಾಧ್ಯವಾದಷ್ಟು ಧಾರ್ಮಿಕ ಪುಣ್ಯಕ್ಷೇತ್ರಗಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಯಾತ್ರೆ ಹಮ್ಮಿಕೊಂಡು ಜನರನ್ನು ಧರ್ಮಸ್ಥಳಕ್ಕೆ ಕಳುಹಿಸುತ್ತಿದ್ದೇನೆ. ಇದರ ಉದ್ದೇಶ ಬೇರೆ ಏನಿಲ್ಲ. ಜನರ ಸೇವೆ ನನ್ನ ಉದ್ದೇಶ ಎಂದು ಹೇಳಿದರು.
ನಗರಸಭಾ ಸದಸ್ಯ ನಾಗೇಶ್, ಮುಖಂಡರಾದ ಪುಟ್ಟಸ್ವಾಮಿ, ಶಶಿಕುಮಾರ್, ಶಿವಪ್ರಕಾಶ್ ಇತರರಿದ್ದರು.