ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಶಾಸಕ ಗಾಲಿ ಜನಾರ್ದನ ರೆಡ್ಡಿ

BLY-25-3
ಬಳ್ಳಾರಿ ನಗರದ ಅಹಂಭಾವಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ವತಿಯಿಂದ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಗಾಲಿ ಲಕ್ಷ್ಮೀ ಅರುಣಾ ಉದ್ಘಾಟಿಸಿದರು.
Published on

ಬಳ್ಳಾರಿ : ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಸ್ಥಳೀಯ ಶಾಸಕರು ಮತ್ತು ಸಚಿವರು ಮುಂದುವರಿಸಬೇಕು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಅಹಂಭಾವಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ವತಿಯಿಂದ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಅವರು ಮಾತನಾಡಿದರು.

ಈ ಹಿಂದೆ ನಾನು ಬಳ್ಳಾರಿಯಲ್ಲಿ ಅಧಿಕಾರ ಇದ್ದಾಗ, ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ, ನನ್ನೊಂದಿಗೆ ಇದ್ದು ನನ್ನ ಬಿಟ್ಟು ಹೋದವರಿಗೆ ಈ ಚುನಾವಣೆಯಲ್ಲಿ ಜನರು ಪಾಠ ಕಲಿಸಿದ್ದಾರೆ ಎಂದರು.

ಪ್ರಸಕ್ತ ಚುನಾವಣೆಯಲ್ಲಿ ಗಾಲಿ ಲಕ್ಷ್ಮೀ ಅರುಣಾ ಅವರು ಸಾಕಷ್ಟು ಶ್ರಮ ಹಾಕಿದರು, ಆದರೆ ನಮ್ಮವರೇ ಕೆಲವರು ವಿರೋಧಿಗಳ ಜೊತೆ ಕೈ ಜೋಡಿಸಿ ಸೋಲಿಸಿದರು, ತಾವೂ ಸೋತು ಮನೆಯಲ್ಲಿ ಕೂತರು ಎಂದು ಹೇಳಿದರು.

ನಮ್ಮನ್ನು ನಂಬಿದ ಯಾವುದೇ ಕಾರ್ಯಕರ್ತರು ಇರಬಹುದು ಅವರನ್ನು ನಾನು ಕೈ ಬಿಡುವುದಿಲ್ಲ. ಚುನಾವಣೆ ಮುಗಿದ ಮೇಲೆ ರಾಜಕೀಯ ಮಾಡಬಾರದು, ಅಭಿವೃದ್ಧಿ ಮಾಡಬೇಕು, ನಾನು ಸಚಿವನಾಗಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಎಂದರು.

ಇತ್ತೀಚೆಗೆ ನಡೆದ ವಿಧಾನಸಭೆ ಚರ್ಚೆಯಲ್ಲಿ ಭಾಗವಹಿಸಿ, ಬಳ್ಳಾರಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ್ದೇನೆ. ಅದಕ್ಕೆ ಸಚಿವ ಎಂ.ಬಿ.ಪಾಟೀಲ್ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಾಕಿ ಕಾಮಗಾರಿ, ಬಳ್ಳಾರಿ-ಹಂಪಿ ಗ್ರೀನ್ ಫೀಲ್ಡ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಬಳ್ಳಾರಿಯ ಶಾಸಕರು, ಸಚಿವರು ಗಮನ ಹರಿಸಬೇಕು, ನನ್ನನ್ನು ಜನರು ಮರೆಯುವ ಹಾಗೇ ಕೆಲಸ ಮಾಡಬೇಕು ಎಂದರು.
ಬಳ್ಳಾರಿಯಲ್ಲಿ ಗೆದ್ದಿರುವ ಯಾವುದೇ ಶಾಸಕರು, ಸಚಿವರು ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ನಾನು ಸುಮ್ಮನೆ ಕೂರಲ್ಲ, ಕೇವಲ 70 ಕಿ.ಮೀ. ದೂರದಲ್ಲಿ ನಾನಿದ್ದೇನೆ. ನನ್ನ ಕಾರ್ಯಕರ್ತರ ರಕ್ಷಣೆಗೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.

ಈ ಹಿಂದೆ 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸುಷ್ಮಾ ಸ್ವರಾಜ್ ಅವರು ಪರಾಜಿತರಾದರು, ಆದರೆ ಬಳ್ಳಾರಿಯ ಜನರ ಪ್ರೀತಿಯನ್ನು ಕಂಡು ಅವರು ಪ್ರತಿ ವರ್ಷ ಬಳ್ಳಾರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಬರುವುದಾಗಿ ಹೇಳಿದ್ದರು, ಅವರು ಬಂದಾಗ ಅದ್ದೂರಿ ಕಲ್ಯಾಣ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಸಾಮೂಹಿಕ ವಿವಾಹ ಏರ್ಪಡಿಸುತ್ತ ಬಂದಿದ್ದೇವೆ ಎಂದು ತಿಳಿಸಿದರು.

ಕೆಆರ್‌ಪಿಪಿ ಬಳ್ಳಾರಿ ನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗಾಲಿ ಲಕ್ಷ್ಮೀಅರುಣಾ ಮಾತನಾಡಿ, ಸಾಮೂಹಿಕ ವಿವಾಹಗಳಿಗೆ ಇತಿಹಾಸವಿದೆ. ಸಾಮೂಹಿಕ ವಿವಾಹ ನಡೆಸುವುದು ಜನಾರ್ದನ ರೆಡ್ಡಿ ಅವರ ಕನಸಾಗಿತ್ತು . ಕುತಂತ್ರ ರಾಜಕೀಯದಿಂದ ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿಯಿಂದ ದೂರ ಉಳಿಯುವಂತೆ ಮಾಡಲಾಯಿತು. ಹೀಗಾಗಿ 12 ವರ್ಷ ಸಾಮೂಹಿಕ ವಿವಾಹ ಸ್ಥಗಿತವಾದವು. ಸಾವಿರಾರು ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿದ ಕೀರ್ತಿ, ಶ್ರೇಯಸ್ಸು ಜನಾರ್ದನ ರೆಡ್ಡಿ ಅವರಿಗೆ ಸಲ್ಲಬೇಕು. ಇಂದು ಸಾಮೂಹಿಕ ವಿವಾಹಕ್ಕೆ ನಾನು ಸಾಕ್ಷಿಯಾಗಿರುವುದು ನನ್ನ ಸೌಭಾಗ್ಯ ಎಂದರು.

ಸಿರುಗುಪ್ಪ ಪರಾಜಿತ ಕೆಆರ್‌ಪಿಪಿ ಅಭ್ಯರ್ಥಿ ಧರೆಪ್ಪ ನಾಯಕ ಮಾತನಾಡಿ, ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಆಗಿದ್ದರೆ ಅದು ಜನಾರ್ದನ ರೆಡ್ಡಿ ಅವರ ಅವಧಿಯಲ್ಲಿ ಮಾತ್ರ. ಕೆಲವರು ಸಚಿವರು ಇದ್ದೂ ಇಲ್ಲದಂತೆ ಇರುತ್ತಾರೆ. ಆದರೆ ಬಳ್ಳಾರಿಯ ವೈಭೋಗ ಕಂಡದ್ದು ರೆಡ್ಡಿ ಅವರ ಕಾಲದಲ್ಲಿ ಎಂದು ಹೇಳಿದರು.

ಅವರ ಜೊತೆಗೆ ಬಹಳ ಜನ ಇದ್ದರು, ಇಂದು ಇಲ್ಲ, ಆದರೆ ಅವರ ಆಲೋಚನೆ, ಯೋಜನೆಗಳ ಬಗ್ಗೆ ಇರುವ ಕಲ್ಪನೆ ಪ್ರಧಾನಿಗೂ ಇಲ್ಲ. ಶಾಸಕರಾಗಿ ಆಯ್ಕೆಯಾಗಿ ಮೊದಲ ವಿಧಾನಸಭೆಯಲ್ಲೇ ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ ಏಕೈಕ ಶಾಸಕ ಜನಾರ್ದನ ರೆಡ್ಡಿ ಅವರು ಎಂದರು.

ಇದೇ ವೇಳೆ 36 ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಮ್ಮರಚೇಡು ಸಂಸ್ಥಾನ ಕಲ್ಯಾಣ ಮಠದ ಕಲ್ಯಾಣಶ್ರೀ ಸಾನ್ನಿಧ್ಯವಹಿಸಿದ್ದರು. ಬ್ರಹ್ಮಣಿ ರೆಡ್ಡಿ, ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಗೋನಾಳ್ ರಾಜಶೇಖರ್ ಗೌಡ, ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್‌ಕುಮಾರ್, ಕಲ್ಪನಾ, ಮುಖಂಡರಾದ ಕೆ.ಎಸ್.ದಿವಾಕರ್, ಶ್ರೀನಿವಾಸ ರೆಡ್ಡಿ, ಮುನ್ನಾ ಭಾಯ್, ಹಂಪಿ ರಮಣ, ಶಿವಾರೆಡ್ಡಿ, ಮಾಜಿ ಮೇಯರ್ ವೆಂಕಟರಮಣ, ಪಕ್ಷದ ವಕ್ತಾರ ಸಂಜಯ ಬೆಟಗೇರಿ, ಆಲಿಖಾನ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net