

ಮಂಡ್ಯ: ಜೆಡಿಎಸ್ ಮಂಡ್ಯವನ್ನು ಯಾವತ್ತೂ ಗಣನೆಗೆ ತೆಗೆದುಕೊಂಡಿಲ್ಲ. ಜಿಲ್ಲೆಗೆ ದಳದ ಕೊಡುಗೆ ಏನು ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್‌ಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಮಂಡ್ಯ ಜಿಲ್ಲೆ ಎನ್ನುತ್ತಾರೆ. ಹಾಸನದಲ್ಲಿ 7 ಸೀಟು ಗೆಲ್ಲಲಿಲ್ಲ. ರಾಮನಗರದಲ್ಲಿ 4 ಸೀಟು ಗೆಲ್ಲಿಸಲಿಲ್ಲ. ಹಾಸನದಲ್ಲಿ ಅಪ್ಪ, ಅಣ್ಣ ಪೂರ್ಣ ಪ್ರಮಾಣದಲ್ಲಿ ಪ್ರತಿನಿಧಿಸುತ್ತಾರೆ. ರಾಮನಗರವನ್ನು ಕುಮಾರಸ್ವಾಮಿ ನನ್ನದೆಂದು ಹೇಳುತ್ತಾರೆ. ಮಂಡ್ಯ ನನ್ನ ಹೃದಯ ಎನ್ನುತ್ತಾರೆ. ಆದರೆ ಮಂಡ್ಯಕ್ಕೆ ಏನು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಧಿಕಾರಕ್ಕೆ ಬಂದಾಗ ಪಿಡಬ್ಲುೃಡಿ, ಹಣಕಾಸು, ಇಂಧನ, ನೀರಾವರಿ ಇಲಾಖೆ ಹಾಗೂ ಮುಖ್ಯಮಂತ್ರಿ ಸ್ಥಾನವನ್ನು ಯಾರಿಗೂ ನೀಡುವುದಿಲ್ಲ. ಅವೆಲ್ಲವೂ ಕುಂಟುಂಬದ ಪಾಲೇ ಆಗಿರುತ್ತವೆ. ಇಂತಹ ಸನ್ನಿವೇಶನದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯ ವಿಷಯ ಅಪ್ರಸ್ತುತವಲ್ಲವೇ ಎಂದ ಅವರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಬಿಟ್ಟು ಇನ್ಯಾವುದೇ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಜನಾದೇಶ ಪಡೆದಿಲ್ಲ. ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಜನರಿಂದ ಬಹುಮತ ಪಡೆದು ಅಧಿಕಾರ ನಡೆಸಿದವರು ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರು ಮಾತ್ರ. ಪ್ರಸ್ತುತ ಆ ಪರಿಸ್ಥಿತಿ ಇಲ್ಲ ಎಂಬುದು ಎಚ್‌ಡಿಕೆ ಅವರಿಗೂ ತಿಳಿದಿದೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಎಷ್ಟು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಗೆಲುವು ಕಂಡು ಸರ್ಕಾರ ಅಸ್ತಿತ್ವಕ್ಕೆ ಬಂದರೂ ಜೆಡಿಎಸ್‌ನಿಂದಾದ ಅಭಿವೃದ್ಧಿಯನ್ನು ಅವಲೋಕಿಸಿ ಮತದಾರರು ಸೂಕ್ತ ನಿರ್ಧಾರ ಕೈಗೊಳ್ಳುವ ಜಾಣ್ಮೆ ಹೊಂದಿದ್ದಾರೆ. ಅಧಿಕಾರಾವಧಿಯಲ್ಲಿ ಯಾವ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ? ಜಿಲ್ಲೆಯ ಅಭಿವೃದ್ಧಿಗೆ ಯಾವ ಯೋಜನೆಗಳು ಮಂಜೂರಾಗಿವೆ? ಮಹಿಳೆಯರು, ರೈತರು, ಯುವಕರು ಹಾಗೂ ಕಾರ್ಮಿಕರಿಗೆ ನೀಡಿದ ಭರವಸೆ ಈಡೇರಿಸಿದ್ದಾರೆಯೇ ಎಂಬ ಬಗ್ಗೆ ಯೋಚಿಸಿ ಮತದಾರರು ಸಮಯೋಚಿತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಜಿಲ್ಲೆಯ ಜನರ ಮುಂದಿದೆ. ಅದನ್ನು ಅವಲೋಕಿಸಿ ಮುಂದಿನ ವಿಧಾನಸಭೆ ಫಲಿತಾಂಶವನ್ನು ಜಿಲ್ಲೆಯ ಪ್ರಬುದ್ಧ ಮತದಾರರೇ ತೀರ್ಮಾನ ಮಾಡಲಿದ್ದಾರೆ. ಕುಮಾರಸ್ವಾಮಿ ದಲಿತರಿಗೆ ಡಿಸಿಎಂ ಹುದ್ದೆ ನೀಡುತ್ತೇನೆ ಎನ್ನುವ ಹೇಳಿಕೆಯಲ್ಲಿ ಗಹನವಾದ ಅಂಶವಿದೆ. ತಮ್ಮ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ದಲಿತರು, ಮುಸ್ಲಿಮರಿಗೆ ಅಧಿಕಾರ ಕೊಡುತ್ತೇನೆಂದು ಹೇಳುತ್ತಾರೆ. ರೈತರು ಹಾಗೂ ಮಹಿಳೆಯರ ಸಾಲ ಮನ್ನಾ ಮಾಡುತ್ತೇನೆಂದು ಹೇಳುತ್ತಾರೆ. ಪೂರ್ಣ ಪ್ರಮಾಣದಲ್ಲಿ ಅಂದರೆ 120 ಶಾಸಕರು ಜಯ ಗಳಿಸಿದರೆ ಮಾತ್ರ ನನ್ನ ಆಶ್ವಾಸನೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಅವರ ಹೇಳಿಕೆ ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕೆಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಮಹಿಳೆಯರು, ಸ್ವಸಹಾಯ ಸಂಘದ ಸಂಪೂರ್ಣ ಸಾಲ ಮನ್ನಾ, ಗಿರವಿ ಇಟ್ಟ ಒಡವೆಗಳ ಸಾಲವನ್ನು ಮನ್ನಾ ಮಾಡುತ್ತೇನೆಂದು ಎಚ್‌ಡಿಕೆ ಹೇಳಿದ್ದರು. ಆಗ 120 ಸ್ಥಾನ ಬರಲಿಲ್ಲ. ಆದರೂ ಮುಖ್ಯಮಂತ್ರಿ ಗಾದಿ ಎಚ್‌ಡಿಕೆ ಅವರಿಗೆ ಒಲಿಯಿತು. 37 ಶಾಸಕರು ಆಯ್ಕೆಯಾಗಿ ಸಿಎಂ ಆದರೂ ಮಂಡ್ಯ ಸಕ್ಕರೆ ಕಾರ್ಖಾನೆ ಆರಂಭಿಸಲು ಸಾಧ್ಯವಾಗಲಿಲ್ಲ. ಇದು ಜಿಲ್ಲೆಯ ಜನರಿಗೆ ತಿಳಿದಿಲ್ಲವೇ ಎಂದು ವ್ಯಂಗ್ಯವಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ 8 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂದೇಳಿಕೊಳ್ಳುತ್ತಾರೆ. ಆ ಹೇಳಿಕೆಯಿಂದ ಯಾವುದಾದರೂ ಪ್ರಯೋಜನವಾಗಿದೆಯೇ? ಮಂಡ್ಯ ನಗರ ಅಥವಾ ಗ್ರಾಮೀಣ ಪ್ರದೇಶದ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆಯೇ ಅಥವಾ ಮಹಿಳೆಯರ ಸ್ತ್ರೀಶಕ್ತಿ ಸಂಘದ ಸಾಲ ಮನ್ನಾವಾಗಿದೆಯೇ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ವಾಮಮಾರ್ಗ: ಬಿಜೆಪಿಯವರಿಗೆ ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಆ ಪಕ್ಷದಲ್ಲಿ ಸ್ಪಷ್ಟವಾದ ನಾಯಕತ್ವ ಇಲ್ಲ. ಮೂರು ವರ್ಷದಲ್ಲಿ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳು ಆರ್ಥಿಕ ವ್ಯವಸ್ಥೆಯ ಸಮತೋಲನಗಳು ಕೋವಿಡ್ ನಿರ್ವಹಣೆಗಳಲ್ಲಿ ಬಹಳಷ್ಟು ಅಧ್ವಾನವಾಗಿದೆ. ಈ ಹಿನ್ನೆಲೆಯಲ್ಲಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಚಿಲುಮೆ ಸಂಸ್ಥೆಯ ಸರ್ವೇ ವಿಚಾರವನ್ನು ಗಮನಿಸುವುದಾದರೆ ಸರ್ಕಾರ ಅವರದೇ ಇರುವುದರಿಂದ ಮಂತ್ರಿಗೆ ಸಂಬಂಧಪಟ್ಟ ಸಂಸ್ಥೆ ಆಗಿರುವುದರಿಂದ ಬಹಶಃ ಅವರು ಮುಚ್ಚಿ ಹಾಕುವ ಪ್ರಯತ್ನ ಮಾಡಬಹುದು. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಇದೊಂದು ದೊಡ್ಡ ಮಾಫಿಯಾ. ವೋಟರ್ ಲಿಸ್ಟ್ ಬದಲಾವಣೆ ಮಾಡಿ ಬಿಜೆಪಿಗೆ ಮತ ಹಾಕುವವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಉಂಟು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಸಿದ್ಧಾಂತ: ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿತರು ಅರ್ಜಿ ಹಾಕುವುದು ಕಾಂಗ್ರೆಸ್ ಸಿದ್ಧಾಂತ. ಮಂಡ್ಯ ಕಾಂಗ್ರೆಸ್ಸಿನ ಭದ್ರಕೋಟೆ. ಮಧ್ಯ ಸ್ವಲ್ಪ ವ್ಯತ್ಯಾಸ ಆಗಿದೆ. ಆದರೆ ಮತ್ತೆ ಕಾಂಗ್ರೆಸ್‌ಗೆ ಒಳ್ಳೆಯ ಫಲಿತಾಂಶ ಬರಲಿದೆ. ಮಂಡ್ಯ ಕೇತ್ರದಲ್ಲಿ ಅತಿ ಹೆಚ್ಚು ಆಕಾಂಕ್ಷಿತರು ಇದ್ದಾರೆಂದರೆ ಸಂತೋಷಪಡಬೇಕೇ ಹೊರತು ಬೇಸರ ಏಕೆ ಮಾಡಿಕೊಳ್ಳಬೇಕು? ಅರ್ಜಿ ಹಾಕಿರುವ 16 ಆಕಾಂಕ್ಷಿಗಳೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ. ಜಿಲ್ಲೆಯಲ್ಲಿ ಎಷ್ಟು ಜನ ಆಕಾಂಕ್ಷಿತರು ಇದ್ದರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಹಾಲಹಳ್ಳಿ ಅಶೋಕ್, ರುದ್ರಪ್ಪ, ಚಿದಂಬರ್ ಇತರರಿದ್ದರು.