ವಿಜಯನಗರ ಜಿಲ್ಲಾ ರಚನೆ ಯಾರಿಗೆ ಲಾಭ- ನಷ್ಟ : ಮುಂದುವರಿದಿದೆ ರಾಜಕೀಯ ಲೆಕ್ಕಾಚಾರ

BSY
Published on

ಬೆಂಗಳೂರು: ವಿಜಯನಗರ ಜಿಲ್ಲೆ ರಚನೆಯಾಗಬೇಕು ಎಂಬ ಬಹುಕಾಲದ ಬೇಡಿಕೆಗೆ ಯಡಿಯೂರಪ್ಪ ಸರ್ಕಾರ ಇಂದು ತಾತ್ತ್ವಿಕ ಒಪ್ಪಿಗೆ ಸೂಚಿಸಿದೆ. ಬಳ್ಳಾರಿಯ ನಾಯಕರು ವಿಜಯನಗರ ಜಿಲ್ಲಾ ರಚನೆ ವಿರೋಧಿಸುತ್ತಲೇ ಬಂದಿದ್ದರು. ಹೊಸಪೇಟೆ ಕೇಂದ್ರಿತವಾಗಿ ವಿಜಯನಗರ ಜಿಲ್ಲಾ ರಚನೆಯ ಬೇಡಿಕೆ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಹೀಗಾಗಿ, ಸರ್ಕಾರದ ನಿರ್ಣಯದೊಂದಿಗೆ ವಿಜಯನಗರ ಜಿಲ್ಲಾ ರಚನೆ ರಾಜಕೀಯ ಮಹತ್ವದ ತಿರುವು ಪಡೆದುಕೊಂಡಿದ್ದು, ಬಳ್ಳಾರಿಯಲ್ಲಿ ರಾಜಕೀಯದ ಕಾವು ಹೆಚ್ಚಾಗಿದೆ.

ಸರ್ಕಾರದ ನಿಲುವು ಬಳ್ಳಾರಿ ಜಿಲ್ಲೆಯನ್ನು ಆಡಳಿತಾತ್ಮಕ ಕಾರಣಕ್ಕಾಗಿ ವಿಭಜಿಸಿ ವಿಜಯನಗರ ಜಿಲ್ಲೆ ಮಾಡುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ.

ಈ ಸೂಕ್ಷ್ಮವನ್ನು ಅರಿತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಮತ್ತು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡೇ ನಡೆಸುವಂತೆ ಕಾನೂನು ಸಚಿವ ಮಾಧುಸ್ವಾಮಿಗೆ ಸೂಚಿಸಿದ್ದರು. ಇದರಂತೆ, ಸಚಿವ ಮಾಧುಸ್ವಾಮಿಯವರು ಸಚಿವ ಸಂಪುಟ ತೀರ್ಮಾನಗಳನ್ನು ಪ್ರಕಟಿಸಿದ ನಂತರದಲ್ಲಿ ಈ ಇಬ್ಬರು ನಾಯಕರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತಿಹಾಸದ ಪುಟದಲ್ಲಿ ಸೇರುವ ಕೆಲಸ ಮಾಡಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಶ್ರೀರಾಮುಲು ಅವರೂ ಜತೆಗಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ವಿಜಯನಗರ ಜಿಲ್ಲೆ ರಚನೆ ಆಗಬೇಕೆಂಬ ಬೇಡಿಕೆ ಬಹಳ ವರ್ಷಗಳದ್ದು. ಇದಕ್ಕಾಗಿ ಹೋರಾಟವೇ ನಡೆದಿದೆ. ಇದೀಗ ಅನೌಪಚಾರಿಕ ಚರ್ಚೆ ನಡೆದಿದ್ದು, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಬಿಜೆಪಿಗೆ ಬಳ್ಳಾರಿ ಜನರೇ ಪಾಠ ಕಲಿಸುವರು! 

ಹೊಸ ಜಿಲ್ಲೆ ವಿಚಾರವಾಗಿ ಒಂದಷ್ಟು ಹೋರಾಟವೂ ನಡೆದಿತ್ತು. ಪ್ರಮುಖವಾಗಿ ಮೈತ್ರಿ ಸರ್ಕಾರದ ಪತನ ವೇಳೆ ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದ ಆನಂದ್ ಸಿಂಗ್, ವಿಜಯನಗರ ಜಿಲ್ಲೆ ಆಗಬೇಕೆಂದು ಪ್ರಧಾನ ಬೇಡಿಕೆ ಇಟ್ಟಿದ್ದರು. ಆ ವೇಳೆ ಕೊಟ್ಟ ಮಾತನ್ನು ಈಡೇರಿಸಲು ಬಿಎಸ್​ವೈ ಸ್ವಪಕ್ಷೀಯರನ್ನೇ ಎದುರು ಹಾಕಿಕೊಂಡಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸರ್ಕಾರದ ತೀರ್ಮಾನದ ವಿರುದ್ಧ ಸಿಡಿದೆದ್ದಿದ್ದು, ನನಗೆ ಪಕ್ಷಕ್ಕಿಂತ ಜನರೇ ಮುಖ್ಯ, ಹೋರಾಟಕ್ಕೆ ಸಿದ್ಧ. ಬಿಜೆಪಿ ಬಳ್ಳಾರಿಯಲ್ಲಿ ಜನರೇ ಪಾಠ ಕಲಿಸಲಿದ್ದಾರೆ. ಜಿಲ್ಲೆ ಒಡೆದ ಅಪಖ್ಯಾತಿ ಬಿಜೆಪಿಗೆ ಅಂಟಿಕೊಳ್ಳಲಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net