ಬಿಎಲ್‌ಡಿಗೆ ಆಫರ್ ಕೊಟ್ಟ ಬಿಜೆಪಿ: ಸಚಿವ ಕೆ.ಸಿ.ನಾರಾಯಣಗೌಡಗೆ ಟಾಂಗ್ ಕೊಡಲು ಸಿದ್ಧತೆ

B.L.Devaraj)
Published on

ಮಂಡ್ಯ: ಜೆಡಿಎಸ್ ವರಿಷ್ಠರ ಧೋರಣೆಯಿಂದಾಗಿ ಅಸಮಾಧಾನಗೊಂಡಿರುವ ಹಿರಿಯ ನಾಯಕ ಬಿ.ಎಲ್.ದೇವರಾಜು ಅವರಿಗೆ ಬಿಜೆಪಿ ಗಾಳ ಹಾಕಿದೆ. ಇದರೊಂದಿಗೆ ಪಕ್ಷ ಬಿಡಲು ಸಜ್ಜಾಗಿರುವ ಸಚಿವ ಕೆ.ಸಿ.ನಾರಾಯಣಗೌಡಗೆ ಟಾಂಗ್ ಕೊಡಲು ಕಮಲ ಪಾಳಯ ಸಜ್ಜಾಗಿದೆ.

ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರಲು ಹವಣಿಸುತ್ತಿದ್ದಾರೆ. ಆದರೆ ತನ್ನ ತೆಕ್ಕೆಯಲ್ಲಿರುವ ಕೆ.ಆರ್.ಪೇಟೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಕೂಡ ಕಸರತ್ತು ನಡೆಸುತ್ತಿದೆ. ಅದರಂತೆ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ದೇವರಾಜು ಅವರನ್ನು ಪಕ್ಷಕ್ಕೆ ಕರೆತರಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗುತ್ತಿದೆ.

ಕೆಸಿಎನ್ ತಂತ್ರಕ್ಕೆ ಪ್ರತಿತಂತ್ರ: 2019ರಲ್ಲಿ ಜೆಡಿಎಸ್ ತೊರೆದು ಬಿಜೆಪಿಯಿಂದ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದ ನಾರಾಯಣಗೌಡ ಎದುರಾಳಿಯಾಗಿ ಜೆಡಿಎಸ್‌ನಿಂದ ದೇವರಾಜು ಸ್ಪರ್ಧೆ ಮಾಡಿದ್ದರು. ಸರ್ಕಾರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾದ ಹಿನ್ನೆಲೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಕೆ.ಆರ್.ಪೇಟೆಗೆ ಬಂದು ಕೆಸಿಎನ್ ಪರ ಮತಯಾಚನೆ ಮಾಡಿದ್ದರು. ಆದಾಗ್ಯೂ ಕಡಿಮೆ ಅಂತರದಲ್ಲಿ ಅಂದರೆ 9731 ಅಂತರದಿಂದ ಬಿಎಲ್‌ಡಿ ಸೋಲು ಅನುಭವಿಸಿದ್ದರು.

ಮುಂಬರುವ ಚುನಾವಣೆಯಿಂದ ಸ್ಪರ್ಧಾಕಾಂಕ್ಷಿಯಾಗಿದ್ದ ಬಿಎಲ್‌ಡಿ ಅವರನ್ನು ದಳ ಕಡೆಗಣಿಸಿತು. ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜುಗೆ ಮಣೆ ಹಾಕಿತು. ಇದರಿಂದ ಅತೃಪ್ತಿಗೊಂಡಿರುವ ದೇವರಾಜು ಈಗಾಗಲೇ ಎರಡು ಬಾರಿ ಬಂಡಾಯ ಸಭೆ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಆದರೂ ಅದ್ಯಾಕೋ ದಳಪತಿಗಳು ತಲೆಕೆಡಿಸಿಕೊಂಡಂತೆ ಕಂಡುಬರುತ್ತಿಲ್ಲ. ಇನ್ನು ಇತ್ತ ಕೆಸಿಎನ್ ಕಮಲ ಬಿಟ್ಟು ‘ಕೈ’ ಹಿಡಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿದ್ದು, ಅದರಂತೆ ದೇವರಾಜು ಅವರೊಂದಿಗೆ ನಾಯಕರು ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

ಇಡೀ ಸರ್ಕಾರವೇ ಬಂದೂ ಮತಯಾಚನೆ ಮಾಡಿದರೂ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿರುವ ದೇವರಾಜು ಅವರ ಬಗ್ಗೆ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದೆ. ಜತೆಗೆ ಮೂರು ದಶಕದಿಂದ ಜೆಡಿಎಸ್ ಸಂಘಟನೆ ಮಾಡಿದರೂ ವರಿಷ್ಠರು ನಿರ್ಲಕ್ಷೃ ಮಾಡಿರುವುದರಿಂದ ಹಲವು ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಮತಗಳು ಜೆಡಿಎಸ್ ವಿರೋಧಿ ಅಲೆಯಾಗಿಯೂ ಪರಿವರ್ತನೆಯಾದರೂ ಅಚ್ಚರಿಯಿಲ್ಲ. ಇನ್ನು ಬಿಜೆಪಿಯ ಸಾಂಪ್ರದಾಯಿಕ ಮತಗಳು ಬರಲಿದೆ. ಇದರೊಟ್ಟಿಗೆ ಕೆಸಿಎನ್ ಪಕ್ಷ ಸೇರ್ಪಡೆಗೆ ತೀವ್ರ ವಿರೋಧವಾಗಿರುವುದರಿಂದ ಕಾಂಗ್ರೆಸ್‌ನ ಬಂಡಾಯ ದೇವರಾಜುಗೆ ವರದಾನವಾಗಬಹುದು. ಆದ್ದರಿಂದ ಬಿಜೆಪಿಗೆ ಸೇರುವಂತೆ ಅವಕಾಶ ನೀಡಲಾಗಿದೆ. ಆದರೆ ಇನ್ನೂ ಕಾಲಾವಕಾಶ ಇರುವುದರಿಂದ ಬಿಎಲ್‌ಡಿ ಜೆಡಿಎಸ್ ಬಿಡುವ ನಿರ್ಧಾರ ಮಾಡಿಲ್ಲ. ಜತೆಗೆ ವರಿಷ್ಠರ ನಿರ್ಧಾರ ಬದಲಾಗುವ ವಿಶ್ವಾಸದೊಂದಿಗೆ ತಟಸ್ಥವಾಗಿದ್ದಾರೆಂದು ತಿಳಿದುಬಂದಿದೆ.

ಮುಂದಿನ ವಾರ ಕೆಸಿಎನ್ ನಿರ್ಧಾರ?: ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಕೆ.ಸಿ.ನಾರಾಯಣಗೌಡ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಮುನ್ನವೇ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರುತ್ತಾರೆನ್ನುವ ಮಾತುಗಳಿತ್ತು. ಆದರೆ ಇದ್ದಕ್ಕಿದ್ದಂತೆ ನಿರ್ಧಾರ ಬದಲಾವಣೆ ಮಾಡಿಕೊಂಡಿದ್ದಾರೆ. ಅದರಂತೆ ಮುಂದಿನ ವಾರ ಬೃಹತ್ ಕಾರ್ಯಕ್ರಮ ಆಯೋಜಿಸಿ ರಾಜಕೀಯ ಭವಿಷ್ಯದ ಬಗ್ಗೆ ಕೆಸಿಎನ್ ತೀರ್ಮಾನ ಘೋಷಣೆ ಮಾಡುವ ಸಾಧ್ಯತೆ ಇದೆ.

ಒಟ್ಟಾರೆ ಸಚಿವ ಕೆ.ಸಿ.ನಾರಾಯಣಗೌಡ ಪಕ್ಷಾಂತರದಿಂದ ವಿಷಯದಿಂದಾಗಿ ಕಾವೇರಿರುವ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ದಿನವೂ ರಾಜಕೀಯ ಬೆಳವಣಿಗೆಯಾಗುತ್ತಿದೆ. ಅದರಂತೆ ಜನರಲ್ಲಿ ಕುತೂಹಲವೂ ಹೆಚ್ಚುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net