

ಹೊಳೆನರಸೀಪುರ: ಪ್ರಜೆಗಳಲ್ಲಿ ರಾಜಕೀಯ ನಿರಾಸಕ್ತಿ ಇರುವುದರಿಂದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಕಟ್ಟಲು ಸಾಧ್ಯವಾಗಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣ್ ವಿಷಾದವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ರಾಜ್ಯಶಾಸ್ತ್ರ ವಿಭಾಗ ಮತ್ತು ಮತದಾರರ ಸಾಕ್ಷರತಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರು ತಮ್ಮ ಮತವನ್ನು ಯಾವುದೇ ಆಮಿಷಕ್ಕೆ ಒಳಗಾಗಿ ಮಾರಿಕೊಳ್ಳದೆ ಉತ್ತಮ ವ್ಯಕ್ತಿಗೆ ಚಲಾಯಿಸಬೇಕು. ಪ್ರಾಮಾಣಿಕ ಮತ ಚಲಾವಣೆಯಿಂದ ಮೂರ್ಖರು, ಭ್ರಷ್ಟರು, ಅಪರಾಧ ಹಿನ್ನೆಲೆ ಇರುವವರು ಆಯ್ಕೆಯಾಗುವುದಿಲ್ಲ ಎಂದು ತಿಳಿಸಿದರು.
ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುರೇಶ್ ಮಾತನಾಡಿ, ಸುಭದ್ರ ರಾಷ್ಟ್ರ ಕಟ್ಟುವ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಅಧಿಕಾರದಲ್ಲಿ ಪಾಲುದಾರರಾಗಲು ಪ್ರಯತ್ನಿಸಬೇಕು, ಆಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬ ನಾಗರಿಕರು, ವಿದ್ಯಾರ್ಥಿಗಳು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು. ಮತ ಚಲಾಯಿಸುವುದು, ನಮಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಮೂಲ ಹಕ್ಕು ಎಂದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಚ್.ಡಿ.ದೇವೇಗೌಡ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಸಪ್ರಶ್ನೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರೆ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, ಪಡುವಲಹಿಪ್ಪೆ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡು ಸಂಭ್ರಮಿಸಿದ್ದರು.
ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಭಾಷಾ, ಮತದಾರರ ಸಾಕ್ಷರತಾ ಸಮಿತಿ ಸಂಚಾಲಕ ಉದಯ್‌ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ನಟರಾಜ್, ಮೂರ್ತಿ, ಪೂರ್ಣಿಮಾ, ಉಮೇಶ್, ವರದರಾಜ್, ವಸಂತ್‌ಕುಮಾರ್ ಉಪಸ್ಥಿತರಿದ್ದರು.