

ಶಿರಾ: ಕಳ್ಳಂಬೆಳ್ಳ ಕೆರೆ ಹಿನ್ನೀರು ಪ್ರದೇಶದ ಮದಲೂರು ಕಾಲುವೆ ಅಂಚಿಗೆ ಬಂದ ಹೇಮೆಯನ್ನು ಉಪಸಮರಕ್ಕೂ ಮುನ್ನ ಮದಲೂರು ಕೆರೆಗೆ ಹರಿಸುವ ಬಿಜೆಪಿ ಕನಸು ಭಗ್ನಗೊಂಡಿದೆ. ಆದರೂ, ಚುನಾವಣೆ ಬಳಿಕ ನೀರು ಹರಿಸಿಯೇ ತೀರುತ್ತೇವೆಂದು ಬಿಜೆಪಿ ಮುಖಂಡರು ಪ್ರತಿಜ್ಞೆ ಮಾಡಿದ್ದಾರೆ.
ಚುನಾವಣೆಯಲ್ಲಿ ಕೆರೆಗೆ ಹೇಮೆ ಹರಿಸುವ ವಿಚಾರವನ್ನು ಬಿಜೆಪಿ ಪ್ರಮುಖ ಅಸ್ತ್ರ ಮಾಡಿಕೊಂಡಿತ್ತು. ಇನ್ನೇನು ನೀರು ಹರಿಸುವ ಸಂದರ್ಭದಲ್ಲೇ ಉಪಸಮರಕ್ಕೆ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಅಡ್ಡಿಯಿಂದಾಗಿ ಹೇಮೆ ಮೌನವಾಗಲಿದ್ದಾಳೆ.
ಕುಡಿಯುವ ನೀರಿಗಾಗಿ 2008ರಲ್ಲಿ 68 ಕೋಟಿ ರೂ. ವೆಚ್ಚದಲ್ಲಿ ಕೆರೆಗೆ ನೀರು ಹರಿಸಲು ಸಿಮೆಂಟ್ ಕಾಲುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 2012ರಲ್ಲಿ ಕಾಮಗಾರಿ ಪೂರ್ಣಗೊಂಡು 2016ರಲ್ಲಿ ಹೇಮಾವತಿ ನೀರಿನ ಜತೆಗೆ ಮಳೆ ನೀರು ಕಳ್ಳಂಬೆಳ್ಳ ಕೆರೆಯಲ್ಲಿ ಹೆಚ್ಚು ಸಂಗ್ರಹವಾದ ಕಾರಣ ಅಂದು ಸಣ್ಣ ನೀರಾವರಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಪ್ರಾಯೋಗಿಕವಾಗಿ ಮದಲೂರು ಕಾಲುವೆಗೆ ಹೇಮಾವತಿ ನೀರು ಹರಿಸುವ ಕಾರ್ಯ ಮಾಡಿದ್ದರು. ತದ ನಂತರ ಈ ವಿಚಾರ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಾ ಬಂದಿತು.
ಆಂಧ್ರದ ಪಿತೂರಿ !: ಮದಲೂರು ಕೆರೆ ಆಂಧ್ರದ ಗಡಿಗೆ ಹೊಂದಿಕೊಂಡಿದ್ದು, ನೆರೆರಾಜ್ಯದ ಅಗಳಿ ಮಂಡಲ್ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾದರೆ ಆ ನೀರು ಕೆರೆ ಸೇರುತ್ತಿತ್ತು. ಆದರೆ, ಆಂಧ್ರ ತನ್ನ ಭಾಗದಲ್ಲಿ ಬಿದ್ದ ನೀರನ್ನು ರಾಜ್ಯಕ್ಕೆ ಕೊಡಬಾರದೆಂಬ ಅಸೂಯೆಯಿಂದ ಗಡಿಯಲ್ಲಿ ಫೀಡರ್ ಕಾಲುವೆ ತೋಡಿ ಮದಲೂರು ಕೆರೆಗೆ ಹಳ್ಳಗಳ ಮೂಲಕ ಹರಿಯುವ ನೀರಿಗೆ ಕಡಿವಾಣ ಹಾಕಿತು. ಇದಕ್ಕೆ ಉತ್ತರವಾಗಿ ಕಳ್ಳಂಬೆಳ್ಳದಿಂದ 38 ಕಿ.ಮೀ., ದೂರ ಹೇಮೆ ಹರಿಸಿ ಮದಲೂರು ಕೆರೆ ಭರ್ತಿ ಮಾಡುವ ಯೋಜನೆ ರೂಪಿಸಲಾಯಿತು. ಈ ಕೆರೆ 506 ಎಕರೆ ವಿಸ್ತೀರ್ಣ ಹೊಂದಿದ್ದು, 250 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಮದಲೂರು ಕೆರೆಗೆ ಹೇಮೆ ಹರಿಸುವ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಚುನಾವಣೆ ಘೋಷಣೆ ಆಗಿದ್ದು, ನ.10ರ ಬಳಿಕ ಬಿಜೆಪಿ ಸರ್ಕಾರ ಹೇಮೆ ಹರಿಸುವುದು ಶತಃಸಿದ್ಧ. ಸಿಎಂ ಬಿಎಸ್‌ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಬಿ.ಸುರೇಶ್ ಗೌಡ ಜಿಲ್ಲಾಧ್ಯಕ್ಷ , ಬಿಜೆಪಿ ಮದಲೂರು ಕೆರೆ ಭರ್ತಿ ಮಾಡುತ್ತೇವೆ ಎಂದು ಸರ್ಕಾರ ಮಾತಿನಲ್ಲಿ ಹೇಳಿದರೆ ಸಾಲದು. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಿ ಕೆರೆಗೆ ಹೇಮಾವತಿ ನೀರು ಅಲೋಕೇಶನ್ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಕ್ರಿಯಾಶೀಲವಾಗಿ ಜನಪರ ಕಾಳಜಿ ತೋರಬೇಕಿದೆ. ಶ್ರೀ ನಂಜಾವಧೂತ ಸ್ವಾಮೀಜಿ, ಪೀಠಾಧ್ಯಕ್ಷರು, ಸ್ಪಟಿಕಪುರಿ ಮಹಾಸಂಸ್ಥಾನ ಮಠ