

ತುಮಕೂರು: ಜಿಲ್ಲೆಯಲ್ಲಿ ಜನವರಿ 23 ರಿಂದ 25ರ ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ 218023 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಮಾರ್ಗಸೂಚಿ ಅನುಸರಿಸಿ ಪಲ್ಸ್ ಪೋಲಿಯೋ ಲಸಿಕೆ ಯಶಸ್ವಿಗೊಳಿಸಬೇಕು ಎಂದರು. ಲಸಿಕಾ ಗುಣಮಟ್ಟ ಕಾಪಾಡಲು ಜನವರಿ 15 ರಿಂದ 23ರವರೆಗೆ ನಿರಂತರವಾಗಿ ವಿದ್ಯುತ್‌ಚ್ಛಕ್ತಿ ಸರಬರಾಜು ಮಾಡಬೇಕು ಎಂದು ಬೆಸ್ಕಾಂ ಅಧಿಕಾರಿಗೆ ನಿರ್ದೇಶನ ನೀಡಿದರು.
ಮನೆ-ಮನೆಗೆ ಭೇಟಿ ನೀಡಿ ಐಇಸಿ ಕರಪತ್ರ, ಬಿತ್ತಿಪತ್ರಗಳನ್ನು ವಿತರಿಸಿ ಪೋಲಿಯೋ ಹನಿ ಹಾಕಿಸುವ ಬಗ್ಗೆ ಪಾಲಕರಿಗೆ ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬೇಕು ಎಂದರು. ಲಸಿಕೆ ಹಾಕುವವರಿಗೆ ಊಟದ ವ್ಯವಸ್ಥೆ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆ, ಪ್ರಚಾರ ಸಾಮಗ್ರಿಗಳ ವಿತರಣೆ ಹಾಗೂ ಪ್ರದರ್ಶನ ವ್ಯವಸ್ಥೆ, ಲಸಿಕಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ರೋಟರಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ವಾಹನ ಒದಗಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು. ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಟೋಲ್‌ಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮದ ಚಾಲನೆ ಆಯಾ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ ನೆರವೇರಿಸಬೇಕು ಎಂದರು.
5025 ಆರೋಗ್ಯ ಸಿಬ್ಬಂದಿ ನೇಮಕ: ಲಸಿಕಾ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ 1228 ಲಸಿಕಾ ಕೇಂದ್ರ(ಲಸಿಕಾ ಬೂತ್) ಹಾಗೂ 65 ಟ್ರಾನ್ಸಿಟ್ ಲಸಿಕಾ ಕೇಂದ್ರ ತೆರೆಯಲಾಗುವುದು. ಲಸಿಕೆ ನೀಡಲು 238 ವಾಹನ ಬಳಸಿಕೊಂಡು 5025 ಆರೋಗ್ಯ ಸಿಬ್ಬಂದಿ ಹಾಗೂ ಮೇಲ್ವಿಚಾರಣೆಗಾಗಿ 277 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜನವರಿ 23 ರಂದು ಲಸಿಕಾ ಬೂತ್‌ಗಳಲ್ಲಿ ಹಾಗೂ ಜನವರಿ 24 ಮತ್ತು 25ರಂದು ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಲಸಿಕೆ ನೀಡಲಾಗುವುದು ಎಂದು ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್ ತಿಳಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ವಿ.ಅಜಯ್ ಹಾಗೂ ಸೋಮಪ್ಪ ಕಡಕೋಳ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಡಾ.ಮೋಹನ್‌ದಾಸ್, ಡಾ.ಮಹಿಮಾ ಮತ್ತಿತರರು ಇದ್ದರು.