

ಮಂಡ್ಯ: ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಕೂಡ ಪ್ರಬಲವಾಗುತ್ತಿದೆ. ಹಿಂದೆಲ್ಲ ಚುನಾವಣೆ ವಿಚಾರಕ್ಕೆ ಬಂದರೆ ಕಮಲದ ವರಿಷ್ಠರೂ ಕೂಡ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಪರಿಸ್ಥಿತಿ ಬದಲಾಗಿದೆ. ಪ್ರತಿ ಕ್ಷೇತ್ರವೂ ಮುಖ್ಯವಾಗಿರುವುದರಿಂದ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಸಜ್ಜಾಗುತ್ತಿದೆ. ಇದಕ್ಕಾಗಿ ಪಕ್ಷದೊಳಗೆ ತಂತ್ರಗಾರಿಕೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ಬಹಳ ವರ್ಷಗಳವರೆಗೆ ಜೆಡಿಎಸ್, ಕಾಂಗ್ರೆಸ್ ಅಬ್ಬರವೇ ನಡೆಯುತ್ತಿತ್ತು. ಆದರೆ ಕೆ.ಆರ್.ಪೇಟೆ ವಿಧಾನಸಭಾ ಉಪಚುನಾವಣೆ ಮೂಲಕ ಖಾತೆ ತೆರೆದ ಬಿಜೆಪಿ, ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿಯೂ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುತ್ತಿದೆ. ಇದರೊಟ್ಟಿಗೆ ಹಲವು ಯುವಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಕಾರ್ಯಕರ್ತರನ್ನು ಬೆಳೆಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಯಲು ಆಕಾಂಕ್ಷಿತರ ಸಂಖ್ಯೆಯೂ ಹೆಚ್ಚಾಗಿದೆ.
ಜಿಲ್ಲಾ ಕೇಂದ್ರಕ್ಕೆ ಪೈಪೋಟಿ: ಜಿಲ್ಲಾ ಕೇಂದ್ರದಿಂದ ಸ್ಪರ್ಧೆ ಮಾಡಲು ಪೈಪೋಟಿ ನಡೆಯುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷ, ಸಹಕಾರ ಭಾರತಿ ಜಿಲ್ಲಾಧ್ಯಕ್ಷರೂ ಆದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೆಸರು ಕೇಳಿಬರುತ್ತಿದೆ. ಆದರೆ ಈ ಪೈಕಿ ಸಿ.ಪಿ.ಉಮೇಶ್ ಅವರ ಕಡೆಗೆ ನಾಯಕರು ಹೆಚ್ಚು ಒಲವು ಹೊಂದಿದ್ದಾರೆನ್ನಲಾಗಿದೆ. ಕಾರಣ ಪಕ್ಷದ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರ ಜತೆಗೆ ಯುವಕರನ್ನು ಯಶಸ್ವಿಯಾಗಿ ಸಂಘಟಿಸುತ್ತಿದ್ದಾರೆ. ಮಾತ್ರವಲ್ಲದೆ ಹಲವು ಸಚಿವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವಕಾಶ ಸಿಗುವ ಸಾಧ್ಯತೆ ನಿಚ್ಚಳವಾಗಿದೆ ಎನ್ನುವ ಮಾತು ಪಕ್ಷದ ಅಂಗಳದಲ್ಲಿ ಕೇಳಿಬರುತ್ತಿದೆ.
ನಾಲ್ಕು ಕ್ಷೇತ್ರದಲ್ಲಿ ಒಂದೊಂದೆ ಹೆಸರು?: ಇನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಕೆ.ಆರ್.ಪೇಟೆಯಿಂದ ಸ್ಪರ್ಧೆ ಮಾಡಲಿದ್ದಾರೆ. ಆದರೆ ಇವರ ವಿರುದ್ಧ ಪಕ್ಷದೊಳಗೆ ಅಸಮಾಧಾನ ಹೊಗೆಯಾಡುತ್ತಲೇ ಇರುತ್ತದೆ. ಅಂತೆಯೇ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಮಟ್ಟದಿಂದ ಪಕ್ಷ ಸಂಘಟಿಸುವುದರ ಜತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಡಾ.ಇಂದ್ರೇಶ್ ಜನರನ್ನು ತಲುಪುತ್ತಿದ್ದಾರೆ. ಇತ್ತ ಮದ್ದೂರು ಕ್ಷೇತ್ರದಲ್ಲಿ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹಾಗೂ ಹೈವೋಲ್ಟೆಜ್ ಕ್ಷೇತ್ರ ನಾಗಮಂಗಲದಲ್ಲಿ ಸಮಾಜ ಸೇವಕ ಫೈಟರ್ ರವಿ ಹೆಸರಷ್ಟೇ ಚಾಲ್ತಿಯಲ್ಲಿದೆ. ಸಧ್ಯಕ್ಕೆ ಈ ನಾಲ್ಕು ಕ್ಷೇತ್ರದಲ್ಲಿ ಒಬ್ಬೊಬ್ಬರ ಹೆಸರಷ್ಟೇ ಇದೆ.
ಕೋಟೆಯಲ್ಲಿ ಯಾರಿಗೆ ಅವಕಾಶ?: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ ರೇಸ್‌ನಲ್ಲಿದ್ದಾರೆ. ಆದರೆ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಚ್ಚಿದಾನಂದ ರೇಸ್‌ನಲ್ಲಿ ಮುಂದಿದ್ದಾರೆ. ಇತ್ತೀಚೆಗೆ ಸಂಕೀರ್ತನಾ ಯಾತ್ರೆಯ ಹೆಚ್ಚಿನ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿತ್ತು.
ಮಳವಳ್ಳಿ ಗೊಂದಲದ ಗೂಡು: ಮಳವಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಗೊಂದಲದ ಗೂಡಾಗಿ ಪರಿಣಮಿಸಿದೆ. ಒಂದೆಡೆ ಮಾಜಿ ಸಚಿವ ಬಿ.ಸೋಮಶೇಖರ್, ಮತ್ತೊಂದೆಡೆ ಯುವ ಮುಖಂಡ ಮುನಿರಾಜು ತಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಇದು ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಮೂಡುವಂತಾಗಿದೆ.
ಸಿಎನ್‌ಎಗೆ ಚುನಾವಣೆ ನೇತೃತ್ವ?: ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ಒಕ್ಕಲಿಗ ಸಮುದಾಯ ವಹಿಸಲಿದೆ. ಏಳು ಕ್ಷೇತ್ರದಲ್ಲಿಯೂ ಸಮುದಾಯದ ಮತಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯ ನೇತೃತ್ವವನ್ನು ಒಕ್ಕಲಿಗ ಸಮುದಾಯದ ನಾಯಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ನೀಡುವ ಸಾಧ್ಯತೆ ಹೆಚ್ಚಿದೆ. ಕೆ.ಸಿ.ನಾರಾಯಣಗೌಡ ಸಚಿವರಾದರೂ ಕೆ.ಆರ್.ಪೇಟೆಗಷ್ಟೇ ಸೀಮಿತವಾಗಿದ್ದಾರೆ. ಉಳಿದ ಕ್ಷೇತ್ರದ ಬಗ್ಗೆ ಕನಿಷ್ಟ ಯೋಚನೆಯನ್ನು ಮಾಡುತ್ತಿಲ್ಲ. ಇದು ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಹಾಸನದೊಟ್ಟಿಗೆ ಇಲ್ಲಿನ ಜವಾಬ್ದಾರಿ ಕೊಡಲಾಗಿದೆ. ಆದ್ದರಿಂದ ಎರಡೂ ಕಡೆಯ ಜತೆಗೆ ತನ್ನ ಕ್ಷೇತ್ರವನ್ನೂ ನೋಡಿಕೊಳ್ಳಬೇಕಿರುವುದರಿಂದ ಹೆಚ್ಚಿನ ಗಮನ ಹರಿಸುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಮಣೆ ಹಾಕಲಾಗುವುದೆನ್ನುವ ಮಾತು ಕೇಳಿಬರುತ್ತಿವೆ. ಇತ್ತೀಚೆಗೆ ಅದ್ಧೂರಿಯಾಗಿ ನಡೆದ ನಾಡಪ್ರಭು ಕೆಂಪೇಗೌಡ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಿಎನ್‌ಎ ಇದ್ದರು. ಜತೆಗೆ ಪ್ರಮುಖವಾಗಿ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ತಿರುಗೇಟುಗಳನ್ನು ನೀಡುವುದರ ಜತೆಗೆ ಬಿಜೆಪಿಯ ಒಕ್ಕಲಿಗರ ಕೋಟಾದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಇನ್ನು ಈಗಾಗಲೇ ನಾಡಪ್ರಭು ಕೆಂಪೇಗೌಡ ಕಂಚಿನ ಪ್ರತಿಮೆ ಅನಾವರಣದ ಮೂಲಕ ಒಕ್ಕಲಿಗ ಸಮುದಾಯದಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಅವರಿಗೆ ಅಭಿನಂದನಾ ಸಮಾರಂಭಗಳನ್ನು ಮಾಡಲಾಗುತ್ತಿದೆ. ಇದನ್ನು ಗಮನಿಸಿದರೆ ಒಕ್ಕಲಿಗ ಸಮುದಾಯದ ಪ್ರಭಾವ ಇರುವ ಜಿಲ್ಲೆಯಲ್ಲಿ ಚುನಾವಣೆ ಗೆಲ್ಲಲ್ಲು ಸಿಎನ್‌ಎಗೆ ನೇತೃತ್ವ ಕೊಡಬಹುದೆನ್ನಲಾಗುತ್ತಿದೆ.