

ಹುಬ್ಬಳ್ಳಿ: ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಎಸ್ವಿಎಎನ್ಐಡಿಎಚ್ಎ-ಸ್ವನಿಧಿ)’ ಯಡಿ ಕಿರು ಸಾಲ ಹಂಚಿಕೆಯಲ್ಲಿ ಹು-ಧಾ ಮಹಾನಗರ ಪಾಲಿಕೆಯು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.
ಕೋವಿಡ್-19 ಅವಧಿಯಲ್ಲಿ ತೊಂದರೆಗೊಳಗಾದ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಕಿರು ಸಾಲ ನೀಡಲಾಗುತ್ತದೆ. 2020ರ ಜುಲೈ 1ರಿಂದ ಜಾರಿಗೊಂಡ ಈ ಯೋಜನೆಯಡಿ ಇಲ್ಲಿಯವರೆಗೆ (2021 ಜ. 4) ಹು-ಧಾ ಮಹಾನಗರ ಪಾಲಿಕೆಯು 3164 ಜನ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಹಂಚಿಕೆ ಮಾಡಿ ರಾಜ್ಯದ ಉಳಿದ ಮಹಾನಗರ ಪಾಲಿಕೆಗಳಿಗಿಂತ ಮುಂದೆ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ 2925 ಜನ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಿಸಲು ಸಾಧ್ಯವಾಗಿದೆ.
ಹು-ಧಾ ಪಾಲಿಕೆಯ 9527 ಅರ್ಜಿಗಳು ಸ್ವೀಕೃತಗೊಂಡರೆ, ಬಿಬಿಎಂಪಿಯ 31,677 ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ. 3ನೇ ಸ್ಥಾನದಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ 15,884 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, 1678 ಜನರಿಗೆ ಸಾಲ ವಿತರಿಸಲಾಗಿದೆ.
ನಗರದ ಜನಸಂಖ್ಯೆಯ ಶೇ. 1ರಷ್ಟು ಜನರಿಗೆ ಸಾಲ ವಿತರಣೆಗೆ ಕೇಂದ್ರ ಸರ್ಕಾರ ಗುರಿ ನಿಗದಿ ಮಾಡಿದೆ. 2011ರ ಜನಗಣತಿ ಪ್ರಕಾರ ಹು-ಧಾ ಅವಳಿ ನಗರದ ಜನಸಂಖ್ಯೆ 9.43 ಲಕ್ಷ ಇದೆ. ಅದರಂತೆ 9430 ಜನರಿಗೆ ಸಾಲ ಹಂಚಿಕೆ ಮಾಡಲು ಅವಕಾಶವಿದೆ. ಈಗಾಗಲೇ ಗುರಿ ಮೀರಿ 9527 ಅರ್ಜಿಗಳು ಅನುಮೋದನೆ ಪಡೆದಿವೆ.
ಸಾಲ ಪಡೆದ ಪ್ರತಿ ಬೀದಿ ಬದಿ ವ್ಯಾಪಾರಿಯೂ ಪ್ರತಿ ತಿಂಗಳು ಮರುಪಾವತಿ ಮಾಡಬೇಕಾಗುತ್ತದೆ. ಶೇ. 9.5ರಷ್ಟು ಬಡ್ಡಿ ಆಕರಣೆ ಮಾಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಸಾಲ ಮರು ಪಾವತಿಸಿದರೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೇ. 7ರಷ್ಟು ಬಡ್ಡಿ ಸಹಾಯಧನ (ಸಬ್ಸಿಡಿ) ನೇರ ನಗದು ಮೂಲಕ ತ್ರೖೆಮಾಸಿಕವಾಗಿ ವರ್ಗಾವಣೆಯಾಗುತ್ತದೆ. ಡಿಜಿಟಲ್ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ರೂ. 50ರಿಂದ 100ರವರೆಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಇದೆ.
ಪಿಎಂ ಸ್ವನಿಧಿಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಹಂಚಿಕೆಗೆ ಪಾಲಿಕೆಯ ಎಲ್ಲ 12 ವಲಯ ಕಚೇರಿಗಳು, ಹು-ಧಾ ಒನ್ ಕೇಂದ್ರಗಳಲ್ಲಿ ಅರ್ಜಿ ವಿತರಣೆಗೆ ವ್ಯವಸ್ಥೆ ಮಾಡಿದ್ದೆವು. ಪಾಲಿಕೆ ಸಿಬ್ಬಂದಿ ಪ್ರಮುಖ ಮಾರುಕಟ್ಟೆ ಪ್ರದೇಶಗಳಿಗೆ ತೆರಳಿ ಬೀದಿ ಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಅರ್ಜಿ ವಿತರಿಸಿದ್ದರು. ಇವೆಲ್ಲದರ ಪರಿಣಾಮವಾಗಿ ನಾವು ಗುರಿ ಮೀರಿ ಸಾಧನೆ ಮಾಡಿದ್ದೇವೆ.| ರಮೇಶ ನೂಲ್ವಿಸಮುದಾಯ ವ್ಯವಹಾರಗಳ ಅಧಿಕಾರಿ, ಹು-ಧಾ ಮಹಾನಗರ ಪಾಲಿಕೆ