

ಶಿವಮೊಗ್ಗ: ಮಹಾನಗರ ಪಾಲಿಕೆ ಕಂದಾಯ ವಿಭಾಗದ ಮೇಲೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಪೊಲೀಸರು ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ್ದು ಕಡತಗಳ ಪರಿಶೀಲನೆ ನಡೆಸಿದರು.
ಎಸಿಬಿ ಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಡಿವೈಎಸ್ಪಿ ಲೋಕೇಶ್, ಆರು ಇನ್‌ಸ್ಪೆಕ್ಟರ್‌ಗಳು ಮತ್ತು 20ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಕಡತಗಳ ಪರಿಶೀಲನೆ ಮಾಡಿದರು.
ಕಂದಾಯ ವಿಭಾಗದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಖಾತೆ ಬದಲಾವಣೆ ಸೇರಿ ಕಡತಗಳ ವಿಲೇವಾರಿಗೆ ಆರರಿಂದ ಏಳು ತಿಂಗಳು ತೆಗೆದುಕೊಳ್ಳುತ್ತಿದ್ದಾರೆ. ಹಣ ನೀಡಿದರೆ ಒಂದೇ ವಾರದಲ್ಲಿ ಕೆಲಸ ಆಗುತ್ತದೆ. ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು ಕಂದಾಯ ವಿಭಾಗ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಾರ್ವಜನಿಕ ವಲಯದಲ್ಲಿ ದೂರು ಕೇಳಿಬರುತ್ತಿದ್ದ ಹಿನ್ನೆಲೆ ಎಸಿಬಿ ಸ್ವಯಂಪ್ರೇರಿತ ದಾಳಿ ನಡೆಸಿದೆ. ಪರಿಶೀಲನೆ ವೇಳೆ ಕೆಲ ಮಧ್ಯವರ್ತಿಗಳನ್ನೂ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಲಾಗಿದೆ.
ಸಿಬ್ಬಂದಿ ಒಳಗೆ ಲಾಕ್: ಮಧ್ಯಾಹ್ನ 12.30ರ ಸುಮಾರಿಗೆ ಏಕಾಏಕಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕಂದಾಯ ವಿಭಾಗದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಚೇರಿಯೊಳಗೆ ಲಾಕ್ ಮಾಡಿಕೊಂಡರು. ಅಲ್ಲಿ ಕೆಲ ಸಾರ್ವಜನಿಕರೂ ಇದ್ದರಾದರೂ ಅವರನ್ನೂ ಹೊರಗೆ ಬಿಡದೆ ಬಾಗಿಲು ಬಂದ್ ಮಾಡಿಕೊಳ್ಳಲಾಗಿತ್ತು. ಎಲ್ಲರಿಗೂ ಮಾಧ್ಯಾಹ್ನದ ಊಟವನ್ನು ಅಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ಸಂಜೆವರೆಗೆ ಕಡತಗಳ ಪರಿಶೀಲನೆ ಮುಂದುವರಿದಿತ್ತು.