

ಬೆಂಗಳೂರು: ಬಿಬಿಎಂಪಿಯ ಕೌನ್ಸಿಲ್ ಸಭೆಯ ಸಂದರ್ಭದಲ್ಲಿ ಸದಸ್ಯರಿಗೆ ಊಟ ಸರಬರಾಜು ಮಾಡದಿರಲು ಇಂದಿರಾ ಕ್ಯಾಂಟೀನ್ನ ಗುತ್ತಿಗೆ ಪಡೆದಿರುವ ಮೆ. ರಿವಾರ್ಡ್ಸ್ ಗುತ್ತಿಗೆ ಸಂಸ್ಥೆ ನಿರ್ಧರಿಸಿದೆ. ಕೌನ್ಸಿಲ್ ಕಾರ್ಯದರ್ಶಿಗೆ ಪತ್ರ ಬರೆದು ಈ ವಿಷಯವನ್ನು ಸ್ಪಷ್ಟಪಡಿಸಿದೆ. ಇದರಿಂದಾಗಿ ಭೋಜನ ವೆಚ್ಚ 50 ಲಕ್ಷ ರೂಪಾಯಿ ಹೆಚ್ಚಾಗಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಆರಂಭಿಸಲಾದ ಇಂದಿರಾ ಕ್ಯಾಂಟೀನ್ನಿಂದಲೇ ಬಿಬಿಎಂಪಿ ಕೌನ್ಸಿಲ್ ಸಭೆಗೂ ಆಹಾರ ತರಿಸಲು ನಿಕಟಪೂರ್ವ ಮೇಯರ್ ಗಂಗಾಂಬಿಕೆ ನಿರ್ಧರಿಸಿದ್ದರು. ಈ ಸಂಬಂಧ ಮೆ.
ರಿವಾರ್ಡ್ಸ್ ಗುತ್ತಿಗೆ ಸಂಸ್ಥೆಗೆ ಆದೇಶಿಸಿದ್ದರು. ಅದರಂತೆ, ಸಂಸ್ಥೆಯು ಊಟ ಸರಬರಾಜು ಮಾಡುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ಸಂಸ್ಥೆಯು ಊಟ ಸರಬರಾಜು ಮಾಡದಿರಲು ನಿರ್ಧರಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಕ್ಯಾಂಟೀನ್ ಊಟ ವರ್ಷಕ್ಕೆ ಸೀಮಿತ: ಮೆ. ರಿವಾರ್ಡ್ಸ್ ಸಂಸ್ಥೆ 2018ರ ಅಕ್ಟೋಬರ್ನಿಂದ ಕ್ಯಾಂಟೀನ್ ಆಹಾರವನ್ನು ಕೌನ್ಸಿಲ್ ಸಭೆಗೆ ಸರಬರಾಜು ಮಾಡುತ್ತಿತ್ತು. ಎಲ್ಲ ಸದಸ್ಯರೂ ಈ ಆಹಾರವನ್ನೇ ಸೇವಿಸುತ್ತಿದ್ದರು. ಇದಕ್ಕಾಗಿ ವಾರ್ಷಿಕವಾಗಿ 18 ಲಕ್ಷ ರೂ. ಖರ್ಚಾಗುತ್ತಿತ್ತು.
ಊಟ ನಿಲ್ಲಿಸಲು ಬಿಜೆಪಿ ಲಾಬಿ: ಕಳೆದ ಆಡಳಿತದ ಅವಧಿಯಲ್ಲಿ ಕ್ಯಾಂಟೀನ್ನಿಂದ ಸರಬರಾಜಾಗುವ ಆಹಾರ ಕಳಪೆಯಾಗಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ಹುಯಿಲೆಬ್ಬಿಸಿದ್ದರು. ಅಲ್ಲದೆ, ಖಾಸಗಿ ಹೋಟೆಲ್ಗಳಿಂದ ಆಹಾರ ತರಿಸಿಕೊಂಡು ಊಟ ಮಾಡುತ್ತಿದ್ದರು. ಇದೀಗ ಪಾಲಿಕೆಯ ಆಡಳಿತ ಚುಕ್ಕಾಣಿ ಬಿಜೆಪಿಯ ಕೈಗೆ ಬಂದಿದೆ. ಹಾಗಾಗಿ ಕೌನ್ಸಿಲ್ ಸಭೆಗಳಿಗೆ ಕ್ಯಾಂಟೀನ್ ಊಟ ಸರಬರಾಜು ಮಾಡುವುದನ್ನು ನಿಲ್ಲಿಸುವಂತೆ ಮೆ. ರಿವಾರ್ಡ್ಸ್ ಸಂಸ್ಥೆ ಮೇಲೆ ಒತ್ತಡ ಹೇರಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
50 ಲಕ್ಷ ರೂ. ಹೆಚ್ಚುವರಿ ಖರ್ಚು
ಇಂದಿರಾ ಕ್ಯಾಂಟೀನ್ ಬದಲು ಖಾಸಗಿ ಹೋಟೆಲ್ಗಳಿಂದ ಆಹಾರ ತರಿಸುವುದರಿಂದ ಭೋಜನದ ವೆಚ್ಚ 18 ಲಕ್ಷ ರೂ.ನಿಂದ 75 ಲಕ್ಷ ರೂ.ಗೆ ಹೆಚ್ಚಾಗಲಿದೆ. ಇದರಿಂದ 50 ಲಕ್ಷ ರೂ. ಹೆಚ್ಚು ಸಾರ್ವಜನಿಕ ಹಣ ಪೋಲಾಗುತ್ತದೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ.
ನಮ್ಮ ದೇಶ ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದೆ. ಹೀಗಿರುವಾಗ ಕಡಿಮೆ ಬೆಲೆಯ ಗುಣಮಟ್ಟದ ಇಂದಿರಾ ಕ್ಯಾಂಟೀನ್ನಿಂದ ಆಹಾರ ತರಿಸಿ ಸೇವಿಸುವ ಅಗತ್ಯವಿದೆ. ಆದರೆ ಮೇಯರ್ ಹಾಗೂ ಆಡಳಿತ ಪಕ್ಷದ ಸದಸ್ಯರು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲು ಗುತ್ತಿಗೆ ಸಂಸ್ಥೆ ಮೇಲೆ ಒತ್ತಡ ಹಾಕಿ, ಸರಬರಾಜು ಸ್ಥಗಿತಗೊಳಿಸುವ ಪತ್ರ ಬರೆಸಿದ್ದಾರೆ. | ಅಬ್ದುಲ್ ವಾಜೀದ್. ಬಿಬಿಎಂಪಿಯ ಪ್ರತಿಪಕ್ಷ ನಾಯಕ.
ಸಾರ್ವಜನಿಕರ ತೆರಿಗೆ ಹಣ ಉಳಿತಾಯ ಮಾಡಲು ಪಾಲಿಕೆಯ ಎಲ್ಲ ಕೌನ್ಸಿಲ್ ಸಭೆಗೆ ಇಂದಿರಾ ಕ್ಯಾಂಟೀನ್ ಆಹಾರ ತರಿಸಲಾಗುತ್ತಿತ್ತು. ಇದರಿಂದ ಎಲ್ಲರಿಗೂ ಸಮಾನತೆಯ ಸಂದೇಶ ರವಾನೆಯಾಗುತ್ತಿತ್ತು. ಈಗ ಮೆ. ರಿವಾರ್ಡ್ಸ್ ಸಂಸ್ಥೆ ಯಾವ ಕಾರಣಕ್ಕಾಗಿ ಆಹಾರ ಸರಬರಾಜು ನಿಲ್ಲಿಸಲಿದೆ ಎಂಬುದು ಗೊತ್ತಾಗುತ್ತಿಲ್ಲ. | ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾಜಿ ಮೇಯರ್.