ನೀತಿ ಸಂಹಿತೆ ನಿಯಮಗಳ ಪಾಲನೆ ಮಾಡಿ

Hospet Dc Meeting
ಹೊಸಪೇಟೆಯ ಡಿಸಿ ಕಚೇರಿಯಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸಭೆ ನಡೆಸಿದರು. ಎಡಿಸಿ ಜಿ.ಅನುರಾಧಾ, ಚುನಾವಣಾ ಶಾಖೆಯ ಮನೋಜ್ ಲಾಡೆ, ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಮಧುಸೂದನ್, ನಿಂಬಗಲ್ ರಾಮಕೃಷ್ಣ, ಪಿ.ವೀರಾಂಜನೇಯ, ಮಂಜುನಾಥ, ಕೆ.ಕೊಟ್ರೇಶ್ ಇತರರಿದ್ದರು.
Published on

ಹೊಸಪೇಟೆ: ವಿಧಾನ ಪರಿಷತ್ತಿನ ಈಶಾನ್ಯ ಸೇರಿ ಮೂರು ಪದವೀಧರರ ಕ್ಷೇತ್ರಕ್ಕೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದ್ದು, ಮೇ 9ರಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಅಧಿಸೂಚನೆ ಹೊರಡಿಸಲಿದ್ದಾರೆ. ನೀತಿ ಸಂಹಿತೆಯ ಎಲ್ಲ ನಿಬಂಧನೆಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಚುನಾವಣಾ ಆಯೋಗ ರಾಜ್ಯದ ವಿಧಾನ ಪರಿಷತ್‌ಗೆ ಅವಧಿ ಮುಕ್ತಾಯವಾಗುವ ಮೂರು ಶಿಕ್ಷಕರ ಕ್ಷೇತ್ರಗಳ ಜತೆಗೆ ಮೂರು ಪದವೀಧರರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆ ಮಾಡಿದೆ. ಮೇ 9ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರಗಳ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ನಾಮಪತ್ರಗಳನ್ನು ಹಿಂಪಡೆಯಲು ಮೇ 20 ಕೊನೆಯ ದಿನವಾಗಿದೆ. ಜೂ.3ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂ.6ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಯ ಪ್ರಕ್ರಿಯೆಯು ಜೂ.12ರೊಳಗೆ ಮುಕ್ತಾಯವಾಗಲಿದೆ. ಈಗಾಗಲೇ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಎಲ್ಲ ನಿಯಮಗಳು ವಿಧಾನ ಪರಿಷತ್ತಿನ ಚುನಾವಣೆಗೂ ಅನ್ವಯಿಸುತ್ತವೆ. ಹೀಗಾಗಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಮೇ 6 ಕೊನೆಯ ದಿನ: ರಾಜ್ಯ ವಿಧಾನ ಪರಿಷತ್ತಿನ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಲು ಮೇ 6 ಕೊನೆಯ ದಿನವಾಗಿದೆ. ಆಯಾ ತಾಲೂಕು ಕಚೇರಿಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದು ಡಿಸಿ ದಿವಾಕರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net