ಪೊಲೀಸರ ಕರ್ತವ್ಯ ನಿಷ್ಠೆ ಶ್ಲಾಘನೀಯ

21 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಾಜದ ಆಂತರಿಕ ಭದ್ರತೆ ಕಾಪಾಡುತ್ತಿರುವ ಮತ್ತು ಒತ್ತಡ ನಡುವೆಯೂ ಜನರ ಸುರಕ್ಷತೆಗೆ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೊಲೀಸರ ಕರ್ತವ್ಯ ನಿಷ್ಠೆ ಶ್ಲಾಘನೀಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಹೇಳಿದರು.

ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ನಗರದ ಪೊಲೀಸ್​ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್​ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ನಿತ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್​ ಸಿಬ್ಬಂದಿ ತಮ್ಮ ಆರೋಗ್ಯ, ಕುಟುಂಬದ ಬಗ್ಗೆಯೂ ಗಮನ ಹರಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ, ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಜನರೊಂದಿಗೆ ಉತ್ತಮ ನಡುವಳಿಕೆಯಿಂದ ವರ್ತಿಸಿ, ಪೊಲೀಸರು ಜನರ ವಿಶ್ವಾಸ ಗಳಿಸುವುದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಅಪರಾಧಗಳನ್ನು ಪತ್ತೆ ಮಾಡಲು ಸಹಾಯವಾಗುತ್ತದೆ ಎಂದರು.

ಪ್ರೊ.ಎಸ್​.ಎಂ.ಶಿವಪ್ರಸಾದ ಮಾತನಾಡಿ, ರಾಷ್ಟ್ರದ ಗಡಿ ಕಾಯುವ ಯೋಧರು ಬಾಹ್ಯ ದುಷ್ಟ ಶಕ್ತಿಗಳಿಂದ ರಾಷ್ಟ್ರ ರಕ್ಷಿಸುವಂತೆ, ಪೊಲೀಸರು ರಾಷ್ಟ್ರದೊಳಗಿನ ದುಷ್ಟ ಶಕ್ತಿ ಮಟ್ಟಹಾಕಿ, ಆಂತರಿಕ ಭಧ್ರತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಸಮಾಜ ಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯ, ಬದ್ಧತೆಯಿಂದ ಬಲಿದಾನದಂತಹ ಘಟನೆಗಳು ಜರುಗುತ್ತಿವೆ. ಬಲಿದಾನಗೈದ ಪೊಲೀಸರ ಶ್ರಮ ಸ್ಮರಿಸಬೇಕು ಎಂದರು.

ಪೊಲೀಸ್​ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಮಾತನಾಡಿದರು. ಹೆಚ್ಚುವರಿ ಪೊಲೀಸ್​ ಅಧೀಕ ನಾರಾಯಣ ಬರಮನಿ, ಹುತಾತ್ಮ ಯೋಧ ಹುಚ್ಚೇಶ ಮಲ್ಲನ್ನವರ ತಂದೆ ಹನುಮಂತಪ್ಪ, ತಾಯಿ, ಸಹೋದರಿ ನಾಗರತ್ನಾ ಹಾಗೂ ಕುಟುಂಬಸ್ಥರು, ನಿವೃತ್ತ ಪೊಲೀಸ್​ ಅಧಿಕಾರಿ, ಸಿಬ್ಬಂದಿ, ಜಿಲ್ಲೆಯ ಎಲ್ಲ ಪೊಲೀಸ್​ ಠಾಣೆಗಳ ಅಧಿಕಾರಿಗಳು, ಪೊಲೀಸರು, ಇತರರು ಇದ್ದರು.

ಹುತಾತ್ಮರಾದ ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಆನಂದಕುಮಾರ.ಬಿ. ಮತ್ತು ವೈ.ಎಂ.ದೊಡ್ಡಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net