

ಮಂಗಳೂರು: ಪೊಲೀಸ್ ವಾಹನದ ವಿಮಾ ಅವಧಿ ಮುಕ್ತಾಯವಾಗಿದೆ ಎಂದು ಆರೋಪಿಸಿ ಸಾರ್ವಜನಿಕರೋರ್ವರು ಚಿತ್ರೀಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರಿನ ಕುಂಟಿಕಾನದ ಬಳಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್ ಸವಾರನನ್ನು ನಿಲ್ಲಿಸಿ, ಮಾಲಿನ್ಯ ತಪಾಸಣಾ ಪ್ರಮಾಣಪತ್ರ ಇಲ್ಲದೇ ಇದ್ದುದರಿಂದ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸವಾರ ಪೊಲೀಸ್ ವಾಹನದ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ‘ನಾನು ಆಸ್ಪತ್ರೆಗೆ ತುರ್ತಾಗಿ ಹೋಗಬೇಕಿದೆ. ಪೊಲೀಸರು ನನ್ನನ್ನು ತಡೆದು ನನ್ನ ವಾಹನದ ದಾಖಲೆ ಸರಿ ಇಲ್ಲವೆಂದು ದಂಡ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇಲ್ಲಿರುವ ಪೊಲೀಸ್ ವಾಹನದ ವಿಮಾ ಅವಧಿ ಮುಗಿದಿದೆ’ ಎಂದು ಆ ವೀಡಿಯೋದಲ್ಲಿ ಹೇಳಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.
ವೀಡಿಯೋ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು ಸ್ಪಷ್ಟೀಕರಣ ನೀಡಿದ್ದಾರೆ. ‘ಮೇ 16ರಂದು ಸಂಜೆ ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಿಸಿದ ಸಾರ್ವಜನಿಕರೋರ್ವರು ವಾಹನದ ವಿಮಾ ಅವಧಿ ಮುಕ್ತಾಯವಾಗಿದೆ. ಪೊಲೀಸ್ ಇಲಾಖೆ ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿದೆ ಎಂದಿದ್ದಾರೆ. ಆದರೆ ಇದು ಸುಳ್ಳು ಸಂದೇಶ. ಪೊಲೀಸ್ ಇಲಾಖೆಯ ಎಲ್ಲ ವಾಹನಗಳು ಕರ್ನಾಟಕ ಗವರ್ನ್‌ಮೆಂಟ್ ಇನ್ಶೂರೆನ್ಸ್ ಡಿಪಾರ್ಟ್‌ಮೆಂಟ್(ಕೆಜಿಐಡಿ) ವಿಮೆಯನ್ನು ಕಡ್ಡಾಯವಾಗಿ ಹೊಂದಿರುತ್ತವೆ. ಈ ವಿಮೆಯನ್ನು ಕಾಲ ಕಾಲಕ್ಕೆ ನವೀಕರಿಸಲಾಗುತ್ತದೆ. ವಿಮೆ ನವೀಕರಣಗೊಳ್ಳದ ಯಾವುದೇ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳುವುದಿಲ್ಲ. ವೀಡಿಯೋದಲ್ಲಿ ತೋರಿಸಲಾದ ಗಸ್ತು ವಾಹನದ ವಿಮಾ ಅವಧಿ ಅ.13ರವರೆಗೆ ಮತ್ತು ವಾಹನದ ಮಾಲಿನ್ಯ ತಪಾಸಣಾ ಅವಧಿ 2025ರ ಜ.8ರವರೆಗ ಚಾಲ್ತಿಯಲ್ಲಿರುತ್ತದೆ. ವೀಡಿಯೋ ಮಾಡಿದ ಸಾರ್ವಜನಿಕ ವ್ಯಕ್ತಿಯು ಆತನ ಮೋಟರ್ ಬೈಕ್‌ನ ವಾಯುಮಾಲಿನ್ಯ ತಪಾಸಣಾ ಪ್ರಮಾಣಪತ್ರವನ್ನು ತೋರ್ಪಡಿಸದೇ ಇರುವುದರಿಂದ 500 ರೂ. ದಂಡ ವಿಧಿಸಲಾಗಿದೆ’ ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.