5 ವರ್ಷ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಪೊಲೀಸ್ ಸಿಬ್ಬಂದಿ ಎತ್ತಂಗಡಿ

Police
Published on

ಬೆಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದೇ ಠಾಣೆಯಲ್ಲಿ 5 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿರುವ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆಗೆ ಸೂಚಿಸಲಾಗಿದೆ. ಅ.31ರ ಅಂತ್ಯಕ್ಕೆ ಒಂದೇ ಠಾಣೆಯಲ್ಲಿ 5 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿರುವ ಪಿಸಿ, ಎಚ್‌ಸಿಗಳನ್ನು ಜೇಷ್ಟತಾಪಟ್ಟಿ ಆಧಾರದ ಮೇಲೆ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಒಂದೇ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದರೇ ಭ್ರಷ್ಟಾಚಾರ, ಅಕ್ರಮ ವ್ಯವಹಾರ ಇನ್ನೀತ್ತರ ಕರ್ತವ್ಯ ಲೋಪ ಎಸಗುವ ಸಾಧ್ಯತೆ ಇರುವ ಕಾರಣಕ್ಕೆ ವರ್ಗಾವಣೆ ಅಸ ಬಳಸಲಾಗುತ್ತಿದೆ.

ಜ್ಯೇಷ್ಠತಾಪಟ್ಟಿ ಆಧರಿಸಿ ಕೌನ್ಸಲಿಂಗ್ ಮೂಲಕ ಆಯಾ ಉಪವಿಭಾಗ ವ್ಯಾಪ್ತಿಯಲ್ಲಿಯೇ ವರ್ಗಾವಣೆ ಮಾಡಲಾಗುತ್ತಿದೆ. ಈ ಹಿಂದೆ ಸೇವೆನಿರ್ವಹಿಸಿದ ಠಾಣೆ ಅಥವಾ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗೆ ಸ್ಥಳ ನಿಯುಕ್ತಿ ಅವಕಾಶವಿಲ್ಲ. ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ವಿಡಿಯೋಗ್ರಫಿ ಮಾಡಲಾಗುತ್ತದೆ. ಅಗತ್ಯ ಇದ್ದರೇ ಕಮಿಷನರ್ ಕಚೇರಿಗೆ ಒಪ್ಪಿಸಬೇಕಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ. ಈಗಾಗಲೇ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಡಿ.5ರ ಒಳಗೆ ಪೂರ್ಣಗೊಳಿಸುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಅಸಮಧಾನ : ತರಾತೂರಿ ವರ್ಗಾವಣೆ ವಿರುದ್ಧ ಪೊಲೀಸ್ ಸಿಬ್ಬಂದಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ಮನೆ ಬದಲಾವಣೆ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಸರ್ಕಾರಿ ನೌಕರರ ವರ್ಗಾವಣೆ ಏಪ್ರಿಲ್ ಮತ್ತು ಮೇ ನಲ್ಲಿ ನಡೆಯುತ್ತದೆ. ಆದರೆ, ಪೊಲೀಸರಿಗೆ ಮಾತ್ರ ತರಾತೂರಿಯಲ್ಲಿ ಡಿ.5ರ ಒಳಗೆ ನಡೆಯಬೇಕೆಂದು ಸೂಚನೆ ಕೊಟ್ಟಿದ್ದಾರೆ. ಅದರಲ್ಲಿಯೂ ಉಪವಿಭಾಗ ವ್ಯಾಪ್ತಿಯಲ್ಲಿಯೇ ಠಾಣೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇದರಿಂದ ಪೊಲೀಸರಿಗೆ ಅನುಕೂಲಕ್ಕಿಂತೆ ಸಮಸ್ಯೆಗಳೇ ಹೆಚ್ಚಾಗಿವೆ ಎಂದು ಕೆಲ ಸಿಬ್ಬಂದಿ ಅಳಲುತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net