ಹೆದ್ದಾರಿಯಲ್ಲಿ ಪೊಲೀಸ್ ವ್ಯವಸ್ಥೆ ಕಲ್ಪಿಸಿ

kotatattu
Published on

ಕೋಟ: ವಿವೇಕ ಬಾಲಕರ ಪ್ರೌಢಶಾಲೆ ಶಾಲೆ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಂದಣಿ ಇರುವುದರಿಂದ ಪೊಲೀಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ರೋಶನ್ ಆಗ್ರಹಿಸಿದರು.

ಕೋಟತಟ್ಟು ಪಡುಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಟತಟ್ಟು ಗ್ರಾಪಂನ 2024-25ನೇ ಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ರಾಷ್ಟ್ರೀಯ ಹೆದ್ದಾರಿ ಬದಿ ಮಣ್ಣು ಹಾಕಬೇಕು, ಕೋಟತಟ್ಟು ಪಡುಕರೆ ಶಾಲಾ ಆಟದ ಮೈದಾನಕ್ಕೆ ಮಣ್ಣು ಹಾಕಬೇಕು, ವಾಚನಾಲಯ ವ್ಯವಸ್ಥೆ ಮಾಡಿಕೊಡಿ ಎಂದು ವಿದ್ಯಾರ್ಥಿಗಳು ಬೇಡಿಕೆ ಸಲ್ಲಿಸಿದರು. ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಕೋಟ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ವಿಶ್ವನಾಥ ಬಿ. ಮಕ್ಕಳಿಗೆ ಆರೋಗ್ಯ ಸಲಹೆ ನೀಡಿದರು. ಪಂಚಾಯಿತಿ ಸದಸ್ಯ ಎಚ್.ಪ್ರಮೋದ್ ಹಂದೆ ಮಕ್ಕಳಿಗೆ ಕಾನೂನು ಸಲಹೆ ನೀಡಿದರು. ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ, ಸದಸ್ಯೆ ವಿದ್ಯಾ, ಪಶು ಆಸ್ಪತ್ರೆ ಕೋಟದ ವೈದ್ಯಾಧಿಕಾರಿ, ನೋಡಲ್ ಅಧಿಕಾರಿ ಡಾ.ಅನಿಲ್ ಕುಮಾರ್ ಎಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲಕ್ಷ್ಮೀ, ಕೋಟತಟ್ಟು ಪಡುಕರೆ ಎಸ್‌ಡಿಎಂಸಿ ಅಧ್ಯಕ್ಷ ಸುಲೇಮಾನ್ ಕೋಟತಟ್ಟು, ಕೋಟತಟ್ಟು ಪಡುಕರೆ ಶಾಲೆ ಮುಖ್ಯ ಶಿಕ್ಷಕ, ಅಧ್ಯಾಪಕರು, ವಿದ್ಯಾರ್ಥಿಗಳು, ವಿವೇಕ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಸದಸ್ಯರು, ಸಾರ್ವಜನಿಕರು, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಕೋಟತಟ್ಟು ಗ್ರಾಪಂ ಕಾರ್ಯದರ್ಶಿ ಸುಮತಿ ಅಂಚನ್ ಸ್ವಾಗತಿಸಿದರು. ಪಿಡಿಒ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net