ಸ್ಲೀಪರ್ ಸೆಲ್​ಗಳ ಮೇಲೆ ನಿಗಾ: ದೇಶವಿರೋಧಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ

Bommai
Published on

ಹುಬ್ಬಳ್ಳಿ: ದೇಶ ವಿರೋಧಿ ಚಟುವಟಿಕೆ ನಡೆಸುವ, ಉಗ್ರರ ಜತೆ ಕೈ ಜೋಡಿಸಿ ಸ್ಲೀಪರ್ ಸೆಲ್​ಗಳಂತೆ ಕೆಲಸ ಮಾಡುವವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ. ಈಗಾಗಲೇ ಎನ್​ಐಎ ಕೆಲವರನ್ನು ವಶಕ್ಕೆ ತೆಗೆದುಕೊಂಡಿದೆ. ನಮ್ಮ ಪೊಲೀಸರು ಎನ್​ಐಎ ಜತೆ ಕೂಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಹಲವಾರು ಕೇಂದ್ರ ಸಚಿವರು ಗುರುವಾರ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಷಾ ಅವರೊಂದಿಗೆ ಹಲವಾರು ಅಭಿವೃದ್ಧಿ ವಿಚಾರವಾಗಿ ಚರ್ಚೆಯಾಗಲಿದೆ ಎಂದರು.

ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ವಿಷಯವಾಗಿ ಜಿಲ್ಲಾವಾರು ಕೋವಿಡ್ ಪರಿಸ್ಥಿತಿ ತಿಳಿದು ವರದಿ ನೀಡುವಂತೆ ತಜ್ಞರನ್ನು ಕೇಳಿದ್ದೇವೆ. ಸೆ. 5ರಂದು ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು. ಆರ್ಥಿಕ ಚಟುವಟಿಕೆಗೆ ನಿರ್ಬಂಧ ವಿಧಿಸುವ ಉದ್ದೇಶ ಇಲ್ಲ. ಆರೋಗ್ಯವೂ ಅಷ್ಟೇ ಮುಖ್ಯ. ಕೋವಿಡ್ ನಿಯಂತ್ರಣದಲ್ಲಿರುವ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಸಡಿಲಿಸುವ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಬಿಜೆಪಿ ಗೆಲ್ಲಿಸಲು ಮನವಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಈ ಮೂರೂ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಆಡಳಿತ ಸೂತ್ರ ಹಿಡಿಯಲಿದೆ ಎಂದು ಮುಖ್ಯಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ ಎಂದ ಅವರು, ಮತದಾರರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಬಹುಮತ ನೀಡಬೇಕೆಂದು ವಿನಂತಿಸಿದರು.

ನವೀಕರಣವಲ್ಲ, ರಿಪೇರಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಂಚಿಕೆ ಆಗಿರುವ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ವಸತಿ ಗೃಹ ಸಣ್ಣ-ಪುಟ್ಟ ರಿಪೇರಿ ಮಾಡಿ, ಸುಣ್ಣ ಬಣ್ಣ ಬಳಿಯಲಾಗುತ್ತಿದ್ದು, ನವೀಕರಣವಲ್ಲ ಎಂದು ಸಿಎಂ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ದಾವಣಗೆರೆಗಿಂದು ಷಾ

ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್ ಷಾ ಜಿಲ್ಲೆಗೆ ಗುರುವಾರ ಭೇಟಿ ನೀಡಲಿದ್ದಾರೆ. ನಗರದ ಗಾಂಧಿ ಭವನ ಕಟ್ಟಡ, ಜಿಎಂಐಟಿ ಕಾಲೇಜಿನಲ್ಲಿ 10.5 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಜಿಎಂ ಕೇಂದ್ರ ಗ್ರಂಥಾಲಯ ಕಟ್ಟಡ, ಹರಿಹರ ತಾಲೂಕು ಕೊಂಡಜ್ಜಿ ಹೊರ ವಲಯದಲ್ಲಿ ನಿರ್ವಿುಸಿರುವ ಪೊಲೀಸ್ ಪಬ್ಲಿಕ್ ಸ್ಕೂಲ್ ಉದ್ಘಾಟನೆಯನ್ನು ಅವರು ನೆರವೇರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net