

ಕೋಲಾರ: ಶ್ರೀನಿವಾಸಪುರದಲ್ಲಿ ಭಾನುವಾರ ಪೊಲೀಸರು ಹೈ ಅರ್ಲಟ್ ಆಗಿದ್ದರು. ಎಲ್ಲಿ ನೋಡಿದರೂ ಖಾಕಿ ಪಡೆಗಳು, ಪೊಲೀಸ್ ಜೀಪ್ಗಳ ಓಡಾಟ ಕಂಡುಬಂತು. ಪಟ್ಟಣದಲ್ಲಿ ಏನೋ ನಡೆದಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿತ್ತು.
ಅರಣ್ಯ ಒತ್ತುವರಿ ಸಂದರ್ಭ ಬೆಳೆ ನಾಶವಾಗಿದ್ದ ಪರಿಣಾಮ ಹಾಗೂ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟ ರೈತ ಮಹಿಳೆಯರನ್ನು ವೀಸಲು ಆಸ್ಪತ್ರೆಗೆ ಸಂಸದ ಮುನಿಸ್ವಾಮಿ ಹಾಗೂ ಮಾಜಿ ಸಚಿವ ಆರ್.ಅಶೋಕ್ ಆಗಮಿಸುತ್ತಾರೆಂದು ಶ್ರೀನಿವಾಸಪುರ ಪಟ್ಟಣದಲ್ಲಿ ಪೊಲೀಸ್ ಹೈ ಅರ್ಲಟ್ ಆಗಿತ್ತು.
ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಜೆಸಿಬಿಗಳನ್ನು ಜಖಂಗೊಂಡಿದ್ದು, ಈ ಸಂಬಂಧ ಸಂಸದರು ಸೇರಿದಂತೆ 20 ಜನರ ಮೇಲೆ ಕೇಸು ದಾಖಲಾಗಿದೆ. ಸಂಸದರು, ಬಿಜೆಪಿ ಮುಖಂಡರು ಹಾಗೂ ರೈತರ ಮೇಲೆ ಕೇಸು ದಾಖಲಾಗಿರುವುದರಿಂದ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಬಹುದು. ಅಥವಾ ಠಾಣೆಗೆ ಮುತ್ತಿಗೆ ಹಾಕಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸರು ಎಸ್ಪಿ ನಾರಾಯಣ್ ನೇತೃತ್ವದಲ್ಲಿ ಶ್ರೀನಿವಾಸಪುರದಲ್ಲಿ ಮೊಕ್ಕಾಂ ಹೂಡಿದ್ದರು.
ಠಾಣೆಗೆ ಹೋಗುವ ಮುಖ್ಯದ್ವಾರದಲ್ಲಿಯೇ ನೂರಾರು ಪೊಲೀಸರು ಬೀಡುಬಿಟ್ಟಿದ್ದರು. ಸಂಸದರು ಆಸ್ಪತ್ರೆಗೆ ಬರುತ್ತಿದ್ದಂತೆಯೇ ಹತ್ತಾರು ಪೊಲೀಸ್ ವ್ಯಾನ್ಗಳು ಮತ್ತು ಪೊಲೀಸರು ಆಸ್ಪತ್ರೆಯನ್ನು ಸುತ್ತುವರಿದರು. ಆರ್.ಅಶೋಕ್ ಮತ್ತು ಮಾಜಿ ಸಚಿವ ಡಾ.ಸುಧಾಕರ್ ಆಗಮಿಸುತ್ತಾರೆಂಬ ಸುದ್ದಿ ಹರಡಿತ್ತು. ಇದರಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಂಸದರ ವಿರುದ್ಧ ಕೇಸು ದಾಖಲಾಗಿರುವುದರಿಂದ ಅವರನ್ನು ಬಂಧಿಸುತ್ತಾರೆಂಬ ಸುದ್ದಿ ಹರಡಿತ್ತು. ಇದಕ್ಕೂ ಹೆಚ್ಚಾಗಿ ಸಂಸದರ ನೇತೃತ್ವದಲ್ಲಿ ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆ ಮುಂಭಾಗ ಅಥವಾ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಯುತ್ತದೆ. ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸಬೇಕೆಂಬ ಒತ್ತಾಯ ಮಾಡುತ್ತಾರೆಂಬ ಸುದ್ದಿ ಹರಡಿದ್ದರಿಂದ ಪಟ್ಟಣದಲ್ಲಿ ಪೊಲೀಸ್ ಅರ್ಲಟ್ ಆಗಿತ್ತು. ಸಂಸದ ಮುನಿಸ್ವಾಮಿ ಕೋಲಾರಕ್ಕೆ ತೆರಳಿದ ಬಳಿಕ ಪಟ್ಟಣದ ಎಂ.ಜಿ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಹಾಗೂ ಪಾಳ್ಯ ಗ್ರಾಮದಲ್ಲಿ ಪರೇಡ್ ನಡೆಸಿದರು.
ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಯತ್ನ
ಶ್ರೀನಿವಾಸಪುರ: ಒತ್ತುವರಿ ತೆರವು ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ಕೇಸು ದಾಖಲಿಸಿ ರಾತ್ರೋರಾತ್ರಿ ಮನೆಗಳ ಮೇಲೆ ದಾಳಿ ಮಾಡಿ ಸಂಬಂಧಿಕರನ್ನು ಕರೆದೊಯ್ದಿರುವುದಕ್ಕೆ ಹತಾಶೆಗೊಂಡ ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಪಾಳ್ಯ ಗ್ರಾಮದಲ್ಲಿ ನಡೆದಿದೆ.
ರೈತರಾದ ಶ್ಯಾಮಲಾ ಗೋಪಾಲರೆಡ್ಡಿ ಮತ್ತು ಲ್ಮದೇವಮ್ಮ ಆತ್ಮಹತ್ಯೆ ಯತ್ನಿಸಿದವರು. ಗ್ರಾಮಸ್ಥರು ಕೂಡಲೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಳ್ಯ ಗ್ರಾಮದ ಶ್ಯಾಮಲಾ ಮತ್ತು ಲ್ಮದೇವಮ್ಮ ಎಂಬುವರ ಜಮೀನಿನಲ್ಲಿ ಕ್ಯಾರೆಟ್, ಹೂಕೋಸು, ಟೊಮ್ಯಾಟೊ ಬೆಳೆಗಳನ್ನು ಬೆಳೆಯಲಾಗಿತ್ತು. ಶುಕ್ರವಾರ ಅರಣ್ಯ ಇಲಾಖೆಯವರು ಜಮೀನು ನಮಗೆ ಸೇರಿದ್ದು ಎಂದು ಗಡಿ ಗುರುತಿಸಲು ಹೋಗಿ ಬೆಳೆ ನಾಶಪಡಿಸಿದ್ದರು. ಶನಿವಾರ ಬೆಳೆಯನ್ನು ಸಂಪೂರ್ಣ ನಾಶಪಡಿಸಿ ಹೋದಾಗ ಸಂಸದ ಮುನಿಸ್ವಾಮಿ ಮತ್ತು ಬಿಜೆಪಿ ಮುಖಂಡರು ಹಾಗೂ ರೈತರು ಜಮಾಯಿಸಿ ಜೆಸಿಬಿಗಳನ್ನು ಮತ್ತು ಅರಣ್ಯ ಸಿಬ್ಬಂದಿಯನ್ನು ಓಡಿಸಿದ್ದರು. ರೊಚ್ಚಿಗೆದ್ದ ರೈತರು ಕೆಲವು ಜೆಸಿಬಿಗಳನ್ನು ಜಖಂಗೊಳಿಸಿದ್ದಾರೆಂದು ಅರಣ್ಯ ಇಲಾಖೆಯ ದೂರಿನ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಶನಿವಾರ ತಡರಾತ್ರಿ ಪಾಳ್ಯ ಗ್ರಾಮ ಮತ್ತು ದ್ವಾರಸಂದ್ರ ಗ್ರಾಮದ ರೈತರ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ರೈತರನ್ನು ವಶಕ್ಕೆ ಪಡೆದು ಬಳಿಕ ರೈತ ಮಹಿಳೆಯರ ಮನೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಹತಾಶೆಗೊಂಡ ರೈತ ಮಹಿಳೆಯರಿಬ್ಬರು ಭೂಮಿ ಕಳೆದುಕೊಂಡಿದ್ದಲ್ಲದೆ ನಮ್ಮ ಮೇಲೆಯೇ ದೂರು ದಾಖಲಿಸಿಕೊಂಡು ರಾತ್ರಿ ವೇಳೆ ಮನೆಗಳ ಮೇಲೆ ದಾಳಿ ಮಾಡುತ್ತಿರುವುದು ಯಾವ ನ್ಯಾಯವೆಂದು ವಿಷ ಸೇವಿಸಿದ್ದರು.
ಕೋಲಾರ: ಅರಣ್ಯ ಇಲಾಖೆಯವರು ಎಕರೆಗೆ ಐದು ಲಕ್ಷ ರೂಪಾಯಿ ಡಿಮಾಂಡ್ ಮಾಡುತ್ತಿದ್ದಾರೆ. ಸರ್ಕಾರ ಆತ್ಮಹತ್ಯೆ ಮಾಡಿಕೊಂಡರೆ 2&3 ಲಕ್ಷ ರೂಪಾಯಿ ನೀಡುತ್ತಿದೆ. ಅರಣ್ಯ ಮತ್ತು ಕಂದಾಯ ಸಚಿವರು ಆತ್ಮಹತ್ಯೆ ಮಾಡಿಕೊಳ್ಳಲಿ, ನಾನೇ 5 ಅಥವಾ 50 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಸಂಸದ ಮುನಿಸ್ವಾಮಿ ಹೇಳಿದ್ದು, ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ದಾಖಲಾಗಿರುವ ಶ್ಯಾಮಲಾ ಗೋಪಾಲರೆಡ್ಡಿ ಮತ್ತು ಲ್ಮದೇವಮ್ಮಅವರನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಮತ್ತು ಅರಣ್ಯ ಇಲಾಖೆ ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಇದರಿಂದ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ. ನನ್ನನ್ನು ಜೈಲಿಗೆ ಹಾಕಲಿ ಅಥವಾ ಗುಂಡಿಕ್ಕಿ ಕೊಲ್ಲಲಿ ರೈತರ ಪರವಾಗಿ ನಿಲ್ಲುತ್ತೇನೆ ಎಂದರು. ಶನಿವಾರ ಪಾಳ್ಯ ಗ್ರಾಮದಲ್ಲಿ ಒತ್ತುವರಿ ನೆಪದಲ್ಲಿ ಬೆಳೆ ನಾಶಪಡಿಸಿದ್ದಾರೆ. ಅದನ್ನು ತಡೆಯಲು ಸ್ಥಳಕ್ಕೆ ಹೋದಾಗ ಅಲ್ಲಿ ಅರಣ್ಯ ಇಲಾಖೆಯವರು ಇರಲಿಲ್ಲ. ಜೆಸಿಬಿಗಳ ಗರ್ಜನೆ ಹೆಚ್ಚಾಗಿತ್ತು. ಬೆಳೆ ನಾಶಪಡಿಸುವುದನ್ನು ತಡೆದಿದ್ದಕ್ಕೆ ಅರಣ್ಯ ಇಲಾಖೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ರಾತ್ರೋರಾತ್ರಿ ರೈತರ ಮನೆಗಳ ಮೇಲೆ ದಾಳಿ ಮಾಡಿ, ಭಯೋತ್ಪಾದಕರಂತೆ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳನ್ನೂ ಬಂಧಿಸಿದ್ದಾರೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ಗೆ ನಾಚಿಕೆಯಾಗಬೇಕು. ಒತ್ತುವರಿ ನೆಪದಲ್ಲಿ ರೈತರನ್ನು ಸರ್ಕಾರ ಕೊಲೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಡೆವರ್ಗಳಿಗೆ ತರಾಟೆ: ಅರಣ್ಯ ಇಲಾಖೆಯವರು ದಿನಕ್ಕೆ ಜೆಸಿಬಿಗಳಿಗೆ 700&800 ರೂಪಾಯಿ ಕೊಡುತ್ತಾರೆಂದು ಕುಡಿದ ಅಮಲಿನಲ್ಲಿ ಜೆಸಿಬಿ ಡ್ರೆವರ್ ಮತ್ತು ಮಾಲೀಕರು ರೈತರ ಬೆಳೆಯನ್ನು ನಾಶಪಡಿಸಿರುವುದಲ್ಲದೆ ಅವರ ಮೇಲೆ ಜೆಸಿಬಿ ಹತ್ತಿಸಲು ಹೋಗುತ್ತಿರಲ್ಲಾ? ನಿಮ್ಮ ಅಕ್ಕ&ತಂಗಿಯರ ಮೇಲೆ ಇದೇ ರೀತಿ ಮಾಡುತ್ತೀರಾ? ಎಂದು ಜೆಸಿಬಿ ಡೆವರ್ ಮತ್ತು ಮಾಲೀಕರನ್ನು ಸಂಸದ ಮುನಿಸ್ವಾಮಿ ತರಾಟೆಗೆ ತೆಗೆದುಕೊಂಡರು.
ರೈತರನ್ನು ಒಕ್ಕಲೆಬ್ಬಿಸುವ ಕೆಲಸ : ಅರಣ್ಯ ಇಲಾಖೆಯವರು ನೂರು ಕೇಸು ಹಾಕಿದರೂ ನಾನು ಹೆದರುವುದಿಲ್ಲ. ರಾಜ್ಯಮಟ್ಟದಲ್ಲಿ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ರಾತ್ರಿ ವೇಳೆ ಜೆಸಿಬಿ ಡ್ರೆವರುಗಳಿಗೆ ಕುಡಿಸಿ ಅರಣ್ಯ ಇಲಾಖೆಯವರು ರೈತರ ಮೇಲೆ ದಬ್ಬಾಳಿಕೆ ಮಾಡಿಸುತ್ತಿದ್ದಾರೆ. ತೆರವು ಕಾರ್ಯಾಚರಣೆ ನಿಲ್ಲುವ ತನಕ ನನ್ನ ಹೋರಾಟ ಮುಂದುವರಿಯುತ್ತದೆ. ತಾಲೂಕಿನಲ್ಲಿ ಅರಣ್ಯ ಇಲಾಖೆ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಸಂಸದರು ಎಚ್ಚರಿಸಿದರು.
ಕೋಲಾರ: ಶ್ರೀನಿವಾಸಪುರ ತಾಲೂಕಿನ ಪಾಳ್ಯಗ್ರಾಮ ಮತ್ತು ನಾರವಮಾಕಲ ಪಲ್ಲಿ ಬಳಿ ಅರಣ್ಯ ಒತ್ತುವರಿ ತೆರವು ಮಾಡುತ್ತಿದ್ದ ವೇಳೆ ಸಂಸದ ಮುನಿಸ್ವಾಮಿ, ಬಿಜೆಪಿ ಮುಖಂಡರು ಹಾಗೂ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಜೆಸಿಬಿಗಳನ್ನು ಜಖಂಗೊಳಿಸಿದ ಸಂಬಂಧ ಮುನಿಸ್ವಾಮಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಸೇರಿ 20 ಜನರ ವಿರುದ್ಧ ಕೇಸು ದಾಖಲಿಸಲಾಗಿದ್ದು, 15 ಜನರನ್ನು ಬಂಧಿಸಲಾಗಿದೆ.
ಎಸ್.ಪಿ.ನಾರಾಯಣ್ ಸುದ್ದಿಗಾರರೊಂದಿಗೆ ಮಾತನಾಡಿ, ಅರಣ್ಯ ಸಿಬ್ಬಂದಿ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದ ಜೆಸಿಬಿಗಳ ಜಖಂಗೊಳಿಸಿರುವ ಮತ್ತು ಪ್ರಚೋದನಕಾರಿಯಾಗಿ ಮಾತನಾಡಿರುವುದರಿಂದ ಕೇಸ್ ದಾಖಲಿಸಲಾಗಿದೆ. ಪ್ರಕರಣದಲ್ಲಿ 1 ಟೆಂಪೋ ವಶಪಡಿಸಿಕೊಳ್ಳಲಾಗಿದೆ ಎಂದರು.
ಸುಮಾರು 100ಕ್ಕೂ ಹೆಚ್ಚು ಜನ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮತ್ತು ಜೆಸಿಬಿಗಳನ್ನು ಜಖಂಗೊಳಿಸಿರುವ ಸಂಬಂಧ ವಿಡಿಯೋಗಳ ಮೂಲಕ ಕೆಲವರನ್ನು ಗುರುತಿಸಲಾಗಿದೆ. ಸದ್ಯಕ್ಕೆ 20 ಜನರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಉಳಿದವರನ್ನು ಪತ್ತೆ ಹಚ್ಚುವ ಕೆಲಸ ಮುಂದುವರಿಯಲಿದೆ. ಎಂದರು. ಇಲಾಖೆ ಸಿಬ್ಬಂದಿ ಮೇಲೆ ಹಾಗೂ ಕಾರ್ಯಾಚರಣೆ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಅರಣ್ಯ ಇಲಾಖೆಯವರು ಕಾರ್ಯಾಚರಣೆ ವೇಳೆ ಮಾನವೀಯತೆಯಿಂದ ಮನವಿ ಮಾಡಬೇಕು ಅಥವಾ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಬೇಕು. ಏಕಾಏಕಿ ಕಾನೂನು ಕೈಗೆತ್ತಿಕೊಳ್ಳಬಾರದು. ಮೂರು ಹಂತಗಳಲ್ಲಿ ಕೇಸುಗಳನ್ನು ದಾಖಲಿಕೊಳ್ಳಲಾಗಿದೆ ಎಂದರು
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನಾದ್ಯಂತ ಕಳೆದ 20 ದಿನಗಳಿಂದ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸುತ್ತೇನೆ. ಆದರೆ ರೈತರ ಬೆಳೆಗಳು ತೆಗೆದುಕೊಳ್ಳುವವರೆಗೂ ಕಾಲಾವಕಾಶ ಕೊಟ್ಟು ಬಳಿಕ ತೆರವು ಕಾರ್ಯಾಚರಣೆ ಮಾಡಿಕೊಳ್ಳಲಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದ್ದಾರೆ.
ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ, ಕಾರ್ಯಾಚರಣೆ ಸಂದರ್ಭ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಒತ್ತುವರಿ ಭೂಮಿಯಲ್ಲಿ ರೈತರು ಬೆಳೆದಿರುವ ತರಕಾರಿ ಹಾಗೂ ಮಾವಿನ ಮರಗಳನ್ನು ನಾಶ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರೈತರು ಬೆಳೆಗಳು ತೆಗೆದುಕೊಳ್ಳುವರೆಗೂ ಹಾಗೂ ಕೋಳಿ ಫಾರಂನಂತಹ ಯಾವುದೇ ಕಟ್ಟಡಗಳು ನಿರ್ಮಿಸಿದ್ದಲ್ಲಿ ಅವುಗಳನ್ನು ತೆಗೆದುಕೊಳ್ಳುವವರೆವಿಗೂ ಮಾನವೀಯ ದೃಷ್ಟಿಯಿಂದ ಕಾಲಾವಕಾಶ ಕೊಟ್ಟು ಬಳಿಕ ತೆರವು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆ ರೈತರನ್ನು ಸಮಾಧಾನಪಡಿಸಿ ಅವರ ಮೇಲೆ ಯಾವುದೇ ದೂರು ದಾಖಲಿಸದಂತೆ ಕ್ರಮವಹಿಸಬೇಕು. ಇತ್ತೀಚೆಗೆ ಕೆಲವು ರೈತರ ವಿರುದ್ಧ ದೂರು ದಾಖಲು ಮಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು, ಅಂತಹ ದೂರುಗಳನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.