ಹುಕ್ಕೇರಿ ಪೊಲೀಸ್ ಠಾಣೆ ಸೀಲ್‌ಡೌನ್

corona
Published on

ಹುಕ್ಕೇರಿ: ಇಲ್ಲಿನ ಪೊಲೀಸ್ ಠಾಣೆ ಸಿಬ್ಬಂದಿಯೋರ್ವರಿಗೆ ಕರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಬುಧವಾರ ಪೋಲಿಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಠಾಣೆಯ ಇತರ ಸಿಬ್ಬಂದಿಗೆ ಆತಂಕ ಎದುರಾಗಿದೆ. ಕರೊನಾ ಸೇನಾನಿಗಳಾಗಿ ಶ್ರಮಿಸುತ್ತಿರುವ ಪುರಸಭೆ ಮತ್ತು ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ತಗುಲಿತ್ತು.

ಇದೀಗ ಪೊಲೀಸ್ ಸಿಬ್ಬಂದಿಗೆ ತಗುಲಿರುವುದು ಸೇನಾನಿಗಳಲ್ಲಿ ಭಯ ಮೂಡಿಸಿದೆ. ಇನ್ನಾದರೂ ಜನತೆ ಹಾಗೂ ಜನಪ್ರತಿನಿಧಿಗಳು ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಂಡು ವ್ಯವಹರಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ನಿಪ್ಪಾಣಿ: ತಾಲೂಕಿನಲ್ಲಿ 10 ಜನರಿಗೆ ಬುಧವಾರ ಕರೊನಾ ಸೋಂಕು ತಗುಲಿದೆ. ನಗರದಲ್ಲೆ 9 ಜನರಿಗೆ ಸೋಂಕು ದೃಢಪಟ್ಟಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಭೋಜ ಗ್ರಾಮದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ತಾಲೂಕು ಆಡಳಿತವು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಕರೊನಾ ವೈರಸ್ ಪ್ರಾರಂಭದ ದಿನಗಳಲ್ಲಿ ತಾಲೂಕಿನಾದ್ಯಂತ ಸದ್ದು ಮಾಡಿರಲಿಲ್ಲ. ಆದರೆ, ಲಾಕ್‌ಡೌನ್ ನಂತರ ಕರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದೆ. ತಾಲೂಕಿನ 28 ಗ್ರಾಮದಲ್ಲಿ ಸೋಂಕಿತರು ಕಂಡು ಬಂದಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net