

ಪುತ್ತೂರು: ಮೆರವಣಿಗೆ ಸಂದರ್ಭ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಬದಲಿಸಿ ವಾಹನ ಸವಾರರಿಗೆ ತೊಂದರೆಯಾಗದಂತೆ ಮಾಡಬೇಕು. ಈದ್ ಮಿಲಾದ್ ಅಂಗವಾಗಿ ದರ್ಬೆ ಅಶ್ವಿನಿ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಕಿಲ್ಲೆ ಮೈದಾನದ ತನಕ ಪಾದಯಾತ್ರೆ ನಡೆಯಲಿದೆ. ಮೆರವಣಿಗೆ ಸಂದರ್ಭ ಯುವಕರ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಸ್ವಯಂಸೇವಕರ ತಂಡ ಹೆಚ್ಚು ಕ್ರೀಯಾಶೀಲವಾಗಿ ಪೊಲೀಸರಿಗೆ ಸಹಕಾರ ನೀಡಬೇಕು.
ಇದು ಪುತ್ತೂರು ನಗರ ಠಾಣೆಯಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮುಖಂಡರಿಂದ ಕೇಳಿ ಬಂದ ಮಾತು.
ಪೊಲೀಸ್ ನಿರೀಕ್ಷಕ ಸತೀಶ್ ಕುಮಾರ್ ಮಾತನಾಡಿ ಹಬ್ಬದ ಆಚರಣೆಯ ಸಂದರ್ಭ ನಡೆಯುವ ಮೆರವಣಿಗೆಯಲ್ಲಿ ದೇವಾಲಯ ಹಾಗೂ ಮಸೀದಿ ಮುಂದೆ ಅನಗತ್ಯ ಘೋಷಣೆ ಹಾಕುವುದಕ್ಕೆ ಅವಕಾಶವಿಲ್ಲ. ಮೆರವಣಿಗೆಯಲ್ಲಿ ಡಿಜೆ ಬಳಸಬಾರದು ಮತ್ತು ರಾತ್ರಿ ೧೦ ಗಂಟೆ ಮೊದಲು ಕಾರ್ಯಕ್ರಮ ಮುಗಿಸಬೇಕು. ಹಬ್ಬಗಳ ಸಂದರ್ಭದಲ್ಲಿ ಯಾವುದೇ ಧರ್ಮಕ್ಕೆ ತೊಂದರೆಯಾದ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜನರ ಸಹಕಾರ ಬೇಕು ಎಂದು ಹೇಳಿದರು.
ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಸಣ್ಣಪುಟ್ಟ ಘಟನೆಗಳು ನಡೆದಾಗ ಅನಗತ್ಯ ಗೊಂದಲ ಸೃಷ್ಟಿಸದೆ ತಾಳ್ಮೆಯಿಂದ ವರ್ತಿಸಬೇಕಾಗಿದೆ. ಧರ್ಮ ಪ್ರತಿಯೊಬ್ಬರಿಗೂ ಮುಖ್ಯವೇ, ಆದರೆ ಇನ್ನೊಂದು ಧರ್ಮಕ್ಕೆ ಯಾವುದೇ ತೊಂದರೆಯಾಗದಂತೆ ನಾವು ನಡೆದುಕೊಳ್ಳಬೇಕು. ಕೋಮು ಸೌಹಾರ್ದತೆವನ್ನು ನಾವು ಕಾಪಾಡಿಕೊಂಡು ದ.ಕ ಜಿಲ್ಲೆಯ ಕಪ್ಪುಚುಕ್ಕೆ ತೆಗೆಯಬೇಕು ಎಂದರು.
ಸಂಚಾರಿ ಠಾಣೆ ಉಪನಿರೀಕ್ಷಕ ಉದಯ ರವಿ ಮಾತನಾಡಿ, ಮೆರವಣಿಗೆ ಸಂದರ್ಭದಲ್ಲಿ ಯುವಕರು ಬೈಕ್‌ಗಳನ್ನು ಬೇಕಾಬಿಟ್ಟಿ ಓಡಿಸುವುದಕ್ಕಿ ನಿಯಂತ್ರಣ ಹಾಕಬೇಕು. ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಕುಳಿತು ಓಡಾಟ ನಡೆಸುವುದು ದೊಡ್ಡ ಸಮಸ್ಯೆಯಾಗುತ್ತಿದೆ. ಇಂತಹ ವಿಚಾರಗಳನ್ನು ಸಂಘಟಕರು ಗಮನಿಸಿಕೊಂಡು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಮುಖಂಡರಾದ ಮುರಳೀಕೃಷ್ಣ ಹಸಂತ್ತಡ್ಕ, ಜಗದೀಶ್ ನೆಲ್ಲಿಕಟ್ಟೆ, ಲೊಕೇಶ್ ಹೆಗ್ಡೆ, ರಾಧಾಕೃಷ್ಣ ನಂದಿಲ, ಶಿವಕುಮಾರ್, ನೂರುದ್ದೀನ್ ಸಾಲ್ಮರ ಮತ್ತಿತರರು ಸಲಹೆ ನೀಡಿದರು. ಧಾರ್ಮಿಕ ಮುಖಂಡರಾದ ದಿನೇಶ್ ಪಿ.ವಿ, ಸುದೇಶ್ ಚಿಕ್ಕಪುತ್ತೂರು, ದಯಾನಂದ್, ಎಲ್.ಟಿ.ರಝಾಕ್, ದಿನೇಶ್ ಪಂಜಿಗ, ಹರೀಶ್ ದೋಲ್ಪಾಡಿ, ಗಣೇಶ್ ಪೈ, ಬೇಬಿಜಾನ್, ಗೋವರ್ಧನ ಕಾವೇರಿಕಟ್ಟೆ ಮತ್ತಿತರರು ಹಾಜರಿದ್ದರು.