

ಹೊಸಪೇಟೆ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸುಪ್ರೀಂ ಕೋರ್ಟ್ ನಿಯಮ ಮೀರಿ ಡಿಜೆ ಬಳಕೆ ಮಾಡಿದ್ದ ಜೆಸ್ಕಾಂ ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಕ್ಕೆ ಸಿಟ್ಟಿಗೆದ್ದ ಜೆಸ್ಕಾಂ ಸಿಬ್ಬಂದಿ ಬಡಾವಣೆ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಸ್ವಾರಸ್ಯಕರ ಘಟನೆ ನಗರದಲ್ಲಿ ನಡೆದಿದೆ.
ಜೆಸ್ಕಾಂ ಕಚೇರಿಯಲ್ಲಿ ವಿನಾಯಕ ಪ್ರತಿಷ್ಠಾಪನೆ ಮಾಡಿದ್ದ ಸಿಬ್ಬಂದಿ ೩ನೇ ದಿನದ ಅಂಗವಾಗಿ ಶುಕ್ರವಾರ ತಡ ರಾತ್ರಿ ಗಣೇಶ ವಿಸರ್ಜನೆಗೆ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ನಿಯಮ ಮೀರಿ ತಡ ರಾತ್ರಿ ಡಿಜೆ ಮೊಳಗಿಸಿ ಕುಣಿದು ಕುಪ್ಪಳಿಸುತ್ತಿದ್ದರು. ಡಿಜೆ ಬಳಕೆಗೆ ಆಕ್ಷೇಪಿಸಿದ ಪೊಲೀಸರು, ಡಿಜೆ ವಶಕ್ಕೆ ಪಡೆದು ಜೆಸ್ಕಾಂನ ೧೦ ಜನನೌಕರರ ವಿರುದ್ಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರಿಂದ ಸಿಟ್ಟಿಗೆದ್ದ ಜೆಸ್ಕಾಂ ಸಿಬ್ಬಂದಿ ಶನಿವಾರ ಬೆಳಗ್ಗೆಯೇ ಬಡಾವಣೆ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಪರಿಣಾಮ ಒಂದು ಗಂಟೆ ಕಾಲ ವಿದ್ಯುತ್ ಸಂಪರ್ಕವಿಲ್ಲದೇ ಪೊಲೀಸರು ಪರದಾಡಿದರು. ಅಕ್ಕಪಕ್ಕದ ಕಟ್ಟಡಗಳಲ್ಲಿ ಕರೆಂಟ್ ಇದ್ದರೂ, ಠಾಣೆಯಲ್ಲಿ ವಿದ್ಯುತ್ ಪೂರೈಕೆಯಾಗದಿದ್ದಕ್ಕೆ ಅನುಮಾನಗೊಂಡು ಪರಿಶೀಲಿಸಿದರೆ, ಕಂಬದ ಬಳಿಕ ಸಂಪರ್ಕ ಕಡಿತಗೊಳಿಸಲಾ ಗಿತ್ತು. ಈ ಬಗ್ಗೆ ಮೇಲಾಧಿಕಾರಿಗಳು ಸಮಾಲೋಚನೆ ನಡೆಸಿ, ಠಾಣೆಗೆ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.