

ಕಡಬ: ಕಡಬ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಗಳನ್ನು ಸೇರಿಸಿಕೊಂಡು ನೂತನ ತಾಲೂಕು ಕೇಂದ್ರ ಕಡಬದಲ್ಲಿ ಪೊಲೀಸ್ ವೃತ್ತ ಕಚೇರಿ ಆರಂಭಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಕಾನೂನು ಸುವ್ಯವಸ್ಥೆ ಪರಿಣಾಮಕಾರಿಯಾಗಿ ಕಾಯ್ದುಕೊಳ್ಳಲು ಕಡಬದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಬಗ್ಗೆ ಹಲವು ವರ್ಷಗಳಿಂದ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ 19 ಗ್ರಾಮಗಳ ವ್ಯಾಪ್ತಿ ಹೊಂದಿರುವ ಕಡಬ ಠಾಣೆಯ ಹೆಸರಿನಲ್ಲಿ 2.5 ಎಕರೆ ಜಮೀನು ಇದೆ. ಸುಳ್ಯ ಠಾಣೆಯನ್ನು ಮೇಲ್ದರ್ಜೆಗೇರಿಸಿ ಕಡಬ ಠಾಣೆ ವ್ಯಾಪ್ತಿಯ 19 ಗ್ರಾಮ, ಸುಬ್ರಹ್ಮಣ್ಯ ಠಾಣೆಯ ವ್ಯಾಪ್ತಿಯ 15 ಗ್ರಾಮ ಹಾಗೂ ಬೆಳ್ಳಾರೆ ಠಾಣೆ ವ್ಯಾಪ್ತಿಯ 21 ಗ್ರಾಮಗಳು ಸೇರಿ ಒಟ್ಟು 55 ಗ್ರಾಮಗಳ ವ್ಯಾಪ್ತಿಯ ವೃತ್ತ ಕಚೇರಿ ಹೊಸದಾಗಿ ಮಾಡಿದರೆ ಕಾನೂನು ಸುವ್ಯವಸ್ಥೆ ಉತ್ತಮ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಎಸ್.ಅಂಗಾರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ನೆಲ್ಯಾಡಿಯಲ್ಲೂ ಠಾಣೆ
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಡಬ ತಾಲೂಕಿಗೆ ಸೇರಿರುವ ನೆಲ್ಯಾಡಿಯಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಆರಂಭಿಸಲು ಸರ್ಕಾರದ ಮುಂದೆ ಬೇಡಿಕೆ ಇದೆ. ಈಗಾಗಲೇ ಉಪ್ಪಿನಂಗಡಿ ಠಾಣೆಯ ಹೊರಠಾಣೆ ನೆಲ್ಯಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಪರಿಸರದ ಜನರು ಠಾಣೆಯ ಹೆಚ್ಚಿನ ಕೆಲಸಗಳಿಗೆ ದೂರದ ಉಪ್ಪಿನಂಗಡಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಪೂರ್ಣ ಪ್ರಮಾಣದ ಠಾಣೆಯ ಬೇಡಿಕೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಕಡಬದಲ್ಲಿ ವೃತ್ತ ಕಚೇರಿ ಆರಂಭಿಸಬೇಕೆಂಬ ಬೇಡಿಕೆ ಈ ಹಿಂದೆಯೇ ವ್ಯಕ್ತವಾಗಿತ್ತು. ಕಡಬ ತಾಲೂಕು ರಚನೆಯಾದ ಬಳಿಕ ಅಗತ್ಯ ಹಿನ್ನೆಲೆ ವೃತ್ತ ಕಚೇರಿಗೆ ಸಂಬಂಧಿತ ಸಾಧಕವಾಗಿರುವ ಹಲವು ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಿ ಸರ್ಕಾರದ ಮುಂದಿಡಲಾಗಿದೆ.
ಎಸ್.ಅಂಗಾರ, ಶಾಸಕ
ಶಾಸಕ ಅಂಗಾರ ಅವರ ಜತೆಗೆ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ನೆಲ್ಯಾಡಿಯಲ್ಲಿ ಪೂರ್ಣ ಪ್ರಮಾಣದ ಠಾಣೆ ಆರಂಭಿಸಬೇಕೆಂಬ ಬೇಡಿಕೆ ಮಂಡಿಸಲಾಗಿದೆ. ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ.
ಬಾಲಕೃಷ್ಣ ಬಾಣಜಾಲು, ಪುತ್ತೂರು ಎಪಿಎಂಸಿ ನಿರ್ದೇಶಕ
ಮುಂದಿನ ದಿನಗಳಲ್ಲಿ ಸುಳ್ಯ ಪೊಲೀಸ್ ಠಾಣೆ ಮೇಲ್ದರ್ಜೆಗೇರಿದರೆ ಕಡಬ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ಠಾಣೆಗಳನ್ನು ಸೇರಿಸಿ ಕಡಬ ಪೊಲೀಸ್ ವೃತ್ತ ರಚನೆಯಾಗುವ ಸಾಧ್ಯತೆಗಳಿವೆ. ಈ ಹಿಂದೆ ಈ ಕುರಿತು ಸರ್ಕಾರಕ್ಕೆ ವರದಿ ಕಳುಹಿಸಲಾಗಿತ್ತು.
ಬಿ.ಎಂ.ಲಕ್ಷ್ಮೀ ಪ್ರಸಾದ್, ಎಸ್ಪಿ, ದ.ಕ.