

ಬೆಂಗಳೂರು: ಕರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಅಪರಾಧ ಪ್ರಕರಣಗಳ ಮೇಲೆ ತೀವ್ರತರ ಪರಿಣಾಮ ಬೀರಿದೆ. ಇತ್ತೀಚೆಗೆ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲು ಪೊಲೀಸರಿಗೆ ಕರೊನಾ ಭೀತಿ ಎದುರಾಗಿದೆ.
ಲಾಕ್ಡೌನ್ ನಡುವೆಯೂ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಬೈಕ್ ಕಳವು, ಮೊಬೈಲ್ ಕಳ್ಳತನ, ವಂಚನೆ, ಹಲ್ಲೆ, ಹಲ್ಲೆಗೆ ಯತ್ನ, ಅಪಘಾತ, ಕೊಲೆ, ಕೊಲೆಗೆ ಯತ್ನ ಹಾಗೂ ಸರ್ಕಾರಿ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿ ಮೇಲೆ ಹಲ್ಲೆಗಳಾಗುತ್ತಿವೆ. ಇದರಲ್ಲಿ ಗಂಭೀರಸ್ವರೂಪದ ಅಪರಾಧ ಪ್ರಕರಣಗಳಾದ ಕೊಲೆ, ಕೊಲೆಯತ್ನ ಹಾಗೂ ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ಕೇಸ್ಗಳ ಆರೋಪಿಗಳನ್ನು ಮಾತ್ರ ಬಂಧಿಸಲಾಗುತ್ತಿದೆ. ಇನ್ನುಳಿದ ಕೇಸ್ಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲು ಪೊಲೀಸರ ಕರ್ತವ್ಯಕ್ಕೆ ಕರೊನಾ ಕರಿನೆರಳು ಬೀರಿದೆ.
ಆರೋಗ್ಯ ಸಮಸ್ಯೆ ಇದ್ದರೆ ಕಷ್ಟ!: ಬಂಧಿತರಾದ ಆರೋಪಿಗಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ಕರೊನಾ ಭೀತಿಯಿಂದಾಗಿ ವೈದ್ಯಕೀಯ ತಪಾಸಣೆ ನಡೆಸುವುದು ಕಷ್ಟಕರವಾಗಿದೆ. ಒಂದು ವೇಳೆ ಬಂಧಿತನಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದ್ದರೆ ನಿಗಧಿತ ಸಮಯಕ್ಕೆ ವೈದ್ಯಕೀಯ ಸೇವೆ ಸಿಗುವುದು ಕಷ್ಟಕರವಾಗಿದೆ. ಒಂದುವೇಳೆ ಆತನಿಗೆ ಕರೊನಾ ಸೋಂಕು ತಗುಲಿದ್ದರೆ, ಜೈಲಿಗೆ ಕಳುಹಿಸಿದಾಗ ಎಲ್ಲ ಕೈದಿಗಳಿಗೂ ಸೋಂಕು ಹರಡುತ್ತದೆ. ಅಲ್ಲದೆ, ಲಾಕ್ಡೌನ್ ಬಂದೋಬಸ್ತ್ ಡ್ಯೂಟಿಯ ಒತ್ತಡವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ಕೇಸ್ಗಳ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಲಿನಲ್ಲಿ ಜಾಗವಿಲ್ಲ
ಜೈಲಿನಲ್ಲಿರುವ ಕೈದಿಗಳಿಗೆ ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳಿಗೂ ನಿರ್ದೇಶಿಸಿತ್ತು. ಇದರಿಂದಾಗಿ ರಾಜ್ಯದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿ ವಿವಿಧ ಜೈಲಿನಲ್ಲಿನ ವಿಚಾರಣಾಧೀನ ಕೈದಿಗಳ ಬಿಡುಗಡೆಗೆ 383 ಮಂದಿಯ ಪಟ್ಟಿಯ ಸಿದ್ಧಪಡಿಸಲಾಗಿದೆ. ಈ ಪೈಕಿ ಬೆಂಗಳೂರಿನ 80 ಮಂದಿ ವಿಚಾರಣಾಧಿನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಸಜಾಬಂಧಿಗಳಿಗೂ ಬಿಡುಗಡೆ ಮಾಡಲು ತಯಾರಿ ನಡೆದಿದೆ. ಹೀಗಾಗಿ, ಇತ್ತೀಚೆಗಿನ ಹೊಸ ಕೇಸ್ಗಳ ಆರೋಪಿಗಳನ್ನು ಬಂಧಿಸಿ ಎಲ್ಲಿಡಬೇಕು ಎಂಬ ಪ್ರಶ್ನೆ ಪೊಲೀಸರಿಗೆ ಎದುರಾಗಿದೆ.