ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ

2 HPT 1
ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯ ಕಚೇರಿಯ ನಿವೃತ್ತ ಡಿಎಸ್ಪಿ ಕೆ. ಶಿವಾರೆಡ್ಡಿಗೆ ಪೊಲೀಸ್ ತುಕಡಿಗಳು ಗೌರವ ವಂದನೆ ಸಲ್ಲಿಸಿದವು.
Published on

ಹೊಸಪೇಟೆ: ಇತ್ತೀಚಿನ ವರ್ಷಗಳಲ್ಲಿ ಅಪರಾಧ ಪ್ರಕರಣಗಳ ತನಿಖೆ ಮತ್ತು ಆರೋಪಿತರ ಪತ್ತೆಗಾಗಿ ಪೊಲೀಸ್ ಇಲಾಖೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳ ಸದ್ಬಳಕೆಯೊಂದಿಗೆ ನಿಷ್ಠೆಯಿಂದ ನಾವು ಕರ್ತವ್ಯ ನಿರ್ವಹಿಸಬೇಕು ಎಂದು ಬಳ್ಳಾರಿ ವಲಯ ಕಚೇರಿ ನಿವೃತ್ತ ಡಿಎಸ್ಪಿ ಕೆ. ಶಿವಾರೆಡ್ಡಿ ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆಯಲ್ಲಿ ಮಾತನಾಡಿ, ಕರ್ತವ್ಯಕ್ಕೆ ಸೇರಿದ ಆರಂಭದಲ್ಲಿ ಇರುವ ಸೌಲಭ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದೆವು. ಹಂತಹಂತವಾಗಿ ಪೊಲೀಸ್ ಸಿಬ್ಬಂದಿಗೂ ಪಡಿತರ, ವಾರದ ರಜೆ, ಹಬ್ಬಕ್ಕೆ ಮುಂಗಡ ಸಂಬಳ ಸೇರಿ ಮುಂಬಡ್ತಿ ಹೆಚ್ಚಾದವು.

ಅದೇ ರೀತಿ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿ ಆಧುನಿಕ ಸೌಲಭ್ಯಗಳು ಹೆಚ್ಚಾದವು. ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವ ನಾವು ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು. ಇಲಾಖೆ ಕರ್ತವ್ಯದ ವೇಳೆ ನಮ್ಮ ತಾಳ್ಮೆಯನ್ನು ಜನ ಪರೀಕ್ಷಿಸುತ್ತಾರೆ. ಪ್ರಾಮಾಣಿಕತೆ ಜತೆಗೆ ತಾಳ್ಮೆ ಸಹ ಇದ್ದಾಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುತ್ತೇವೆ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಮಾತನಾಡಿ, 1965 ಏ.2ರಂದು ರಾಜ್ಯ ಪೊಲೀಸ್ ಕಾಯ್ದೆ ಜಾರಿಯಾದ ಅಂಗವಾಗಿ ಅದೇ ದಿನ ಪೊಲೀಸ್ ಇಲಾಖೆಗೆ ಧ್ವಜ ನೀಡಲಾಗಿದೆ. ಹಾಗಾಗಿ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಕಲ್ಯಾಣ ದಿನ ಆಚರಿಸಲಾಗುತ್ತದೆ. ಈ ದಿನ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಬಂದ ಹಣದಿಂದ ನಿವೃತ್ತ ನೌಕರರ ಕಲ್ಯಾಣ ಕಾರ್ಯಗಳಿಗೆ ಬಳಕೆ ವಿನಿಯೋಗಿಸಲಾಗುತ್ತದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ವಯೋನಿವೃತ್ತಿ ಹೊಂದಿದ 18 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಂಗಣದ ಮೈದಾನದಲ್ಲಿ ಪೊಲೀಸ್ ತುಕಡಿಗಳಿಂದ ಪಥಸಂಚಲನ, ಧ್ವಜವಂದನೆ ನೆರವೇರಿಸಲಾಯಿತು. ಹೊಸಪೇಟೆ, ಕೂಡ್ಲಿಗಿ ಹಾಗೂ ಹರಪನಹಳ್ಳಿ ಉಪವಿಭಾಗ ಸೇರಿ ಮಹಿಳಾ ಪೊಲೀಸ್ ಸಿಬ್ಬಂದಿ ಗಾಂಭೀರ್ಯದಿಂದ ಪಥಸಂಚಲನಕ್ಕೆ ಹೆಜ್ಜೆ ಹಾಕಿದರು. ಕಂಪ್ಲಿ ಗೃಹರಕ್ಷಕ ದಳದಿಂದ ಪಥ ಸಂಚಲನದಲ್ಲಿ ಬ್ಯಾಂಡ್ ವಾದನ ನೀಡಿತು.

ಕರ್ತವ್ಯವನ್ನು ಪ್ರೀತಿಸಿದಾಗ ನಾವು ಉನ್ನತ ಸ್ಥಾನಕ್ಕೆ ಬರುತ್ತೇವೆ. ಪ್ರಾಮಾಣಿಕರಿಗೆ ಇಲಾಖೆಯೇ ಸೌಲಭ್ಯ ಒದಗಿಸುತ್ತಿದೆ. ಕಾನ್ಸ್‌ಸ್ಟೇಬಲ್ ಆಗಿ ಸೇವೆ ಆರಂಭಿಸಿದ ನಾನು ಡಿಎಸ್ಪಿಯಾಗಿ ನಿವೃತ್ತಿ ಹೊಂದಿರುವೆ. ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.ಕೆ.ಶಿವಾರೆಡ್ಡಿ ನಿವೃತ್ತ ಡಿಎಸ್ಪಿ

ಕಳೆದ ವರ್ಷ 2022ನೇ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ 8.11 ಲಕ್ಷ ರೂ. ಸಂಗ್ರಹವಾಗಿದೆ. ಅದರಲ್ಲಿ ಶೇ.50 ಭಾಗ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಉಳಿದ ಭಾಗ ಕೇಂದ್ರ ಕಲ್ಯಾಣ ನಿಧಿಗೆ ತಲುಪಿಸಲಾಗಿದೆ.ಶ್ರೀಹರಿ ಬಾಬು ಎಸ್ಪಿ ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net