ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ; ಪ್ರಮಿಳಾ ಅಯ್ಯಪ್ಪ

7c89efc1-fc2e-4f8f-b81d-7daa606b2ae6
Published on

ಮಡಿಕೇರಿ: ಪೊಲೀಸ್ ಇಲಾಖೆ ಅಧಿಕಾರಿ-ಸಿಬ್ಬಂದಿಗಳ ಒತ್ತಡದಿಂದ ಹೊರಬರಲು ಮತ್ತು ಉತ್ತಮ ಆರೋಗ್ಯಕ್ಕೆ ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಒಲಂಪಿಕ್ಸ್ ಕ್ರೀಡಾಪಟು ಬೊಳ್ಳಂಡ ಪ್ರಮಿಳಾ ಅಯ್ಯಪ್ಪ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಪೋಲಿಸ್ ಕವಾಯಿತು ಮೈದಾನದಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ನಡೆಯುವ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆ ಪ್ರತಿಯೊಬ್ಬರಿಗೂ ಮಹತ್ವದ್ದಾಗಿದೆ. ಕ್ರೀಡೆ ದೈಹಿಕ ಮತ್ತು ಮಾನಸಿಕವಾಗಿ ಸಧೃವನ್ನಾಗಿ ಮಾಡುತ್ತದೆ. ನಮ್ಮಿಂದ ಏನೂ ಸಾಧ್ಯವಿಲ್ಲ ಎನ್ನುವ ಭಾವನೆ ಬಿಟ್ಟು, ಉತ್ತಮ ಸಾಧನೆಯತ್ತ ಹೆಜ್ಜೆ ಹಾಕಿ; ಹಿಮಾದಾಸ್ ಅವರ ಸಾಧನೆ ನಿಮಗೆ ಮಾದರಿಯಾಗಲಿದೆ ಎಂದು ಹೇಳಿದರು.

ಕ್ರೀಡೆಯಲ್ಲಿ ಭಾಗವಹಿಸುವುದು ಒಂದು ಉತ್ತಮ ಅಭ್ಯಾಸ. ಒಳ್ಳೆಯ ಆರೋಗ್ಯವನ್ನು ಪಡೆಯಲು ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇನ್ನೂ ಉತ್ತಮ ಸಾಧನೆ ಮಾಡಲು ನೆರವಾಗುತ್ತದೆ. ಸಾಧಿಸಲು ಒಂದು ಉತ್ತಮ ಹಾದಿ. ನಿರುತ್ಸಾಹವನ್ನು ಬಿಟ್ಟು ಸದಾ ಉತ್ಸಾಹಿಗಳಾಗಿರಿ, ಆರೋಗ್ಯ ಉತ್ತಮ ಪಡಿಸಿಕೊಳ್ಳಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು.

ಶ್ರಮ ಪಟ್ಟರೆ ಮಾತ್ರ ಪ್ರತಿಫಲ ಪಡೆಯಲು ಸಾದ್ಯ. ಅಸಾಧ್ಯವಾದುದು ಯಾವುದೂ ಇಲ್ಲ. ಸೋಲು ಗೆಲುವಿನ ಮೆಟ್ಟಿಲಾಗಿದೆ. ಸೋತರು ಪರಿಶ್ರಮ ಬಿಡಬಾರದು. ಇಂದಲ್ಲ ನಾಳೆ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಪಾಲಕರು ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಅಭಿರುಚಿ ಹೊಂದಿದ್ದಾರೆ ಎಂದು ಮನಗಂಡು ಪ್ರೋತ್ಸಾಹ ನೀಡಬೇಕು. ಯಾವುದೇ ಕಾರ್ಯ ಅಸಾಧ್ಯವೆಂದು ತಿಳಿದುಕೊಳ್ಳಬಾರದು. ಸಾಧಿಸುವ ಛಲವಿರಬೇಕು ಎಂದು ಹೇಳಿದರು.

ಸಮರ್ಪಣೆ, ನಿರ್ಧಾರ ಮತ್ತು ಶಿಸ್ತುನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಸಾಧಿಸಬಹುದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿ.ವೈ.ಎಸ್.ಪಿ ದಿನೇಶ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net