

ಶಿವಮೊಗ್ಗ: ಜಿಲ್ಲಾದ್ಯಂತ ಕಳೆದ ಒಂದೂವರೆ ತಿಂಗಳಲ್ಲಿ ಮಾದಕ ವಸ್ತು ಗಾಂಜಾ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಜಿಲ್ಲಾ ಪೊಲೀಸರು, ಎನ್‌ಡಿಪಿಎಸ್‌ನಡಿ 87 ಆರೋಪಿಗಳ ವಿರುದ್ಧ 69 ಪ್ರಕರಣ ದಾಖಲಿಸಿ 3.874 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಜು.15ರಿಂದ ಬುಧವಾರ(ಸೆ.4)ದವರೆಗೆ ಗಾಂಜಾ ಸೇವನೆ ಮಾಡಿ 59 ಪ್ರಕರಣಗಳಲ್ಲಿ 68 ಮಂದಿಯನ್ನು ಬಂಧಿಸಲಾಗಿದೆ. 10 ಗಾಂಜಾ ಮಾರಾಟ ಪ್ರಕರಣ ದಾಖಲಿಸಿ 19 ಆರೋಪಿಗಳನ್ನು ಬಂಧಿಸಿ 1,14,500 ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 250 ಜನರನ್ನು ಗಾಂಜಾ ಪರೀಕ್ಷೆಗೆ ಒಳಪಡಿಸಿದಾಗ ಒಟ್ಟಾರೆ 69 ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡೂ ಹಬ್ಬಗಳ ಹಿನ್ನೆಲೆಯಲ್ಲಿ ಇದುವರೆಗೆ 1,199 ಸಭೆಗಳನ್ನು ನಡೆಸಲಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ(ಬ್ಯಾಡ್ ಕ್ಯಾರಕ್ಟರ್) 644 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗ ನಗರ ಮತ್ತು ಭದ್ರಾವತಿಯನ್ನು ಕೇಂದ್ರೀಕರಿಸಿಕೊಂಡು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಅದರಲ್ಲಿ 206 ಜನರ ಮೇಲೆ ಪ್ರಿವೆನ್ಶನ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 1,188 ಏರಿಯಾ ಡಾಮಿನೇಷನ್ ನಡೆಸಿ 9,674 ವ್ಯಕ್ತಿಗಳನ್ನು ಠಾಣೆಗಳಿಗೆ ಕರೆತಂದು ಲಘು ಪ್ರಕರಣ, ಕೋಟ್ಪಾ ಮತ್ತು ಮೋಟಾರು ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ ಎಂದರು.
ಕಳೆದೊಂದು ವಾರದಿಂದ ಸೂಕ್ಷ್ಮ ಮತ್ತು ಗಾಂಜಾ ಅಡ್ಡೆಗಳ ಮೇಲೆ ಡ್ರೋಣ್‌ಗಳ ಮೂಲಕ ದಾಳಿ ಮಾಡಲಾಗುತ್ತಿದೆ. ಅಡ್ಡೆಗಳಲ್ಲಿ ಸಿಕ್ಕ ಯುವಕರ ಪಾಲಕರನ್ನು ಕರೆಸಿ ಬುದ್ದಿವಾದ ಹೇಳುವಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಗಣೇಶ ಹಬ್ಬದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಶಿವಮೊಗ್ಗ ಪಾಲಿಕೆಯಿಂದ 350 ಹೆಚ್ಚುವರಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ನಗರದಾದ್ಯಂತ 500ಕ್ಕೂ ಅಧಿಕ ಸಿಸಿ ಕ್ಯಾಮರಾ ಅಳವಡಿಸಿದ್ದು ಒಟ್ಟಾರೆ 800ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳ ಕಣ್ಗಾವಲು ಇರಿಸಲಾಗಿದೆ. ಅಲ್ಲದೆ, ವೀಡಿಯೋಗ್ರಫಿ ಮತ್ತು ಡ್ರೋಣ್ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಜತೆಗೆ ಭದ್ರಾವತಿಯಲ್ಲಿ 120ರಿಂದ 140, ಸಾಗರದಲ್ಲಿ 70 ಹಾಗೂ ಶಿರಾಳಕೊಪ್ಪದಲ್ಲೂ 50ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಎಎಸ್ಪಿ ಎ.ಜಿ.ಕಾರಿಯಪ್ಪ, ಡಿವೈಎಸ್ಪಿಗಳಾದ ಬಾಬು ಆಂಜನಪ್ಪ, ಎಂ.ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.
2.195 ಕೆಜಿ ಗಾಂಜಾ ಜಪ್ತಿ, ಇಬ್ಬರ ಸೆರೆ
ಪುರಲೆಯ ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಬುಲೆರೋ ಪಿಕ್ ಅಪ್ ವಾಹನ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದು 70 ಸಾವಿರ ರೂ. ಮೌಲ್ಯದ 2.195 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. 6 ಲಕ್ಷ ರೂ.ಮೌಲ್ಯದ ಬುಲೆರೋ ಪಿಕ್‌ಅಪ್ ವಾಹನ ಹಾಗೂ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸಾಗರ ಪಟ್ಟಣ ರಾಮನಗರದ ಅಲ್ತಾಫ್ ಅಲಿಯಾಸ್ ಮಚ್ಚಿ (28) ಮತ್ತು ಶಿವಮೊಗ್ಗ ಜೆಪಿ ನಗರದ ತಬ್ರೇಜ್ (30) ಬಂಧಿತರು. ಅಲ್ತಾಫ್ ವಿರುದ್ಧ ಸಾಗರ ಠಾಣೆಯಲ್ಲಿ ಮೂರು ಗಾಂಜಾ, ಒಂದು ಜೂಜಾಟ, ಒಂದು ಮಾರಣಾಂತಿಕ ರಸ್ತೆ ಅಪಘಾತ, ಶಿವಮೊಗ್ಗ ಸಿಇಎನ್ ಮತ್ತು ತುಂಗಾನಗರ ಠಾಣೆಯಲ್ಲಿ ತಲಾ ಒಂದು ಗಾಂಜಾ ಪ್ರಕರಣ ದಾಖಲಾಗಿವೆ.