

ಶಿವಮೊಗ್ಗ: ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಪೊಲೀಸರು ಕಾಲ್ನಡಿಗೆ ವಿಶೇಷ ಗಸ್ತು ಮತ್ತು ವಿಶೇಷ ಗಸ್ತು(ಏರಿಯಾ ಡಾಮಿನೇಷನ್) ನಡೆಸಿ 33 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಶಿವಮೊಗ್ಗದ ಎಂಕೆಕೆ ರಸ್ತೆ, ಕೆ.ಆರ್.ಪುರಂ, ಸಂಗೊಳ್ಳಿ ರಾಯಣ್ಣ ವೃತ್ತ, ಲಷ್ಕರ್ ಮೊಹಲ್ಲಾ, ಜಟ್‌ಪಟ್ ನಗರ, ಬೆಂಕಿನಗರ, ರಾಗಿಗುಡ್ಡ, ಭದ್ರಾವತಿಯ ಜನ್ನಾಪುರ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿವೃತ್ತ, ಕೋಡಿಹಳ್ಳಿ, ಶಿಕಾರಿಪುರದ ತೇರುಬೀದಿ, ಅಂಬೇಡ್ಕರ್ ಸರ್ಕಲ್, ಹಳಿಯೂರ್ ಸರ್ಕಲ್, ಆನವಟ್ಟಿಯ ಆಜಾದ್‌ನಗರ, ಶಾದಿಮಹಲ್, ಸೊರಬದ ಕೋರ್ಟ್ ವೃತ್ತ, ಸೊರಬ ಬಸ್ ನಿಲ್ದಾಣ, ಸಾಗರದ ವಿನೋಬನಗರ, ಆನಂದಪುರ ಬಸ್ ನಿಲ್ದಾಣ, ಕಾರ್ಗಲ್ ಬಜಾರ್ ಮತ್ತು ತೀರ್ಥಹಳ್ಳಿಯ ಬಾಳೆಬೈಲು, ಬಟ್ಟೆಮಲ್ಲಪ್ಪ, ನಗರದ ಕೋಟೆ ರಸ್ತೆ, ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು.
ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಕಾಲ್ನಡಿಗೆ ವಿಶೇಷ ಗಸ್ತು, ಏರಿಯಾ ಡಾಮಿನೇಷನ್ ಗಸ್ತು ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಉಪಟಳ ಉಂಟು ಮಾಡುವ, ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದರು.
ಇದೇ ವೇಳೆ ವೀಕೆಂಡ್ ಹಿನ್ನೆಲೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಲಾಯಿತು. ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿದ್ದ 19 ಪ್ರಕರಣ ದಾಖಲಿಸಿದ್ದು, ದಂಡ ವಿಧಿಸಲಾಗಿದೆ. ಶಿವಮೊಗ್ಗದಲ್ಲಿ 10, ಭದ್ರಾವತಿಯಲ್ಲಿ 7, ಶಿಕಾರಿಪುರ 2 ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.