ಬೇಲೂರ ಕ್ರಾಸ್ ಬಳಿ ಶೂಟೌಟ್ : ದರೋಡೆಕೋರ ಅವತಾರಸಿಂಗ್ ಕಾಲಿಗೆ ಗುಂಡೇಟು : ಆತ್ಮರಕ್ಷಣೆಗೆ ಫೈರ್ ಮಾಡಿದ ಸಂತೋಷ

FB_IMG_1725124354674
Published on

ಪೊಲೀಸರ ತಳ್ಳಿ ಉಪನಗರ ಠಾಣೆಯಿಂದ ಪರಾರಿಯಾಗಿದ್ದ | ಪೊಲೀಸರ ಮೇಲೆ ದಾಳಿ ಮಾಡಿದಾಗ ಗುಂಡು ಹಾರಿಸಿದ ಇನ್‌ಸ್ಪೆಕ್ಟರ್ ತಟ್ಟೆಪಳ್ಳಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪೊಲೀಸರನ್ನು ತಳ್ಳಿ ಠಾಣೆಯಿಂದ ತಪ್ಪಿಸಿಕೊಂಡು ಹೋಗಿದ್ದ ಕುಖ್ಯಾತ ದರೋಡೆಕೋರನ ಮೇಲೆ ಇಲ್ಲಿನ ಉಪನಗರ ಠಾಣೆಯ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಹುಮನಾಬಾದ ರಸ್ತೆಯ ಬೇಲೂರ ಕ್ರಾಸ್ ಹತ್ತಿರಲ್ಲಿ ಶನಿವಾರ ರಾತ್ರಿ ನಡೆದ ಈ ಘಟನೆಯಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳು ಗಾಯಗೊಂಡಿದ್ದು, ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ  ಅಪಾಯದಿಂದ ಪಾರಾಗಿದ್ದಾರೆ.
ಅವತಾರಸಿಂಗ್ ಎಂಬಾತನೇ ಗುಂಡೇಟು ತಿಂದು ಆಸ್ಪತ್ರೆಗೆ ಸೇರಿರುವ ದರೋಡೆಕೋರ. ಗುಂಡೇಟು ತಿಂದ ದರೋಡೆಕೋರ ಹಾಗೂ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಭೀಮಾನಾಯಕ ಮತ್ತು ಮಂಜುನಾಥ ಅವರನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಸಬ್ ಅರ್ಬನ್ ಠಾಣೆ ವ್ಯಾಪ್ತಿಯ ಪಟ್ಟಣ ಕ್ರಾಸ್ ಹತ್ತಿರದಲ್ಲಿ ಕೆಲ ತಿಂಗಳ ಹಿಂದೆ ಧಾಬಾವೊಂದರ ಮೇಲೆ ದಾಳಿ ನಡೆಸಿ ಅಲ್ಲಿನ ಮಾಲೀಕರು ಇತರರ ಮೇಲೆ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿಕೊಂಡು ಹೋಗಿದ್ದ. ಅಲ್ಲದೆ ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ಸಹ ಇವೆ.
ಧಾಬಾದಲ್ಲಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಆತನನ್ನು ಉಪನಗರ (ಸಬ್ ಅರ್ಬನ್) ಪೊಲೀಸರು ಶನಿವಾರ ಮಧ್ಯಾಹ್ನ ವಶಕ್ಕೆ ಪಡೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆ ತಂದಿದ್ದರು.  ಈ ವೇಳೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ತಳ್ಳಿ ಅವತಾರಸಿಂಗ್ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಚೌಕ್ ಠಾಣೆಯಲ್ಲಿ ಪೇದೆ  ಫಿರೋಜ್ ಎಂಬುವರು ದೂರು ದಾಖಲಿಸಿದ್ದರು.
ಮಾಹಿತಿ ಅರಿಯುತ್ತಲೇ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಪರಾರಿಯಾಗಿರುವ ದರೋಡೆಕೋರ ಅವತಾರಸಿಂಗ್ ಬಂಧನಕ್ಕೆ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಿದರು. ಸಂಜೆ ಹೊತ್ತಿಗೆ ಆರೋಪಿತ ಬೇಲೂರ ಕ್ರಾಸ್‌ನಲ್ಲಿದ್ದಾನೆ ಎಂಬ ಮಾಹಿತಿಯಂತೆ ಅಲ್ಲಿಗೆ ತೆರಳಿದ್ದಾರೆ.
ಬಂಧಿಸಲು ಹೋಗಿದ್ದ ವೇಳೆಯಲ್ಲಿ ಪೊಲೀಸರ ಮೇಲೆ ಅವತಾರಸಿಂಗ್ ದಾಳಿ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆಯಲ್ಲಿ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಆರೋಪಿಗೆ ಶರಣಾಗುವಂತೆ ಸೂಚಿಸಿದರು ಆಗದೆ, ಅವರ ಮೇಲೆಯೂ ದಾಳಿ ಮಾಡಲು ಮುಂದಾದ ಈ ವೇಳೆಯಲ್ಲಿ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಅದು ಆತನ ಬಲಗಾಲಿಗೆ ಹೊಕ್ಕಿದೆ.
ಕೆಲ ದಿನಗಳ ಹಿಂದೆ ಬೀದರನಲ್ಲಿ ಕರ್ತವ್ಯದಲ್ಲಿದ್ದ ಸಂತೋಷ ಎಲ್.ಟಿ.ಅವರ ಮೇಲೆ ಆರೋಪಿತನೊಬ್ಬ ಮಾರಕಾಸ್ತçಗಳಿಂದ ದಾಳಿ ನಡೆಸಿದಾಗ ಫೈರಿಂಗ್ ಮಾಡಿದ್ದರು. ಅದಾದ ಸ್ವಲ್ಪ ದಿನಗಳಲ್ಲಿಯೇ ಕಲಬುರಗಿಯಲ್ಲಿ ಶೂಟೌಟ್ ಘಟನೆ ನಡೆದಿದೆ. ಈ ಮೂಲಕ ಅವರೊಬ್ಬ ಖಡಕ್ ಅಧಿಕಾರಿ ಎಂಬುದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಇನ್‌ಸ್ಪೆಕ್ಟರ್ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್,ಪ್ರವೀಣ ನಾಯಕ, ಎಸಿಪಿ ರಾಜಣ್ಣ ಡಿ.ಜಿ ಇತರರು ಭೇಟಿ ನೀಡಿದರು. ಅಲ್ಲದೆ ಗಾಯಗೊಂಡಿರುವ ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net