

ಚಿಕ್ಕಮಗಳೂರು: ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ನಂಬಿಕೆ, ವಿಶ್ವಾಸ ಗಳಿಸಿದರೆ ಪೊಲೀಸ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಪೊಲೀಸ್ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆಯಲ್ಲಿ ಮಾತನಾಡಿದರು.
ಹಿಂದೆ ಗ್ರಾಪಂ ಮಟ್ಟದಲ್ಲೆ ವ್ಯಾಜ್ಯ ಇತ್ಯರ್ಥ:
ಹಲವು ದಶಕಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಲು ಜನ ಹೆದರಿ ಗ್ರಾಪಂ ಮಟ್ಟದಲ್ಲೇ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಿದ್ದರು. ಇಂದು ಸಣ್ಣ ವಿಚಾರಕ್ಕೂ ನೇರವಾಗಿ ಠಾಣೆಗೆ ಬಂದು ದೂರು ನೀಡಿ ಪ್ರಶ್ನಿಸುವಷ್ಟು ಪರಿವರ್ತನೆಯಾಗಿರುವುದಕ್ಕೆ ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಸಂಬಂಧ ವೃದ್ಧಿಯೇ ಕಾರಣ. ಆ ಸಂಬಂಧಕ್ಕಾಗಿ ನಾಗರಿಕರು ಮಾಹಿತಿದಾರರಾಗಿದ್ದಾರೆ ಎಂದರು. ಗಡಿ ಭಾಗದ ಯೋಧರ ಪಡೆ ಹಾಗೂ ದೇಶದೊಳಗೆ ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವ ಪೊಲೀಸರು ಈ ಎರಡು ಶಿಸ್ತಿನ ಸೇವೆಗಳ ವಿಶೇಷ ದಿನಕ್ಕೆ ನನ್ನ ಸೆಲ್ಯೂಟ್ ಅರ್ಪಿಸುತ್ತೇನೆ. ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೆ ಸಮಸ್ಯೆಗಳಿದ್ದರೆ ಗಮನಕ್ಕೆ ತಂದಲ್ಲಿ ಇತ್ಯರ್ಥಕ್ಕೆ ಪ್ರಯತ್ನ ಮಾಡುವುದಾಗಿ ಹೇಳಿದರು. ಜಿಪಂ ಸಿಇಒ ಎಸ್.ಪೂವಿತಾ ಮಾತನಾಡಿ, ಚುನಾವಣೆ, ಕೌಂಟಿಂಗ್, ಸಭೆ, ಹೋರಾಟಗಳ ಸಂದರ್ಭ ದೀಪಾವಳಿ, ಸಂಕ್ರಾಂತಿ ಹಬ್ಬಗಳನ್ನು ಮರೆತು ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ತವ್ಯಕ್ಕೆ ಹಾಜರಾಗಿರುತ್ತೀರಿ. ನಿಮ್ಮ ಕುಟುಂಬ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿರುವುದಕ್ಕೆ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಕರ್ತವ್ಯದಲ್ಲಿ ಪ್ರಾಮಾಣಿಕತೆ ಅಗತ್ಯ:
ನಿವೃತ್ತ ಪೊಲೀಸ್ ನಿರೀಕ್ಷಕ ಕೆ.ಪ್ರಭಾಕರ್ ಮಾತನಾಡಿ, ಸಾರ್ವಜನಿಕರು ಮತ್ತು ಇತರ ಇಲಾಖೆಗಳೊಂದಿಗೆ ಸಮನ್ವಯದಿಂದ ನಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಮೆರೆದರೆ ಪ್ರತಿಯೊಬ್ಬರೂ ಯಶಸ್ವಿಯಾಗಿ ನಿವೃತ್ತಿ ಹೊಂದಬಹುದು. ಪ್ರಾಮಾಣಿಕತೆ ಇಲ್ಲದಿದ್ದರೆ ಇಲಾಖೆಯಲ್ಲಿ ಮುಂದುವರಿಯುವುದು ಕಷ್ಟಸಾಧ್ಯ. ನಿತ್ಯ ಸವಾಲುಗಳನ್ನು ಎದುರಿಸುವಾಗ ನಾವು ಮಾಡುವ ತಪ್ಪುಗಳು ಮೇಲಾಧಿಕಾರಿಗಳಿಗೆ ನೋವು ಕೊಡುತ್ತದೆ ಎಂದರು.
ಅತ್ಯಾಚಾರ ಪ್ರಕರಣ ಸಮರ್ಥ ನಿರ್ವಹಣೆ:
ಶೃಂಗೇರಿ ಬಾಲಕಿ ಅತ್ಯಾಚಾರ ಘಟನೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಆ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ದೂರು ಬಂದ ಕೂಡಲೆ ದಾಖಲು ಮಾಡುವುದು ಬಿಟ್ಟು ಕೆಲವೊಮ್ಮೆ ಅದರ ಸತ್ಯಾಸತ್ಯತೆ ತಿಳಿದುಕೊಳ್ಳುವ ಭರದಲ್ಲಿ ತಡ ಮಾಡುವುದಾಗುತ್ತದೆ. ಪೋಕ್ಸೊ, ಎಸ್ಸಿ-ಎಸ್ಟಿ ದೌರ್ಜನ್ಯದಂತಹ ಗಂಭೀರ ಪ್ರಕರಣಗಳನ್ನು ಆದಷ್ಟು ತ್ವರಿತವಾಗಿ ವಿಲೇವಾರಿ ಮಾಡಿದರೆ ಸಮಸ್ಯೆ ಎದುರಾಗುವುದನ್ನು ತಪ್ಪಿಸಬಹುದು. ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿ, ನೊಂದವರು ಪೊಲೀಸ್ ಠಾಣೆಗೆ ದೂರು ನೀಡಲು ಬರುತ್ತಾರೆ. ಅವರಿಗೆ ಪರಿಹಾರ ಸೂಚಿಸಿದರೆ ನಮ್ಮ ಮೇಲೆ ವಿಶ್ವಾಸ ಹೆಚ್ಚುತ್ತದೆ ಎಂದರು.
ಸಿಬ್ಬಂದಿಗೆ ಸಹಾಯ:
ಎಸ್ಪಿ ಎಂ.ಎಚ್.ಅಕ್ಷಯ್ ಮಾತನಾಡಿ, ಕಳೆದ 2 ವರ್ಷದಲ್ಲಿ 382 ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ 5.98 ಲಕ್ಷ ರೂ., ಮೃತ ಪೊಲೀಸರ ಅಂತ್ಯ ಸಂಸ್ಕಾರಕ್ಕೆ 70 ಸಾವಿರ ರೂ. ಸಹಾಯ ಮಾಡಲಾಗಿದ್ದು ಈ ವರ್ಷ ಧ್ವಜ ದಿನಾಚರಣೆಯಲ್ಲಿ 11.15 ಲಕ್ಷ ರೂ. ಖಾತೆಗೆ ಜಮಾ ಆಗಿದೆ. ಎಕ್ಸ್ ಬಿಎಫ್ ನಿಧಿಗೆ 5.57 ಲಕ್ಷ, ಬಿಎಫ್ ನಿಧಿಗೆ 2.88 ಲಕ್ಷ, ಕೇಂದ್ರ ಬಿಎಫ್ ನಿಧಿಗೆ 2.78 ಲಕ್ಷ ನೀಡಿ 4.57 ಲಕ್ಷ ಹಿಂದಿನ ಎಫ್‍ಡಿ ಸೇರಿ 14 ಲಕ್ಷ ಖಾತೆಯಲ್ಲಿದೆ. ನಿವೃತ್ತ ಪೊಲೀಸರ ಯೋಗಕ್ಷೇಮ, ಮಕ್ಕಳ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಆರೋಗ್ಯ ತಪಾಸಣೆ-ರಕ್ತದಾನ ಶಿಬಿರ:
ಆರ್‍ಪಿಐ ಎಸ್.ವೈ.ಸಹದೇವ್ ನೇತೃತ್ವದಲ್ಲಿ ಪೊಲೀಸ್ ತಂಡ ಪಥ ಸಂಚಲನ ನಡೆಸಿತು. ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಇಲಾಖೆಗೆ ಸಹಕರಿಸಿದ ಚೆನ್ನಕೇಶವ, ಮುಜಾವರ್ ನಾಜೀರ್ ಅಹಮದ್, ಬೀರೂರು ಶಶಿಕಿರಣ್, ಹೆಗ್ಗಾರು ಕೊಡಿಗೆ ಅಬೂಬಕರ್, ಕಡೂರು ರಾಘವೇಂದ್ರ ಅವರನ್ನು ಗೌರವಿಸಲಾಯಿತು. ನಿವೃತ್ತ ಅಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಿದರು. ಡಿವೈಎಸ್‍ಪಿ ಡಿ.ಟಿ.ಪ್ರಭು, ವೃತ್ತ ನಿರೀಕ್ಷಕ ವಿನೋದ್ ಭಟ್ ಇದ್ದರು.