3ನೇ ದಿನವೂ ಮುಂದುವರಿದ ಮುಷ್ಕರ

IMG_7169
Published on

ಶಿವಮೊಗ್ಗ: ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಮೂರನೇ ದಿನವೂ ಜಿಲ್ಲೆಯಲ್ಲಿ ಮುಂದುವರಿಯಿತು. ಆದರೆ ಪೊಲೀಸ್ ಭದ್ರತೆಯಲ್ಲಿ ಭಾನುವಾರ ಬೆಳಗ್ಗೆ ಶಿವಮೊಗ್ಗ ವಿಭಾಗದಿಂದ ಐದು ಬಸ್​ಗಳು ಮಾತ್ರ ಹೊನ್ನಾಳ್ಳಿ, ಭದ್ರಾವತಿ ಮಾರ್ಗವಾಗಿ ಓಡಾಡಿವೆ.

ಸರ್ಕಾರದ ಸಂಧಾನ ಯತ್ನದ ನಡುವೆಯೂ ಪಟ್ಟು ಸಡಿಲಿಸದ ನೌಕರರು ಕರ್ತವ್ಯದಿಂದ ದೂರವೇ ಉಳಿದರು. 1,500ಕ್ಕೂ ಅಧಿಕ ಸಿಬ್ಬಂದಿ ಶಿವಮೊಗ್ಗ ವಿಭಾಗದ 4 ಡಿಪೋದಲ್ಲೇ ಕೆಲಸ ಮಾಡುತ್ತಿದ್ದಾರೆ. ಕಳೆದ 3 ದಿನದಿಂದ ಬೆರಳೆಣಿಕೆಯಷ್ಟೇ ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದು ಉಳಿದವರು ಡಿಪೋದತ್ತ ಮುಖ ಮಾಡುತ್ತಿಲ್ಲ.

ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಆರಂಭಗೊಳ್ಳದ ಕಾರಣ ಪ್ರಯಾಣಿಕರು ಎಂದಿನಂತೆ ಖಾಸಗಿ ವಾಹನಗಳ ಮೂಲಕ ಪ್ರಯಾಣ ಬೆಳೆಸಿದರು. ಕೊಂಚ ದುಬಾರಿಯಾದರೂ ಪ್ರಯಾಣ ಮುಂದುವರಿಸಿದರು. ಮುಷ್ಕರದ ಸಂಪೂರ್ಣ ಲಾಭ ಪಡೆಯುತ್ತಿರುವ ಖಾಸಗಿ ಬಸ್ ಮಾಲೀಕರು ಶಿವಮೊಗ್ಗದಿಂದ ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದರು.

ಬಸ್​ಗಳಿಗೆ ಪೊಲೀಸ್ ಬೆಂಗಾವಲು: ಮೈಸೂರು, ಬೆಂಗಳೂರು ಸೇರಿ ಹಲವೆಡೆ ಪೊಲೀಸ್ ಬೆಂಗಾವಲು ಪಡೆಯೊಂದಿಗೆ ಭಾನುವಾರ ಬೆಳಗ್ಗೆ ಸಂಚಾರ ಆರಂಭಿಸಿದ ಬೆನ್ನಲ್ಲೇ ಶಿವಮೊಗ್ಗ ವಿಭಾಗದಲ್ಲೂ ಬಸ್ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಶಿವಮೊಗ್ಗ ಡಿಪೋ, ಭದ್ರಾವತಿ ಡಿಪೋದಿಂದ ತಲಾ 2 ಬಸ್, ಹೊನ್ನಾಳಿ ಡಿಪೋದಿಂದ ಒಂದು ಬಸ್ ಬೆಂಗಾವಲಿನೊಂದಿಗೆ ಸಂಚಾರ ಆರಂಭಿಸಿತು. ಶಿವಮೊಗ್ಗ-ಭದ್ರಾವತಿ ನಡುವೆ ಬೆಂಗಾವಲು ವಾಹನ ಸಂಚರಿಸಿದರೆ, ಪ್ರತಿ ಬಸ್​ನಲ್ಲೂ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಭದ್ರಾವತಿಯಲ್ಲೂ ಮುಂದುವರಿದ ಹೋರಾಟ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಅಂಡರ್​ಬ್ರಿಡ್ಜ್ ಬಳಿಯ ಅಂಬೇಡ್ಕರ್ ವೃತ್ತದ ಬಳಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 3ನೇ ದಿನ ಪೂರೈಸಿತು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಚಂದ್ರೇಗೌಡ ಮಾತನಾಡಿ, ಕೆಎಸ್​ಆರ್​ಟಿಸಿ ನೌಕರರ ಬೇಡಿಕೆಗಳು ಸಂವಿಧಾನಬದ್ಧವಾಗಿವೆ. ಇಂದು ಸಾರಿಗೆ ನೌಕರರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ. ಸಾರಿಗೆ ಸಚಿವರು ಎಸ್ಮಾ ಜಾರಿ ಮಾಡುವ ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವರು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ಅದೇ ರೀತಿ ಸ್ಥಳೀಯವಾಗಿ ನಾವು ಕೂಡ ನಿಮಗೆ ಬೆಂಬಲ ನೀಡುತ್ತೇವೆ ಎಂದರು.

ಸಿಬ್ಬಂದಿ ಸಂತೋಷ್, ದೇವರಾಜ್, ಆನಂದ್, ರಮೇಶ್, ಜಗದೀಶ್, ಅಶೋಕ್, ಶರಣಗೌಡ ಬಿರಾದಾರ್, ಶ್ರೀಧರ್, ಸಂಗೀತಾ, ಶಕುಂತಳಾ, ಶಿಲ್ಪಾ, ರೇಣುಕಾ, ಚಂದ್ರಿಕಾ, ಜೆಡಿಎಸ್ ಪಕ್ಷದ ಅಜಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net