ತಲ್ಲೂರು ಗ್ರಾಮಸಭೆಗೆ ಪೊಲೀಸ್ ಭದ್ರತೆ!

gan (3)
Published on

ಕುಂದಾಪುರ: ಕಳೆದ ಬಾರಿ ನಡೆದ ಗ್ರಾಮಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಬೆದರಿಕೆ ಹಾಕಲಾಗಿತ್ತು ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮಸ್ಥೆಯೊಬ್ಬರ ಮನವಿಯಂತೆ ಬುಧವಾರ ತಲ್ಲೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ನಡೆದ ತಲ್ಲೂರು ಗ್ರಾಮಸಭೆಯು ಪೊಲೀಸ್ ಭದ್ರತೆಯಲ್ಲಿ ನಡೆಯಿತು. ಉಪ್ಪಿನಕುದ್ರು ಭಾಗದ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಗ್ರಾಮಸಭೆಯಲ್ಲಿ ಗ್ರಾಮದ ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದರು. ಸಭೆಯಲ್ಲಿದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಬೆದರಿಸಿದ್ದರು ಎಂದು ಆರೋಪಿಸಿದ ಮಹಿಳೆ, ಮುಂದಿನ ಗ್ರಾಮಸಭೆಯಲ್ಲಿ ಪ್ರಶ್ನೆ ಕೇಳಲು ಭದ್ರತೆ ಒದಗಿಸಬೇಕೆಂದು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ಭದ್ರತೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿ ಸಭೆಗೆ ಆಗಮಿಸಿದ್ದರು. ತಲ್ಲೂರು ಗ್ರಾಮ ಪಂಚಾಯಿತಿ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಗಿರೀಶ್ ಎಸ್.ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹಾಜರಿದ್ದ ಮೆಸ್ಕಾಂ ಅಧಿಕಾರಿಗಳು, ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತಾದ ಗ್ರಾಮಸ್ಥರ ದೂರಿಗೆ ಉತ್ತರಿಸಿದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾಲತಾ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.

ಸಿಬ್ಬಂದಿ ಕೊರತೆ

ತಲ್ಲೂರು ಸೇರಿದಂತೆ 5 ಗ್ರಾಮಗಳ ವ್ಯಾಪ್ತಿಯಲ್ಲಿ 52 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ದೂರು ಬಂದ ತಕ್ಷಣ ಸರಿಪಡಿಸಲು ಲಭ್ಯವಿರುವ ಸಿಬ್ಬಂದಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆದರೆ 30 ಸಿಬ್ಬಂದಿ ಇರಬೇಕಿದ್ದಲ್ಲಿ ಕೇವಲ 10 ಮಂದಿ ಮಾತ್ರವಿದ್ದಾರೆ. ಇದರಿಂದ ಕೆಲವೊಮ್ಮೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದು ತಲ್ಲೂರು ಮೆಸ್ಕಾಂ ಉಪವಿಭಾಗದ ಅಧಿಕಾರಿಗಳು ಹೇಳಿದರು. ಮೆಸ್ಕಾಂ ದೂರು ನೀಡಲು ಇರುವ 24*7 ಸಹಾಯವಾಣಿ ಕೇಂದ್ರಕ್ಕೆ ಸಿಬ್ಬಂದಿ ಇಲ್ಲದೆ ಕಾರ್ಯಾಚರಿಸುತ್ತಿಲ್ಲವೆಂದು ಗ್ರಾಮಸ್ಥರು ದೂರಿದರು. ಮನೆಗೆ ಸಂಬಂಧಪಟ್ಟ ದೇವಸ್ಥಾನ ಪ್ರತ್ಯೇಕ ಕಟ್ಟಡದಲ್ಲಿದ್ದರೆ ವಿದ್ಯುತ್ ಸಂಪರ್ಕಕ್ಕೆ 9/11 ಆಗಲೇಬೇಕು ಎಂದು ಪಿಡಿಒ ನಾಗರತ್ನಾ ತಿಳಿಸಿದರು. ಪಿಂಗಾಣಿಗುಡ್ಡೆ, ಉಪ್ಪಿನಕುದ್ರು, ಎಂಡಿ ರೆಸಿಡೆನ್ಸಿ ಬಳಿಯ ರಸ್ತೆಗೆ ಬೀದಿ ದೀಪ ಅಳವಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕಂಬಳಗದ್ದೆ, ಪಿಂಗಾಣಿಗುಡ್ಡೆ, ಉಪ್ಪಿನಕುದ್ರು ಸಹಿತ ಹಲವೆಡೆ ವಿದ್ಯುತ್ ಕಂಬಗಳು ವಾಲಿದ್ದು, ಸರಿಪಡಿಸುವಂತೆ ಆಗ್ರಹಿಸಿದರು.

ಸಾರ್ವಜನಿಕ ಶೌಚಗೃಹಕ್ಕೆ ಆಗ್ರಹ

ಗಂಗೊಳ್ಳಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಮಿತಾ ಮಾತನಾಡಿ, ತಲ್ಲೂರಿನಲ್ಲಿ ಎಎನ್‌ಎಂ ಹುದ್ದೆ ಖಾಲಿಯಿದ್ದು, ಸಿಎಚ್‌ಒ ಒಬ್ಬರೇ ಉಪ್ಪಿನಕುದ್ರು, ತಲ್ಲೂರು ಎರಡೂ ಕಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ನಡುವೆಯೂ ಉತ್ತಮ ಸೇವೆ ಕೊಡಲು ಶ್ರಮಿಸುತ್ತಿದ್ದೇವೆ ಎಂದರು. ತಲ್ಲೂರನ್ನು ದೂರದ ಗಂಗೊಳ್ಳಿ ಬದಲು ಹತ್ತಿರದ ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸುವಂತೆ, ಪೇಟೆಯಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಉಪ್ಪಿನಕುದ್ರು ಪ್ರೌಢಶಾಲೆಯಲ್ಲಿ ಕಾಯಂ ಶಿಕ್ಷಕರ ಕೊರತೆಯಿದೆ. ವರ್ಗಾವಣೆಯಾದ ಹುದ್ದೆ ಭರ್ತಿಯಾಗಿಲ್ಲ ಎಂದು ಪಾಲಕರೊಬ್ಬರು ಪ್ರಶ್ನಿಸಿದರು. ಶಿಕ್ಷಣ ಸಂಯೋಜಕ ಯೋಗೀಶ್ ಉತ್ತರಿಸಿ, ನಾಲ್ವರು ಅತಿಥಿ ಶಿಕ್ಷಕರನ್ನು ನೀಡಿದ್ದೇವೆ. ಆದರೆ ಗಣಿತ ಪಾಠ ಮಾಡಲು ಅರ್ಹ ಶಿಕ್ಷಕರು ಸಿಗುತ್ತಿಲ್ಲ ಎಂದರು. ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯಕುಮಾರ್ ತಲ್ಲೂರು, ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು, ಕಾರ್ಯದರ್ಶಿ ರತ್ನಾ, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ದನ ಸಾವನ್ನಪ್ಪಿದರೆ ಪರಿಹಾರ

ಪ್ರಾಕೃತಿಕ ವಿಕೋಪದಿಂದಾಗಿ ಒಂದು ದನ ಸಾವನ್ನಪ್ಪಿದರೆ ಸರ್ಕಾರದಿಂದ ಗರಿಷ್ಠ 32,500 ರೂ. ಸಿಗುತ್ತದೆ. ಆದರೆ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ಮಾಡಿಸುವುದು ಕಡ್ಡಾಯ. ಸಾವನ್ನಪ್ಪಿದ ಕೂಡಲೇ ಹೂತರೆ ಪರಿಹಾರ ಸಿಗುವುದಿಲ್ಲ. ವಿದ್ಯುತ್ ತಗುಲಿ, ಕಾಡು ಪ್ರಾಣಿಯಿಂದ ಸಾವನ್ನಪ್ಪಿದರೂ ಮೆಸ್ಕಾಂ, ಅರಣ್ಯ ಇಲಾಖೆಯಿಂದ ಪರಿಹಾರ ಸಿಗುತ್ತದೆ ಎಂದು ಹೆಮ್ಮಾಡಿ ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದರು.

ಅಪಾಯಕಾರಿ ಮರಗಳ ತೆರವಿಗೆ ಆಗ್ರಹ

ಕಳೆದ ಗ್ರಾಮಸಭೆಯಲ್ಲಿ 28 ಅಪಾಯಕಾರಿ ಮರಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿ ಪಟ್ಟಿ ಮಾಡಿ ಅರಣ್ಯ ಇಲಾಖೆಗೆ ಸಲ್ಲಿಸಿತ್ತು. ಅದರಲ್ಲಿ ತೆರವು ಮಾಡಿದ್ದು ಕೇವಲ 8ರಿಂದ 10 ಮರ ಮಾತ್ರ. ಬಾಕಿ ಮರಗಳು ಬಿದ್ದರೆ ಅದಕ್ಕೆ ಯಾರು ಹೊಣೆ? ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಉಪ್ಪಿನಕುದ್ರು ಭಾಗದಲ್ಲಿ ಅಪಾಯಕಾರಿ ತೆಂಗಿನ ಮರಗಳು ಮನೆಗೆ ಬೀಳುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net